Home Mangalorean News Kannada News ಸೂಕ್ಷ್ಮತೆಯ ಕೊರತೆಯಿಂದ ಕಾವ್ಯಕ್ಕೆ ಸೋಲು:ಎಂ.ಎನ್.ವ್ಯಾಸರಾವ್

ಸೂಕ್ಷ್ಮತೆಯ ಕೊರತೆಯಿಂದ ಕಾವ್ಯಕ್ಕೆ ಸೋಲು:ಎಂ.ಎನ್.ವ್ಯಾಸರಾವ್

Spread the love

ಸೂಕ್ಷ್ಮತೆಯ ಕೊರತೆಯಿಂದ ಕಾವ್ಯಕ್ಕೆ ಸೋಲು:ಎಂ.ಎನ್.ವ್ಯಾಸರಾವ್

 

ವರದಿ: ಶಶಾಂಕ್ ಬಜೆ, ಚಿತ್ರಗಳು: ಚೈತನ್ಯ ಕುಡಿನಲ್ಲಿ

ಧರ್ಮಸ್ಥಳ: ಸೂಕ್ಷ್ಮ ಗ್ರಹಿಕೆ, ಪರಂಪರೆಯ ಅವಲೋಕನ ಮತ್ತು ವಾಸ್ತವದ ಸಮರ್ಥ ಬಿಂಬಿಸುವಿಕೆಯ ಕೊರತೆಯ ಕಾರಣದಿಂದ ಇಂದಿನ ಕಾವ್ಯ ಸೋಲುತ್ತಿದೆ ಎಂದು ಖ್ಯಾತ ಸಾಹಿತಿ ಎಂ.ಎನ್.ವ್ಯಾಸರಾವ್ ಅಭಿಪ್ರಾಯಪಟ್ಟರು.

ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ನಡೆದ  84ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕಾವ್ಯವು ಸಾಹಿತ್ಯಕ ಸತ್ವವನ್ನು ಕಳಚಿಕೊಂಡು ಕೇವಲ ಜನಪ್ರಿಯತೆಯ ಹಂಬಲದೊಂದಿಗೆ ಸೃಷ್ಟಿಯಾಗುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

dharmastala-laksha-deepotsava-vyasarao-20161130

ಸಾಲುಗಳನ್ನು ಕೆಟ್ಟದಾಗಿ ತುಂಡರಿಸಿದ ಮಾತ್ರಕ್ಕೆ ಕಾವ್ಯವಾಗುವುದಿಲ್ಲ. ಇಂದಿನ ಪೀಳಿಗೆಯ ಕಾವ್ಯದಲ್ಲಿ ಸ್ವಗತ ಸಂಯಮ ಇಲ್ಲವಾಗಿದೆ. ಕವಿತೆಗಳು ಸಂಭಾಷಣೆ, ಭಾಷಣಗಳನ್ನು ಒಳಗೊಳ್ಳುತ್ತಿವೆ. ಹೀಗಾದರೆ ಕಾವ್ಯದ ಸತ್ವ ಉಳಿಯುವುದಿಲ್ಲ. ಸ್ವಗತದ ಸಂಯಮದಲ್ಲಿ ಕವಿತೆ ಪಕ್ವವಾಗಬೇಕು. ಆಗಲೇ ಅದು ಪ್ರಭಾವಿಸುತ್ತದೆ ಎಂದು ಹೇಳಿದರು.

ಲೋಕಾನುಭವವನ್ನು ಕಾವ್ಯಾನುಭವವಾಗಿ ಬದಲಾಯಿಸುವ ಶಕ್ತಿ ಕವಿಯದ್ದು. ಜನರ ಜೀವನಕ್ಕೆ ಸಾಹಿತ್ಯ ಹತ್ತಿರವಾದದ್ದು. ಇದನ್ನು ಅಕ್ಷರ ರೂಪಕ್ಕೆ ಇಳಿಸಿ ಮೆರುಗುನೀಡುವ ಕೆಲಸ ಸಾಹಿತಿಯದ್ದು. ಸ್ವಪ್ರಚಾರಕ್ಕಾಗಿ ಸಾಹಿತ್ಯವನ್ನು ಕೆಡಿಸುವ ಕೆಲಸ ಆಗಬಾರದು ಎಂದರು.

