ಸುರಿಯುತ್ತಿರುವ ಮಳೆಯ ನಡುವೆ ಕುಂದಾಪುರದಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಣೆ
ಕುಂದಾಪುರ: ಸುರಿಯುತ್ತಿರುವ ಮಳೆಯ ನಡುವೆ ಇಲ್ಲಿನ ಗಾಂಧಿ ಮೈದಾನದಲ್ಲಿ ಗುರುವಾರ ತಾಲ್ಲೂಕು ಪರವಾಗಿ ನಡೆದ 73ನೇ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮ ಜರುಗಿತು.
ಕುಂದಾಪುರ ಉಪವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ ಧ್ವಜಾರೋಹಣ ನಡೆಸಿ, ಸ್ವೀಕರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ದೇಶದ ಅಖಂಡತೆ, ಭದ್ರತೆ, ಸಮಗ್ರತೆ ಹಾಗೂ ಏಕತೆಯನ್ನು ಛಿದ್ರಗೊಳಿಸಲು ಪ್ರಯತ್ನಿಸುತ್ತಿರುವ ದೇಶ ವಿರೋಧಿ ಶಕ್ತಿಗಳ ವಿರುದ್ದ ನಾವುಗಳು ಸಂಘಟಿತ ಹೋರಾಟ ಮಾಡಬೇಕು. ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಕರಾವಳಿ ಭಾಗದ ಸ್ವಾತಂತ್ರ್ಯ ಸೇನಾನಿಗಳು ನೀಡಿದ ಹೋರಾಟ ನಮ್ಮ ನಿತ್ಯ ಸ್ಮರಣೀಯವಾಗಬೇಕು. ದೇಶ ಪ್ರಸ್ತುತ ಪ್ರಾಕೃತಿಕ ಸಂಕಷ್ಟದ ಸ್ಥಿತಿಯಲ್ಲಿ ಇದೆ. ಪ್ರವಾಹ ಹಾಗೂ ನೆರೆಗಳಿಂದಾಗಿ ಲಕ್ಷಾಂಯರ ಜನರು ನೋವಿನಲ್ಲಿ ಇದ್ದಾರೆ. ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗಲು, ನಮ್ಮ ಕೈಯಲ್ಲಾದಷ್ಟು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಾಯ ನೀಡಬೇಕು ಎಂದರು.
2018–19 ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದುಕೊಂಡ ಕುಂದಾಪುರ ವಲಯ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯ 5 ಮಂದಿಗೆ ಲ್ಯಾಪ್ ವಿತರಿಸಲಾಯಿತು.
ಪೊಲೀಸ್ ಉಪ ನಿರೀಕ್ಷಕ ಹರೀಶ್ ಆರ್ ನಾಯಕ್ ಅವರ ನೇತ್ರತ್ವದಲ್ಲಿ ಪೊಲೀಸ್, ಗ್ರಹ ರಕ್ಷಕ, ಭಾರತ್ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ ಘಟಕದ ತುಕಡಿಗಳ ಪಥ ಸಂಚಲನ ಹಾಗೂ ಗೌರವ ರಕ್ಷೆ ನೀಡಲು ಸಿದ್ದತೆ ಮಾಡಿಕೊಂಡಿದ್ದರೂ, ಮಳೆರಾಯನ ಅಡ್ಡಿಯಿಂದಾಗಿ ಗೌರವ ರಕ್ಷೆ ನೀಡಿ ಸಾಂಕೇತವಾಗಿ ಕಾರ್ಯಕ್ರಮವನ್ನು ಮುಗಿಸಲಾಯಿತು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ.ನಾಗಭೂಷಣ್ ಉಡುಪ, ಹಾಗೂ ಇತರರು ಇದ್ದರು.
ತಹಶೀಲ್ದಾರ್ ತಿಪ್ಪೇಸ್ವಾಮಿ ಸ್ವಾಗತಿಸಿದರು, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು, ವಲಯ ಶಿಕ್ಷಣಾಧಿಕಾರಿ ಅಶೋಕ ಕಾಮತ್ ವಂದಿಸಿದರು.