ಸುಳ್ಯದಲ್ಲಿ ಹೆಚ್ಚುತ್ತಿರುವ ಮೀಸಲಾತಿ ಬದಲಾವಣೆ ಕಾವು: ಜ.6 ರಂದು ಸಭೆ
ಸುಳ್ಯ: ಕಳೆದ ದಶಕಗಳಿಂದ ನಿರಂತರವಾಗಿ ಮೀಸಲು ವಿಧಾನಸಭಾ ಕ್ಷೇತ್ರದ ಮೀಸಲಾತಿಯನ್ನು ಬದಲಾಯಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಸಮಾನ ಮನಸ್ಕರ ಒಕ್ಕೂಟ ಮಲೆನಾಡು ಜಂಟಿ ಕ್ರಿಯಾ ಸಮಿತಿ ಅಡಿಯಲ್ಲಿ ಆರಂಭಿಸಿರುವ ಆಂದೋಲನದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಂದೋಲನ ಸಮಿತಿಯ ಮೊದಲ ಸಭೆ ಜನವರಿ 6 ರಂದು ಸಂಜೆ 3 ಗಂಟೆಗೆ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ನಡೆಯಲಿದೆ.
ಈ ಹಿಂದೆ ಬಹುತೇಕ ಎಲ್ಲ ಮೀಸಲು ಕ್ಷೇತ್ರಗಳ ಮೀಸಲಾತಿ ಬೇರೆ ಕ್ಷೇತ್ರಗಳಿಗೆ ವರ್ಗವಾದರೂ ಸುಳ್ಯದ ಪರಿಶಿಷ್ಟ ಜಾತಿ ಮೀಸಲಾತಿ ಖಾಯಂ ಆಗಿದ್ದು, ಇದು ಸಾಮಾಜಿಕ ನ್ಯಾಯದ ವಿರೋಧಿ ಮತ್ತು ಅವೈಜ್ಞಾನಿಕ ಎಂಬುವುದು ಹೋರಾಟಗಾರರ ಆರೋಪ. ಒಂದೇ ಕ್ಷೇತ್ರದಲ್ಲಿ ಮೀಸಲಾತಿ ಇರುವುದರಿಂದ ಅಲ್ಲಿನ ಬೇರೆ ಸಮೂದಾಯದ ಜನರಿಗೆ ಸಾಂವಿಧಾನಿಕವಾಗಿ ಸಿಗಬೇಕಾದ ರಾಜಕೀಯ ಅವಕಾಶವನ್ನು ಕಸಿದುಕೊಂಡಂತಾಗುತ್ತದೆ ಮತ್ತು ಬೇರೆ ಕ್ಷೇತ್ರದಲ್ಲಿರುವ ಪರಿಶಿಷ್ಟ ಸಮೂದಾಯ ಮೀಸಲಾತಿಯ ಪ್ರಯೋಜನದಿಂದ ವಂಚಿತರಾಗುತ್ತಾರೆ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸುಳ್ಯದ ಮೀಸಲಾತಿಯನ್ನು ಬದಲಾಯಿಸಲು ಸಮಿತಿ ಸಾಮಾಜಿಕ ಮತ್ತು ಕಾನೂನಾತ್ಮಕ ಹೋರಾಟ ನಡೆಸಲು ತೀರ್ಮಾನಿಸಿದೆ.
ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಮಟ್ಟದ ಜನಜಾಗೃತಿ, ಒಂದು ಲಕ್ಷ ಸಹಿ ಸಂಗ್ರಹ, ಚಿಂತನ ಕಮ್ಮಟ, ಚುನಾವಣಾ ಆಯೋಗಕ್ಕೆ ಬದಲಾವಣೆಯನ್ನು ಮನವರಿಕೆ ಮಾಡುವುದು, ಕಾನೂನು ಹೋರಾಟ ಮುಂತಾದ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ಕೈಗೊಳ್ಳಲಾಗಿದೆ. ಈ ಬಗ್ಗೆ ಮೊದಲ ಹಂತದ ಸಮಾಲೋಚನೆ ಸಭೆ ನಡೆದಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಸಮಿತಿಯ ಪದಾಧಿಕಾರಿಗಳು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟಕ್ಕೆ ಬೆಂಬಲ ದೊರೆಯುತ್ತಿದ್ದು, ಈ ಹೋರಾಟ ಮೀಸಲಾತಿಯ ವಿರುದ್ಧ ಅಲ್ಲ ಮೀಸಲಾತಿ ಬದಲಾವಣೆಗಾಗಿ ಎಂದು ಸ್ಪಷ್ಟಪಡಿಸಿದ್ದಾರೆ.
ಸಮಿತಿಯ ಸಂಚಾಲಕ ನ್ಯಾಯವಾದಿ ಪ್ರದೀಪ್ ಕುಮಾರ್ ಕೆ ಎಲ್, ಉದ್ಯಮಿ ಡಿ ಬಿ ಬಾಲಕೃಷ್ಣ, ಪ್ರವೀಣ್ ಮುಂಡೋಡಿ, ಅಶೋಕ್ ಎಡಮಲೆ, ಬಿ ಸಿ ವಸಂತ, ರಶೀದ್ ಜಟ್ಟಿಪಳ್ಳ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.