ಕಾಲದ ಗತಿಗೆ ತಕ್ಕಂತೆ ಸಾಹಿತ್ಯ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಟ್ಟಿದೆ. ಆದರೆ ಎಲ್ಲಾ ಕಾಲದಲ್ಲೂ ಸಾಹಿತ್ಯವು ಆದರ್ಶ ಮತ್ತು ಮಾನವೀಯತೆಯನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ದಕ್ಷಿಣಕನ್ನಡ ತುಳು ಭಾಷೆಯೊಂದಿಗೆ ಕನ್ನಡವನ್ನು ಬೆಳೆಸಿದೆ. ಕನ್ನಡ ಸಾಹಿತ್ಯದ ಮೇಲೆ ಇಲ್ಲಿನವರ ಕೊಡುಗೆ ಬಹಳಷ್ಟಿದೆ. ಮುಂದೆಯೂ ತುಳು ಭಾಷೆಯೊಂದಿಗೆ ಕನ್ನಡವನ್ನು ಬೆಳೆಸುವ ಕೆಲಸ ನಡೆಯಲಿ ಎಂಬುದು ನನ್ನ ಮನವಿ ಎಂದರು

‘ಸಂಕುಚಿತ ಸಂಕೋಲೆಗಳಿಂದ ಸಾಹಿತ್ಯ ಮುಕ್ತವಾಗಲಿ’

ವರದಿ: ಶಿವಮಲ್ಲಯ್ಯ ಬನ್ನಿಗನೂರು, ಚಿತ್ರ: ಚೈತನ್ಯಕುಡಿನಲ್ಲಿ

ಧರ್ಮಸ್ಥಳ; ಜಾತಿಯ ಸಂಕುಚಿತ ಸಂಕೋಲೆಗಳಿಂದ ಸಾಹಿತ್ಯ ಮುಕ್ತವಾಗಬೇಕಿದೆ ಎಂದು ವಿಜಯವಾಣಿ ಪತ್ರಿಕೆಯ ಸಂಪಾದಕ ಹರಿಪ್ರಕಾಶ ಕೋಣೆಮನೆ ಅಭಿಪ್ರಾಯಪಟ್ಟರು.

ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 84ನೇ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಮಹಾಭಾರತ, ರಾಮಾಯಣ, ವಚನ, ದಾಸ ಸಾಹಿತ್ಯ ಲೋಕದ ಡೊಂಕುಗಳನ್ನು ಗುರುತಿಸಿದ್ದವು. ಆ ಮೂಲಕ ಸಾಮಾಜಿಕ ಕಳಕಳಿ ಅಭಿವ್ಯಕ್ತಿಸಿದ್ದವು. ಈಗ ಮಹಾಕಾವ್ಯಗಳನ್ನು ಸಂಕುಚಿತವಾಗಿ ಗ್ರಹಿಸಿ ಅರ್ಥೈಸಲಾಗುತ್ತಿರುವುದು ಖೇದಕರ ಎಂದರು.

ಯುದ್ದದ ಪರಿಣಾಮವಾಗಿ ಜಗತ್ತಿನ ಹಲವು ದೇಶಗಳು ನಾಶವಾಗಿವೆ. ಭಾರತದ ಮೇಲೆ ನಿರಂತರ ದಾಳಿ ನಡೆದರೂ ದೇಶದ ಸಂಸ್ಕøತಿ, ಕಲೆ, ಆಧ್ಯಾತ್ಮಿಕ ಶಕ್ತಿ ಗಟ್ಟಿಯಾಗಿ ಉಳಿದಿದೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರೂ ನಿರ್ವಹಿಸಬೇಕಿದೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ 84 ವರ್ಷಗಳಿಂದ  ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ ಸೇವೆಗೈಯ್ಯುತ್ತಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣ ಯೋಜನೆಗಳು ಸರಕಾರದ ಆಡಳಿತಕ್ಕೆ ಮಾದರಿಯಾಗಿವೆ. ಸಾಮಾಜಿಕ ಕಳಕಳಿ ಹಾಗೂ ಗ್ರಾಮೀಣ ಜನರ ಸ್ವಾವಲಂಬನೆಗೆ ವಿಶೇಷವಾದ ಒತ್ತು ನೀಡಿ ಕ್ರಾಂತಿಗೆ ಪೂರಕವಾಗಿವೆ ಎಂದರು.

