ಸೆ. 21 : ಸುರತ್ಕಲ್ ಟೋಲ್ ಕೇಂದ್ರ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಕೇಂದ್ರ ರದ್ದುಗೊಳಿಸಲು ಆಗ್ರಹಿಸಿ, ಸರ್ವಿಸ್ ರಸ್ತೆಗಳ ನಿರ್ಲಕ್ಷ್ಯವನ್ನು ವಿರೋಧಿಸಿ ಮತ್ತು ಹೆದ್ದಾರಿ ಗುಂಡಿಗಳನ್ನು ಮುಚ್ಚಲು ಒತ್ತಾಯಿಸಿ ಸೆ.21ರಂದು ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಹೆದ್ದಾರಿ ನಿಯಮಗಳಿಗೆ ವಿರುದ್ಧವಾಗಿ 10 ಕಿ.ಮೀ ಅಂತರದಲ್ಲಿ ಸುರತ್ಕಲ್ NITK ಹಾಗೂ ಹೆಜಮಾಡಿ ಎರಡು ಕಡೆ ಅಕ್ರಮವಾಗಿ ಟೋಲ್ (ಸುಂಕ) ಸಂಗ್ರಹಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಟೋಲ್’ಗೆ ಪರ್ಯಾಯವಾಗಿರುವ ರಸ್ತೆಗಳನ್ನೂ ಬಲವಂತವಾಗಿ ಮುಚ್ಚುವ ಪ್ರಯತ್ನವನ್ನು ಟೋಲ್ ಗುತ್ತಿಗೆದಾರರು ಮಾಡುತ್ತಿದ್ದು, ಇದರಿಂದ ಜನಸಾಮಾನ್ಯರು ಹೆಚ್ಚಿನ ಹೊರೆ ಹೊರುವಂತಾಗಿದೆ.
ದುಬಾರಿ ಟೋಲ್ ಹಣ ಪಡೆಯುತ್ತಿದ್ದರು ಕೂಡಾ ಸರಿಯಾದ ನಿರ್ವಹಣೆ ಇಲ್ಲದೆ ಕೂಳೂರು, ಪಣಂಬೂರು, ಬೈಕಂಪಾಡಿ, ಸುರತ್ಕಲ್ ಭಾಗದ ಹೆದ್ದಾರಿ ಹೊಂಡ ಗುಂಡಿಗಳಿಂದ ತುಂಬಿಹೋಗಿದೆ. ಭಾರೀ ಗಾತ್ರದ ಗುಂಡಿಗಳು ಅಪಘಾತಗಳಿಗೆ ಕಾರಣವಾಗುತ್ತಿದ್ದು, ಪ್ರಾಣಕ್ಕೆರವಾಗುವ ಅಪಾಯವೂ ಇದೆ. ಸುಂಕವನ್ನು ಮುಲಾಜಿಲ್ಲದೆ ವಸೂಲಿ ಮಾಡುವ ಹೆದ್ದಾರಿ ಪ್ರಾಧಿಕಾರ ದುರಸ್ಥಿಯ ಕುರಿತು ದಿವ್ಯ ನಿರ್ಲಕ್ಷ್ಯ ತಾಳಿದೆ.
ಈ ಹಿನ್ನೆಲೆಯಲ್ಲಿ, ಅಕ್ರಮ ಸುಂಕ ಸಂಗ್ರಹಿಸುತ್ತಿರುವ ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚಬೇಕು; ಹೆದ್ದಾರಿ ಗುಂಡಿಗಳನ್ನು ಮುಚ್ಚಿ ಕೂಡಲೇ ದುರಸ್ಥಿಗೆ ಮುಂದಾಗಬೇಕು ಎಂದು ಆಗ್ರಹಿಸಿ ಜನಪರ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 21ರ ಗುರುವಾರ ಬೆಳಗ್ಗೆ 10 ಗಂಟೆಗೆ ಸುರತ್ಕಲ್ ಟೋಲ್ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಯಲಿದೆ. ಜನಹಿತ ಬಯಸುವ ವಿವಿಧ ಸಂಘ ಸಂಸ್ಥೆಗಳು ಈ ಮೆರವಣಿಗೆ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ ಎಂದು ಟೋಲ್ ವಿರೋಧಿ ಹೋರಾಟ ಸಮಿತಿಯ ಸಮನ್ವಯಕಾರ ಶ್ರೀನಾಥ್ ಕುಲಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
padubidri mattu suratkal 2 kade toll ide. bahaLa hattiradalle toll iddu dubaari shulka vasoolaatiyaguttide. road tumbaa worst aagiddu car gundige ilidu battary connection tappi hoda experience aagide