ಸೆ 2 ರಂದು ಮರಳುಗಾರಿಕೆ ಕಥಾಹಂದರದ ಕಿರುಚಿತ್ರ ‘ಸಂಚಲನ’ ಬಿಡುಗಡೆ
ಉಡುಪಿ: ಮರಳುಗಾರಿಕೆ ಕಥಾ ಹಂದರವನ್ನು ಒಳಗೊಂಡ ಕಿರುಚಿತ್ರ ಸಂಚಲನ ಸಪ್ಟೆಂಬರ್ 2 ರಂದು ಕುಂದಾಪುರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ರಥಿಕ್ ಮುರ್ಡೇಶ್ವರ ಹೇಳಿದರು.
ಸಂಚಲನ ಕಿರುಚಿತ್ರವು 32 ನಿಮಿಷಗಳಿಗೆ ಸೀಮೀತವಾಗಿದ್ದು, ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರವು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದು, ಯೂಟ್ಯೂಬ್ ಮೂಲಕ ಜನರು ಅದನ್ನು ವೀಕ್ಷಿಸಬಹುದಾಗಿದೆ. ಚಿತ್ರವನ್ನು 7 ದಿನಗಳು ಸತತ ಚಿತ್ರೀಕರಣ ಮಾಡಿದ್ದು, ಕುಂದಾಪುರ, ಬೈಂದೂರು, ತೂದಳ್ಳಿ ಪ್ರದೇಶದಲ್ಲಿ ಚಿತ್ತೀಕರಿಸಲಾಗಿದೆ. ಚಿತ್ರವನ್ನು ಸಪ್ಟೆಂಬರ್ 2 ರಂದು ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಇದೇ ವೇಳೆ ಮಾತನಾಡಿದ ಚಿತ್ರಕ್ಕೆ ಕಥೆ ನಿರ್ಮಿಸಿದ ಪ್ರಶಾಂತ್ ಗೋಪಾಡಿ ಅವರು ಕೆಲವು ತಿಂಗಳುಗಳ ಹಿಂದೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೇಲೆ ಮರಳು ಮಾಫಿಯಾದವರು ನಡೆಸಿದ ಧಾಳಿಯಿಂದ ಪ್ರೇರಿತರಾಗಿ ಈ ಚಿತ್ರಕ್ಕೆ ಕಥೆಯನ್ನು ಬರೆದಿದ್ದು, ಇದರಲ್ಲಿ ಜಿಲ್ಲಾಧಿಕಾರಿಗಳ ಬದಲಾಗಿ ಸದಾ ಮರಳು ಮಾಫಿಯಾದ ವಿರುದ್ದ ಧೈರ್ಯದಿಂದ ಸುದ್ದಿಯನ್ನು ಸಮಾಜಕ್ಕೆ ತಲುಪಿಸಿವ ಪತ್ರಕರ್ತರನ್ನು ಕೇಂದ್ರಿಕರಿಸಿ ನಿರ್ಮಿಸಲಾಗಿದೆ ಎಂದರು.
ಚಿತ್ರವು ರಾಘವೇಂದ್ರ ಶೇರಿಗಾರ್ ನೇತೃತ್ವದ ಇಂಪನಾ ಪ್ರೋಡಕ್ಷನ್ ಮೂಲಕ ನಿರ್ಮಾಣಗೊಂಡಿದ್ದು, ರಥಿಕ್ ಮುರ್ಡೇಶ್ವರ ನಾಯಕ ನಟನಾಗಿ, ಶ್ರೀನಿಧಿ ಶೆಟ್ಟಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ನಿರ್ದೇಶನ, ಸಂಭಾಷಣೆ, ಚಿತ್ರಕಥೆಯನ್ನು ಅರ್ಜುನ್ ದಾಸ್ ಮಾಡಿದ್ದು, ಸುನಿಲ್, ನಾಗರಾಜ್ ಆಚಾರ್ಯ, ರಾಘವ್ ಸಹನಿರ್ದೇಶನ ನೀಡಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಸಂದೇಶ್ ಮಂಗಳೂರು ಮತ್ತು ಜಯಂತ್ ಐತಾಳ್ ನೀಡಿದ್ದು, ಧ್ವನಿಯನ್ನು ಡ್ಯಾನಿ ಶೆಲ್ ಡನ್ ಒದಗಿಸಿದ್ದಾರೆ. ಧ್ವನಿಗ್ರಹಣವನ್ನು ರಿದ್ದಿ ಕ್ರಿಯೇಶನ್ನಸ್ ಉಡುಪಿ, ಸಂಕಲನ ವಿನಾಯಕ್ ಮಲ್ಯ, ಕಲೆ ಮತ್ತು ವಿನ್ಯಾಸವನ್ನು, ಸಿರಾಜ್ ಕೋಟೆಶ್ವರ್, ರಾಧಾಕೃಷ್ಣ, ಛಾಯಗ್ರಹಣ ಅಕ್ಷಯ್ ಕುಮಾರ್ ಮಾಡಿದ್ದಾರೆ. ಚಿತ್ರಕ್ಕೆ ಹಿನ್ನಲೆ ಗಾಯಕರಾಗಿ ಜ್ಯೋತಿ ಕಾಮತ್ ಕುಂಭಾಶಿ, ದೀಪಿಕಾ ರಾಘವೇಂದ್ರ, ಸಾಹಸದಲ್ಲಿ ಮಂಜುನಾಥ ಕೋಟೇಶ್ವರ ಸಹಕರಸಿದ್ದಾರೆ.
Sanchalana Short Movie – Teaser
ಸುದ್ದಿಗೋಷ್ಟಿಯಲ್ಲಿ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ, ಅರ್ಜುನ್ ದಾಸ್, ರಾಘವೇಂದ್ರ ಶೇರಿಗಾರ್, ಪ್ರಶಾಂತ್ ಗೋಪಾಡಿ ಉಪಸ್ಥಿತರಿದ್ದರು.