‘ಸವಿಜೀವನಂ ಕಲಾಕ್ಷೇತ್ರ’ ತಂಡದಿಂದ ಜನಮನರಂಜನೆ

ವರದಿ:  ವಿನಿಷ ಉಜಿರೆ, ಚಿತ್ರಗಳು: ಕೃಷ್ಣಪ್ರಶಾಂತ್

ಧರ್ಮಸ್ಥಳ : ಆ ನೃತ್ಯಪ್ರದರ್ಶನ ಜನಮನಸೆಳೆಯುವ ಹಾಗೆ ಬಿಂಬಿತವಾಗುತ್ತಿತ್ತು. ಜನಪದೀಯ ರೂಪದೊಂದಿಗೆ ಆಕರ್ಷಿಸುತ್ತಿತ್ತು. ಧರ್ಮಸ್ಥಳದ ಶ್ರೀಕ್ಷೇತ್ರ ಲಕ್ಷದೀಪೋತ್ಸವಕ್ಕೆ ಜೀವಕಳೆ ತುಂಬಿತ್ತು. ಮಂಗಳೂರು ಕೊಡಿಯಾಲ್‍ಬೈಲ್ ಸವಿಜೀವನಂ ನೃತ್ಯ ಕಲಾಕ್ಷೇತ್ರ ತಂಡದ ನೃತ್ಯ ಆ ಮೂಲಕ ಸದಭಿರುಚಿಯ ರಂಜನೆಯನ್ನು ದಾಟಿಸಿತ್ತು.

ಸವಿಜೀವನಂ ನೃತ್ಯ ಕಲಾಕ್ಷೇತ್ರ ಪ್ರಸ್ತುತಪಡಿಸಿದ ನೃತ್ಯದ ಭಂಗಿಗಳು ವಿಭಿನ್ನವಾಗಿದ್ದವು. ಕಥಾ ಪ್ರಸ್ತುತಿ ಕಲಾಸಕ್ತಿಯನ್ನು  ಇಮ್ಮಡಿಗೊಳಿಸಿತ್ತು. ಪುರಾಣದ ಕಥೆಯ ಎಳೆಯೊಂದನ್ನು ತಾಯಿ ಮಗುವಿಗೆ ಪರಿಚಯಿಸುವ ನಿರೂಪಣಾ ಕ್ರಮದೊಂದಿಗೆ ನೃತ್ಯ ಆರಂಭಗೊಂಡಿತು. ಪುಷ್ಪಾಂಜಲಿಯೊಂದಿಗೆ ನಟರಾಜನಿಗೆ ಮೊದಲುಗೊಂಡು ನಮಿಸಿ, ನೃತ್ಯವೂ ‘ಬ್ರಹ್ಮಸುರರ್ಜಿತ ಲಿಂಗಂ’ ಶಿವಸ್ತುತಿಯೊಂದಿಗೆ ನೃತ್ಯ ಪ್ರದರ್ಶನ ಕೊನೆಗೊಂಡಿತು.

