ಸೆ.18: ರಫೇಲ್ ಯುದ್ಧ ವಿಮಾನ ಖರೀದಿ ಹಗರಣ : ಉಡುಪಿ ಜಿಲ್ಲಾ ಕಾಂಗ್ರೆಸ್‍ನಿಂದ ಬ್ರಹತ್ ಪ್ರತಿಭಟನಾ ಮೆರವಣಿಗೆ
ಉಡುಪಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ 45 ಸಾವಿರ ಕೋಟಿ ರೂಪಾಯಿ ಮೊತ್ತದ ರಪೇಲ್ ಯುದ್ಧ ವಿಮಾನ ಹಗರಣದ ಮೂಲಕ ದೇಶವನ್ನು ಕೊಳ್ಳೆಹೊಡೆಯುತ್ತಿದೆ. ಈ ಹಗರಣದ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸೆಪ್ಟೆಂಬರ್ 18 ರಂದು ಮಂಗಳವಾರ ಬೆಳಿಗ್ಗೆ 10.00 ಗಂಟೆಗೆ ಮಣಿಪಾಲ ಟೈಗರ್ ಸರ್ಕಲ್‍ನಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರಿ ಜನಾರ್ದನ ತೋನ್ಸೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯಸಭಾ ಸದಸ್ಯರಾದ ಓಸ್ಕರ್ ಫೆರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವರುಗಳಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಹಾಗೂ ಮಾಜಿ ಶಾಸಕರುಗಳಾದ ಗೋಪಾಲ ಪೂಜಾರಿ ಮತ್ತು ಗೋಪಾಲ ಭಂಡಾರಿ, ರಾಜ್ಯ ಇಂಟಕ್ ಅಧ್ಯಕ್ಷರಾದ ರಾಕೇಶ್ ಮಲ್ಲಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಜಿ.ಎ. ಬಾವಾ ಹಾಗೆಯೇ ಹಲವಾರು ರಾಜ್ಯ ಹಾಗೂ ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ.
ಯುಪಿಎ ಅವಧಿಯಲ್ಲಿ ಭಾರತ ಸರಕಾರ ಸೌಮ್ಯದ ಎಚ್.ಎ.ಎಲ್.ಗೆ 126 ಯುದ್ಧ ವಿಮಾನಗಳನ್ನು ಖರೀದಿಸಲು 90 ಸಾವಿರ ಕೋಟಿ ರುಪಾಯಿಗಳ ವಿಮಾನ ತಯಾರಿ ಮತ್ತು ಮೇಲುಸ್ತುವಾರಿ ಒಪ್ಪಂದವಾಗಿತ್ತು. ಈ ಒಪ್ಪಂದವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುರಿದು ಹೊಸ ಒಪ್ಪಂದ ಆಗುವ ಕೆಲವೇ ತಿಂಗಳುಗಳ ಮುಂಚೆ ಹುಟ್ಟಿದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯು ಫ್ರಾನ್ಸ್‍ನ ಡಸಾಲ್ಟ್ ಏವಿಯೇಷನ್ ಸಂಸ್ಥೆಯೊಂದಿಗೆ ಸೇರಿಕೊಂಡು 36 ವಿಮಾನಗಳನ್ನು 60,000 ಕೋಟಿ ಅಂದರೆ ಪ್ರತೀ ವಿಮಾನಕ್ಕೆ 1660 ಕೋಟಿಯಂತೆ ದರ ನಿಗದಿ ಪಡಿಸಿ ಪಡೆಯಲು ಒಪ್ಪಂದ ಮಾಡಿಕೊಂಡಿರುವುದು ದೊಡ್ಡ ಹಗರಣವಾಗಿದೆ. ರಫೆಲ್ ವಿಮಾನ ಉತ್ಪಾದನೆ ಕೈತಪ್ಪಿದ್ದರಿಂದ ಹೆಚ್.ಎ.ಎಲ್. ಕಂಪೆನಿಯ 10 ಸಾವಿರ ಕಾರ್ಮಿಕರಿಗೆ ಉದ್ಯೋಗ ನಷ್ಟ ಹಾಗೂ ಉದ್ಯೋಗ ನೇಮಕಾತಿಯಿಂದ ವಂಚಿತವಾಗಿದೆ. ಈ ಸತ್ಯಾಂಶವನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತೋನ್ಸೆಯವರು ತಿಳಿಸಿರುತ್ತಾರೆ.