ಮಂಗಳೂರು: ಸೂರ್ಯಾಸ್ತಮಾನ ವಿಕ್ಷೀಸುವ ಸಲುವಾಗಿ ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನೀರಿನ ಟ್ಯಾಂಕ್ ಏರಿ ನಾಗರಿಕಲ್ಲಿ ಭಯ ಹುಟ್ಟಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ವಿದ್ಯಾರ್ಥಿ ತನ್ನ ಕಾಲೇಜು ಗೆಳೆತಿಯೊಂದಿಗೆ ಸಿಟಿ ಸೆಂಟರಿಗೆ ಆಗಮಿಸಿ ಬಳಿಕ ಸೂರ್ಯಾಸ್ತಮಾನವನ್ನು ನೋಡುವ ನಿರ್ಧಾರ ಮಾಡಿದ್ದರು. ಸಿಟಿ ಸೆಂಟರ್ ನಿಂದ ಸೈಂಟ್ ಅಲೋಶೀಯಸ್ ಕಾಲೇಜಿನ ದಾರಿಯಲ್ಲಿ ಇಬ್ಬರೂ ಸಾಗುತ್ತಿದ್ದ ವೇಳೆ ಸೂರ್ಯಾಸ್ತಮಾನ ನೋಡುವ ನೆನಪಾಗಿ ಅವರಿಗೆ ಕಂಡು ಬಂದದ್ದು, ರಸ್ತೆ ಬದಿಯಲ್ಲಿ ಇದ್ದ ನೀರಿನ ಟ್ಯಾಂಕ್. ಟ್ಯಾಂಕಿಯ ಮೆಟ್ಟಿಲೇರುವ ಬಾಗಿಲು ತೆರೆದಿದ್ದು, ಇಬ್ಬರೂ ಮೆಟ್ಟಿಲ ಮೂಲಕ ಟ್ಯಾಂಕಿನ ಮೇಲೆರಿ ಹೋಗಿದ್ದಾರೆ.
ದಾರಿಯಲ್ಲಿ ಸಾಗುತ್ತಿದ್ದ ದಾರಿಹೋಕರು ಇವರಿಬ್ಬರ ಹುಚ್ಚಾಟವನ್ನು ಕಂಡು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಬಂದರು ಪೋಲಿಸರು ಕೂಡಲೇ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ಕೆಳಗಿಳಿಸಿ ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ.
ವಿದ್ಯಾರ್ಥಿ ಮೂಲತಃ ಮುಂಬೈನವನಾದರೆ ವಿದ್ಯಾರ್ಥಿನಿ ಬೆಂಗಳೂರಿನವಳು. ಇಬ್ಬರು ಕೂಡ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕೊನೆಯ ವರ್ಷದ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಬಂದರು ಠಾಣಾಧಿಕಾರಿ ಮದನ್ ಮಾತನಾಡಿ ಸೈಂಟ್ ಅಲೋಶೀಯಸ್ ಕಾಲೇಜಿನ ಬಳಿಯ ನೀರಿನ ಟ್ಯಾಂಕಿನ ಮೆಟ್ಟಿಲುಗಳ ಬಾಗಿಲು ತೆರೆದಿದ್ದು, ಯಾರೂ ಕೂಡ ಟ್ಯಾಂಕನ್ನು ಮೇಲೇರಬಹುದಾಗಿದೆ. ಸಂಬಂಧಪಟ್ಟವರು ಕೂಡಲೇ ಬಾಗಿಲಿಗೆ ಬೀಗ ಹಾಕುವ ಕುರಿತು ಚಿಂತಿಸಿದರೆ ಮುಂದೆ ಆಗುವ ಅಪಾಯವನ್ನು ತಪ್ಪಿಸಬಹುದು ಎಂದರು.