ನೃತ್ಯದಲ್ಲಿ ಹರಿಸ್ತುತಿ ಇದ್ದೇ ಇರುತ್ತದೆ. ಪುರಂದರದಾಸರ ಕೀರ್ತನೆಯಾದ ‘ಹರಿನಾಮಸ್ಮರಣೆಯ ಮಾಡಿರೋ’ ಎಂಬ ಹಾಡಿನೊಂದಿಗಿನ ನೃತ್ಯದಲ್ಲಿ ಹರಿಯ ನಾನಾ ಅವತಾರಗಳ ವೈಶಿಷ್ಟ್ಯತೆ ಬಿಂಬಿತವಾಯಿತು. ನವರಸಗಳಲ್ಲಿ ಒಂದಾದ ರೌದ್ರ ಅಭಿನಯ ವಿಶೇಷವೆನಿಸಿತು.

‘ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ’ ಎಂಬ ಭಕ್ತಿಗೀತೆ ಆಧಾರಿತ ನೃತ್ಯದ ಮೂಲಕ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ಪವಾಡಗಳನ್ನು ಕಾಣಿಸಲಾಯಿತು. ಆಂಧ್ರಪ್ರದೇಶದ ಶಾಸ್ರ್ತೀಯ ನೃತ್ಯ ಪ್ರಕಾರವಾದ ಕೂಚಿಪುಡಿಯಲ್ಲಿ ಕೃಷ್ಣನ ಬಾಲಲೀಲೆಗಳನ್ನು ಪರಿಚರಿಸಲಾಯಿತು.

ಜನಪದ ಮೂಲಗಳಲ್ಲಿ ಪ್ರಸಿದ್ಧವಾದ ಪುಣ್ಯಕೋಟಿ ಹಾಡಿನೊಂದಿಗಿನ ಕಥಾರೂಪಕದ ಪ್ರಸ್ತುತಿ ಸ್ಮರಣೀಯವೆನ್ನಿಸಿತು.

‘ಆಡೋಣ ಬನ್ನಿ ಕಣ್ಣ ಮುಚ್ಚಾಲೆ’ ಜನಪದ ಗೀತೆಗೆ ತಂಡದ ಬಾಲ ಕಲಾವಿದೆಯರ ನೃತ್ಯ ಅದ್ಭುತವಾಗಿತ್ತು. ಮೋಹಿನಿ ಅಟ್ಟಂ, ಕೋಲಾಟ, ‘ಹರಿಹರಸುತಂ’ ಹಾಡಿನೊಂದಿಗಿನ ಅಯ್ಯಪ್ಪನ ಸ್ಮರಣೆ ನೆರೆದಿರುವ ವೀಕ್ಷಕರನ್ನು ಗಮನಸೆದವು.

ಧರ್ಮ ಮತ್ತು ಸಮಾಜ ಒಂದನ್ನೊಂದು ಪೊರೆಯಲಿ : ವಸುಧೇಂದ್ರ

ವರದಿ: ಯತಿರಾಜ್ ಬ್ಯಾಲಹಳ್ಳಿ, ಚಿತ್ರಗಳು: ಚೈತನ್ಯ ಕುಡಿನಲ್ಲಿ

ಧರ್ಮಸ್ಥಳ: ಧರ್ಮ ಸಮಾಜವನ್ನು ಕಾಪಾಡಿದರೆ ಸಮಾಜ ಧರ್ಮವನ್ನು ಕಾಪಾಡುತ್ತದೆ. ಮನುಷ್ಯತ್ವವೇ ಧರ್ಮದ ಜೀವಾಳ ಎಂದು ಕತೆಗಾರ ವಸುಧೇಂದ್ರ ಹೇಳಿದರು.

ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ನಡೆದ 84ನೇ ಸಾಹಿತ್ಯ ಸಮ್ಮೇಳನದ ವಿಶೇಷ ಉಪನ್ಯಾಸಕರಾಗಿಅವರು ಮಾತನಾಡಿದರು.

