ಸುಳ್ಯ: ಔಷಧಕ್ಕಾಗಿ 15 ಕಿ.ಮೀ. ನಡೆದು ಬಂದ ವೃದ್ದೆ!
ಸುಳ್ಯ: ಕೋವಿಡ್-19 ಕಾರಣ ಲಾಕ್ ಡೌನ್ ಇರುವುದರಿಂದ ಬಹಳ ಜನರು ಪರಿತಪಿಸುತ್ತಿದ್ದಾರೆ. ವಾಹನ ಸಿಗದೆ ಪರಿತಪಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೊಲ್ಲದೊಗ್ರದ ವೃದೆಯೋರ್ವರು ಔಷಧಕ್ಕಾಗಿ 15 ಕಿ.ಮೀ ದೂರದ ಗುತ್ತಿಗಾರಿಗೆ ನಡೆದು ಬಂದ ಘಟನೆ ನಡೆದಿದೆ.
ಕೊಲ್ಲಮೊಗ್ರದ ವೃದ್ಧೆಯೊಬ್ಬರು ಔಷಧಕ್ಕಾಗಿ ವಾಹನವಿಲ್ಲದ ಕಾರಣ 15 ಕಿ.ಮೀ. ದೂರದ ಗುತ್ತಿಗಾರಿಗೆ ನಡೆದಾಡಿಕೊಂಡೇ ಸಾಗಿದ್ದರೆನ್ನಲಾಗಿದೆ. ತುಂಬಾ ನಿತ್ರಾಣ ಸ್ಥಿತಿಯಲ್ಲಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ವಿಷಯ ತಿಳಿದುಬಂದಿದೆ.
ಬಳಿಕ ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರ್, ಪಿಡಿಒ ಶ್ಯಾಮಪ್ರಸಾದ್ ಹಾಗೂ ತುರ್ತು ಕಾರ್ಯಪಡೆ ಸದಸ್ಯರು ಸ್ಥಳಕ್ಕೆ ಆಗಮಿಸಿ ವೃದ್ಧೆಗೆ ಸೂಕ್ತ ಔಷಧದ ವ್ಯವಸ್ಥೆ ಮಾಡಿ ಖಾಸಗಿ ವಾಹನದಲ್ಲಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.