ಸೆ.29ರಂದು ಟ್ರಾಫಿಕ್ ಪೊಲೀಸರಿಗೆ ಶ್ವಾಸಕೋಶ ಆರೋಗ್ಯ ತಪಾಸಣೆ
ಮಂಗಳೂರು: ಮಂಗಳೂರು ಮೂಲದ ಆ್ಯಂಟಿ ಪೊಲ್ಯೂಶನ್ ಡ್ರೈವ್ ಫೌಂಡೇಶನ್ (ಎಪಿಡಿಎಫ್) ನೇತೃತ್ವದಲ್ಲಿ ಎಜೆ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ನ ಸಹಭಾಗಿತ್ವದಲ್ಲಿ ಮಂಗಳೂರಿನ ಟ್ರಾಫಿಕ್ ಪೊಲೀಸರಿಗೆ ಶಾಶ್ವ ಕೋಶದ ಆರೋಗ್ಯ ತಪಾಸಣೆಯನ್ನು ಸೆ.29ರಂದು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಡಿಪಿಎಫ್ ನ ಸ್ಥಾಪಕ ಹಾಗೂ ಸಿಇಒ ಅಬ್ದುಲ್ಲಾ ಎ. ರಹ್ಮಾನ್, ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಅತೀ ಹೆಚ್ಚಾಗಿ ಬಾಧೆಗೆ ಒಳಗಾಗುವವರು ಟ್ರಾಫಿಕ್ ಪೊಲೀಸರಾಗಿರುವ ಕಾರಣ ಅವರ ಆರೋಗ್ಯದ ತಪಾಸಣೆಗೆ ನಿರ್ಧರಿಸಲಾಗಿದೆ ಎಂದರು.
ಬೆಳಗ್ಗೆ 8:30ರಿಂದ ಮಧ್ಯಾಹ್ನ 1ರ ವರೆಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ಕನಿಷ್ಠ 150 ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ವೈದ್ಯಕೀಯ ತಪಾಸಣೆ ನಡೆಸುವ ಗುರಿ ಇದೆ. ತಪಾಸಣೆಯಲ್ಲಿ ಸಂಗ್ರಹಿ ಸಲಾಗುವ ಆರೋಗ್ಯ ಸಂಬಂಧಿ ಅಂಕಿಅಂಶಗಳ ವಿಶ್ಲೇಷಣೆಯ ಆಧಾರದಲ್ಲಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದವರು ಹೇಳಿದರು.
2016-17ನೆ ಅವಧಿಯಲ್ಲಿ ಫೌಂಡೇಶನ್ ವತಿಯಿಂದ ನಡೆಸಲಾದ ಸಂಶೋಧನೆಯ ವೇಳೆ ಮಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಅದರಲ್ಲೂ ಶೇ.50ರಷ್ಟು ಮಾಲಿನ್ಯಕ್ಕೆ ನಗರದಲ್ಲಿ ಹೆಚ್ಚುತ್ತಿರುವ ವಾಹನ ಗಳ ಹೊಗೆ ಕಾರಣವಾಗುತ್ತಿದ್ದು ಈ ಬಗ್ಗೆ ರಾಜ್ಯ ಸರಕಾರಕ್ಕೆ ವರದಿಯನ್ನೂ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆ ಪರಿಸರ ಇಲಾಖೆಯಿಂದ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ವಾಯು ಗುಣಮಟ್ಟ ತಪಾಸಣೆಯ ಯಂತ್ರವನ್ನೂ ಅಳವಡಿಸಲಾಗಿತ್ತು. ವಾಯು ಮಾಲಿನ್ಯದ ಕಾರಣ ಹೃದ್ರೋಗ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದು ಕಂಡು ಬಂದಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಪಿಡಿಎಫ್ ಯೋಜನಾ ಸಂಯೋಜಕಿ ಗೀತಾ ಸೂರ್ಯ, ಸಾರ್ವಜನಿಕ ಸಂಪರ್ಕ ಅಧಿಕಾರಿ ಭಾಸ್ಕರ ಅರಸ್ ಉಪಸ್ಥತರಿದ್ದರು.