ವೇದವ್ಯಾಸರು ಮಹಾಭಾರತದಲ್ಲಿ ಹೇಳುವ ತಾತ್ವಿಕತೆ ಮಹತ್ವಪೂರ್ಣವಾದದ್ದು. `ಹುಲಿಗೆ ಕಾಡೇ ರಕ್ಷೆಯಾದರೆ ಕಾಡಿಗೆ ಹುಲಿಯೇ ರಕ್ಷೆ’ ಎನ್ನುವ ಶ್ಲೋಕವನ್ನು ರಚಿಸಿದ್ದಾರೆ. ಅಂದರೆ ಕಾಡು ಮತ್ತು ಹುಲಿ ಒಂದನ್ನೊಂದು ಪೋಷಿಸುತ್ತಿವೆ. ಹಾಗೆಯೇ ಧರ್ಮ ಮತ್ತು ಸಮಾಜ ಒಂದನ್ನೊಂದು ರಕ್ಷಿಸಿದಾಗ ಸಮಾಜ ಹಸನಾಗಿರುತ್ತದೆ ಎಂದು ಅವರು ತಿಳಿಸಿದರು.

ಸಮಾಜದ ಅವಗಣನೆಗೆ ಒಳಗಾದ ಧರ್ಮ ಅರ್ಥ ಕಳೆದುಕೊಳ್ಳುತ್ತದೆ. ಆದರೆ ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಮಾಜಮುಖಿ ಧರ್ಮದ ದೃಷ್ಟಿಕೋನವನ್ನು ಹೊಂದಿದ್ದರು ಎಂದು ಮಾಸ್ತಿ ಸಾಹಿತ್ಯದಲ್ಲಿನ ಧಾರ್ಮಿಕಚಿಂತನೆ ಕುರಿತು ಅವರು ವಿವರಿಸಿದರು.

 ಮಾಸ್ತಿಯವರ ಧರ್ಮ ಪರಿಕಲ್ಪನೆ ಜೀವಸ್ಪರ್ಶಿಯಾದದ್ದು. ಧರ್ಮ ಮಾನವೀಯತೆಗೆ ತೊಡಕಾಗಿ ಸಂಕೀರ್ಣವಾದಾಗ, ಧರ್ಮದ ಪರಿಭಾಷೆಯನ್ನು ಬದಲಾಯಿಸಿ ಸರಳಗೊಳಿಸುವ ಕ್ರಿಯೆ ಅವರ ಸಾಹಿತ್ಯದಲ್ಲಿ ನಡೆದಿದೆ. ಮನುಷ್ಯಪರ ಚಿಂತನೆಗೆ ವಿರುದ್ಧವಾದ ಅಂಶಗಳು ಸಂಸ್ಕøತಿಯಲ್ಲಿ ನುಸುಳಿದಾಗ ಅದನ್ನು ಬದಲಾಯಿಸಿಕೊಳ್ಳುವುದಕ್ಕೆ ಅವರ ಸಾಹಿತ್ಯ ಕರೆ ನೀಡಿದೆ ಎಂಬುದಕ್ಕೆ ಮಾಸ್ತಿ ಸಾಹಿತ್ಯದಲ್ಲಿನ ಹಲವು ಅಂಶಗಳನ್ನು ಉದಾಹರಿಸಿದರು.

`ಮಾಸ್ತಿ ಕನ್ನಡದ ಆಸ್ತಿ’ ಎಂದುಕರೆಯುತ್ತಾರೆ. ಆದರೆ `ಆಸ್ತಿ’ ಎಂದುಕರೆಯುವುದಕ್ಕಿಂತ, `ಮಾಸ್ತಿ ಕನ್ನಡದ ಬುನಾದಿ’ ಎಂದು ಕರೆಯುವುದು ಸೂಕ್ತ. ಆಸ್ತಿ ಕರಗಿ ಹೋಗುವ ಗುಣವನ್ನು ಪಡೆದುಕೊಂಡಿದೆ. ಮಾಸ್ತಿ ಎಂದಿಗೂ ಕರಗಿಹೋಗುವವರಲ್ಲ ಎಂದರು.

ಕುವೆಂಪು ಅವರಿಗೆ ಮಲೆನಾಡು ಸಾಹಿತ್ಯ ಕೇಂದ್ರಬಿಂದುವಾದರೆ, ಶಿವರಾಮ ಕಾರಂತರಿಗೆ ಕಡಲು ಪ್ರೇರಣೆಯಾಗಿತ್ತು. ಬೇಂದ್ರೆಯವರಿಗೆ ಧಾರಾವಾಡವೇ ಮುಖ್ಯ ಭೂಮಿಕೆಯಾಗಿತ್ತು. ಆದರೆ ಮಾಸ್ತಿಯವರಿಗೆ ಇಂತಹ ನಿರ್ದಿಷ್ಟ ನೆಲೆಯಾವುದೂ ಇರಲಿಲ್ಲ. ಯಾವುದೇ ಸೀಮೆಗಳಿಲ್ಲದ ಅವರು ಎಲ್ಲೆಡೆ ವಿಹರಿಸಿದರು. ಕನ್ನಡ ಸಾಹಿತ್ಯದಲ್ಲಿ ಕುವೆಂಪು, ಕಾರಂತ, ಮಾಸ್ತಿ ಮತ್ತು ಬೇಂದ್ರೆ ಚತುರ್ಮುಖ ಬ್ರಹ್ಮನ ನಾಲ್ಕು ಮುಖಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು.

ನಡೆ-ನುಡಿಯ ಪಾರದರ್ಶಕ ಪ್ರಜ್ಞೆ ಸಾಹಿತಿಗಿರಲಿ: ಮನು ಬಳಿಗಾರ್

ವರದಿ: ಅಂಜಲಿ ಕೆ.ಎಂ, ಚಿತ್ರಗಳು: ಚೈತನ್ಯ ಕುಡನಲ್ಲಿ

ಧರ್ಮಸ್ಥಳ: ಸಾಹಿತಿ ಬರೆದಂತೆ ನಡೆಯಬೇಕು ಎಂದು ಜನ ಅಪೇಕ್ಷಿಸುತ್ತಾರೆ. ಬದುಕು ಬರಹದ ನಡುವೆ ಯಾವುದೇ ವ್ಯತ್ಯಾಸವಿರಬಾರದು. ಸಾಹಿತಿ ನಡೆ-ನುಡಿಗಳೆರಡನ್ನೂ ಒಂದಾಗಿಸಿಕೊಂಡ ಪ್ರಜ್ಞೆಯೊಂದಿಗಿರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ಹೇಳಿದರು.

ಸೋಮವಾರ  ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ಅಮೃತವರ್ಷಿಣಿ ಸಭಾಭವನದಲ್ಲಿ  ನಡೆದ 84ನೇ ಸಾಹಿತ್ಯ ಸಮ್ಮೇಳನ ಉದ್ಫಾಟಿಸಿ ಅವರು  ಮಾತನಾಡಿದರು.

ಇಂಗ್ಲಿಷ್ ಸೇರಿದಂತೆ ಅನ್ಯಭಾಷೆಗಳ ಪ್ರಭಾವದ ನಡುವೆಯೂ ಕನ್ನಡ ಸಾಹಿತ್ಯ, ಸಂಸ್ಕ್ರತಿ, ಭಾಷೆ ಯಾವುದೇ ಅಡೆತಡೆಯಿಲ್ಲದೇ ಬೆಳೆದು ಬಂದಿದೆ. ನಾಡು-ನುಡಿಯ ಬೆಳವಣಿಗೆಗೆ ಧರ್ಮಸ್ಥಳದ ಕೊಡುಗೆ ಅಪಾರ. ಸ್ವಚ್ಚತೆ, ಶಿಸ್ತು, ಸಂಯಮ ಆಹಾರ-ವಿಹಾರಕ್ಕೆ ಧರ್ಮಸ್ಥಳವೆಂಬ ಪುಣ್ಯಕ್ಷೇತ್ರ ಮಾದರಿ ಎಂದು ತಿಳಿಸಿದರು.

ಜನಪದ ಸಂಸ್ಕ್ರತಿ ಅಳಿವಿನಂಚಿನಲ್ಲಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಧಾರ್ಮಿಕ ಕ್ಷೇತ್ರಗಳ, ಸರಕಾರ,ಸಂಘ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ. ಬದುಕು ಹಸನಾದಂತೆ ಮುಂದಿನ ಯುವ ಪೀಳಿಗೆಯ ಬದುಕಿನ ಕುರಿತು ಚಿಂತನ-ಮಂಥನ ನಡೆಯಬೇಕಿದೆ. ಇಂಥ ಸಾಹಿತ್ಯ ಸಮ್ಮೇಳನಗಳು ಈ ನಿಟ್ಟಿನಲ್ಲಿ ಮಾದರಿಯಾಗುತ್ತವೆ ಎಂದು ಹೇಳಿದರು.

ಅನ್ನದಾನ, ವಿದ್ಯಾದಾನ ಮೊದಲಾದವುಗಳಿಗೆ ಧರ್ಮಸ್ಥಳ ಶ್ರೀಕ್ಷೇತ್ರ ಮಾದರಿ. ಧರ್ಮಾಧಿಕಾರಿಯವರ ದೂರದೃಷ್ಟಿಯ ಕಾರಣಕ್ಕಾಗಿಯೇ ಈ ಕ್ಷೇತ್ರ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿ,ಸಾಹಿತಿ, ಎಂ.ಎನ್ ವ್ಯಾಸರಾವ್ ಮಾತನಾಡಿ, ಲೋಕಾನುಭವವನ್ನು ಕಾವ್ಯಾನುಭವವಾಗಿ ವ್ಯಕ್ತಪಡಿಸುವ ಕಲೆ ಕವಿಗಿದೆ. ಅಕ್ಷರದ ಸೊಬಗನ್ನು ಸಾಹಿತ್ಯಕ್ಕೆ ತರುವುದೇ ಕವಿಯ ಕೆಲಸ ಎಂದು ನುಡಿದರು.

ದಕ್ಷಣ ಕನ್ನಡದ ಜನತೆ ಹೊರರಾಜ್ಯದಲ್ಲಿದ್ದರೂ ಕೂಡಾ ತಮ್ಮ ಮಕ್ಕಳಿಗೆ ಮಾತೃಭಾಷೆಯನ್ನು ಮಾತ್ರ ಕಲಿಸುವುದಲ್ಲದೇ ಕನ್ನಡವನ್ನೂ ಕಲಿಸುವ ಕೆಲಸವನ್ನು ಮಾಡಬೇಕು. ಈ ನಿಟ್ಟಿನಲ್ಲಿ ತಂದೆ ತಾಯಂದಿರ ಪಾಲು ಬಹುದೊಡ್ಡದು ಎಂದು ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡದ ಸಾಂಸ್ಕ್ರತಿಕ ರಾಜಧಾನಿ ಧರ್ಮಸ್ಥಳ. ದೇಶದ ಪ್ರತಿಯೊಂದು ಧರ್ಮವೂ ಇಲ್ಲಿಗೆ ಸೇರುತ್ತದೆ. ಜಾತಿ,ಧರ್ಮ, ಭೇದ ಭಾವವಿಲ್ಲದೇ ಎಲ್ಲರಿಗೂ ಮುಕ್ತ ಅವಕಾಶವನ್ನು ಕಲ್ಪಿಸಿದೆ ಎಂದರು.

ವಿಜಯವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ, ಬರಹಗಾರ ವಸುಧೇಂದ್ರ, ಸುಳ್ಯದ ಸ್ತ್ರೀ ರೋಗ ತಜ್ಞೆ ಡಾ.ವೀಣಾ ವಿಶೇಷ ಉಪನ್ಯಾಸ ಈ ಸಂದರ್ಭದಲ್ಲಿ ನೀಡಿದರು.

ವೇದಿಕೆಯಲ್ಲಿ ಡಿ.ಹರ್ಷೇಂದ್ರ ಕುಮಾರ್, ಪ್ರೊ.ಎಸ್ ಪ್ರಭಾಕರ್ ಉಪಸ್ಥಿತರಿದ್ದರು. ಡಾ. ಡಿ ವೀರೇಂದ್ರ ಹೆಗಡೆ ಸಮ್ಮೇಳನದ ಉದ್ಘಾಟಕರು ಮತ್ತು ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು. ಎಂ.ರಾಮಚಂದ್ರ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು. ಅನನ್ಯಾ ಭಟ್ ಹಾಗೂ ಸುಬ್ರಮಣ್ಯ ಉಜಿರೆ ಅವರು ವ್ಯಾಸರಾವ್ ರಚಿಸಿದ ಎರಡು ಗೀತೆಗಳನ್ನು ಹಾಡಿದರು.

 

‘ಸಬ್ ಕೋ ಶಾಂತಿ’ ಜೈನಧರ್ಮದ ಆಶಯ – ಜಯಕುಮಾರ್ ಎನ್. ಉಪಾಧ್ಯ

ವರದಿ: ಶಿವಮಲ್ಲಯ್ಯ ಬನ್ನಿಗನೂರು

ಧರ್ಮಸ್ಥಳ: ವಿಶ್ವಕ್ಕೆ ಜೈನಧರ್ಮವು ಸಮನ್ವಯತೆಯನ್ನು ಸಾರಿದೆ ಎಂದು ನವದೆಹಲಿಯ ಶ್ರೀ ಲಾಲ್‍ಬಹುದ್ದೂರು ಶಾಸ್ತ್ರಿ ರಾಷ್ಟ್ರೀಯ ಸಂಸ್ಕøತ ವಿದ್ಯಾಪೀಠದ ಪ್ರಾಕೃತ ವಿಭಾಗದ ಮುಖ್ಯಸ್ಥರಾದ ಡಾ. ಜಯಕುಮಾರ್ ಎನ್. ಉಪಾಧ್ಯ ನುಡಿದರು.

ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಭಾನುವಾರ ನಡೆದ ‘ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ, ‘ಜೈನಧರ್ಮದಲ್ಲಿ ಸಮನ್ವಯ’ ಎಂಬ ವಿಷಯದ ಕುರಿತು ಮಾತನಾಡಿದರು. ಜೈನ ಪರಂಪರೆಯು ವಿಶ್ವಕ್ಕೆ ಶಾಂತಿ, ಸಹಿಷ್ಣುತೆಯನ್ನು ನೀಡಿದೆ. ಗಾಂಧಿ, ತಿಲಕ್, ನೆಹರು ಮುಂತಾದವರು ಜೈನ ಧರ್ಮದ ಸಿದ್ದಾಂತಗಳನ್ನು ಹಾಗೂ ಮಹಾವೀರನ ವಿಚಾರಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದರು. ದೇಶದಲ್ಲಿ ಬಹುಧರ್ಮೀಯ ಸಹಿಷ್ಣುತೆ ಸಾಧಿಸಲು ಈ ಹಾದಿಯಲ್ಲಿ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಹಾವೀರ ಹಾಗೂ ಉಳಿದ ತೀರ್ಥಂಕರರ್ಯಾರೂ ಹುಟ್ಟುತ್ತ ಜೈನಧರ್ಮಿಗಳಾಗಿರಲಿಲ್ಲ, ನಂತರದಲ್ಲಿ  ಅವರು  ಜೈನ ಧರ್ಮದವರಾಗಿ ಶಾಂತಿ, ಅಹಿಂಸೆಯ ಸಂದೇಶಗಳನ್ನು ಸಾರಿದರು.

ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ,  ನಿವೃತ್ತ ನ್ಯಾಯಾಮೂರ್ತಿ ವಿ. ಗೋಪಾಲಗೌಡ,  ಜಗದ್ಗುರು ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮಿಗಳು, ರೆವೆರೆಂಡ್ ಫಾಧರ್ ಪ್ರಶಾಂತ್ ವೆಸ್ಲಿ. ಡಿಸೋಜಾ, ಯಕ್ಷಗಾನ ಕಲಾವಿದ ಜಬ್ಬರ್ ಸಮೋ ಉಪಸ್ಥಿತರಿದ್ದರು.


Spread the love

Exit mobile version