ಸೈಬರ್ ವಂಚಕರಿಂದ ಎಚ್ಚರ ವಹಿಸಿ – ಗಂಗೊಳ್ಳಿ ಪಿ ಎಸ್ ಐ ಹರೀಶ್ ಆರ್

Spread the love

ಸೈಬರ್ ವಂಚಕರಿಂದ ಎಚ್ಚರ ವಹಿಸಿ – ಗಂಗೊಳ್ಳಿ ಪಿ ಎಸ್ ಐ ಹರೀಶ್ ಆರ್

ಕುಂದಾಪುರ: ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು, ವೃತ್ತಿಪರರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದು ಸೈಬರ್ ಅಥವಾ ಆನ್ ಲೈನ್ ನಲ್ಲಿ ವ್ಯವಹರಿಸುವಾಗ ಹೆಚ್ಚು ಎಚ್ಚರದಿಂದ ಇರಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಹರೀಶ್ ಆರ್ ಅವರು ಸಲಹೆ ನೀಡಿದರು.

ಅವರು ಭಾನುವಾರ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಇದರ ಕಥೊಲಿಕ್ ಸಭಾ ಘಟಕ, ಮಾಧ್ಯಮ ಆಯೋಗ ಜಂಟಿಯಾಗಿ ಆಯೋಜಿಸಿದ್ದ ಸೈಬರ್ ಕ್ರೈ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಸೈಬರ್ ಅಥವಾ ಆನ್ ಲೈನ್ ಅಪರಾಧ ನಡೆದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರೆ ವಂಚನೆಗೊಳಗಾಗಿ ಕಳೆದುಕೊಂಡು ಹಣವನ್ನು ವಾಪಾಸ್ ಪಡೆಯಬಹುದು. ವಂಚನೆಗೆ ಒಳಗಾಗಿರುವುದು ಗೊತ್ತಾದ ತಕ್ಷಣವೇ, 1930 ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ಎನ್ ಸಿ ಆರ್ ಪಿ ಪೋರ್ಟಲ್ ಮೂಲಕ ಕೂಡ ದೂರು ನೀಡಬಹುದು ಎಂದರು.

ಇತ್ತೀಚಿನ ದಿನಗಳಲ್ಲಿ ವಿವಿಧ ತಾಂತ್ರಿಕ ಶೈಲಿಯ ಸೈಬರ್ ಅಪರಾಧಗಳು ನಡೆಯುತ್ತಿದ್ದು ಹ್ಯಾಕರ್ಸ್ ಮೂಲಕ ಖಾಸಗಿ ಮಾಹಿತಿ ಕದಿಯಲಾಗುತ್ತದೆ. ಬ್ಯಾಂಕಿನವರೆಂದು ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ಒಟಿಪಿ ನಂಬರನ್ನು ಕೇಳಿದರೆ ಯಾರಿಗೂ ನೀಡಿ ಖಾತೆಯಲ್ಲಿರುವ ಹಣ ಕಳೆದು ಕೊಳ್ಳಬೇಡಿ. ಹಣ ಮಾಡುವ ಧಾವಂತದಲ್ಲಿ ನಿಮ್ಮ ಹಣ ಕಳೆದುಕೊಳ್ಳಬೇಡಿ, ಆಪ್ ಮೂಲಕ ಸಾಲ ತೆಗೆಯಬೇಡಿ, ಮೊಬೈಲ್ ಸ್ಟೇಟಸ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಗೆ ನಿಮ್ಮ ಫೋಟೋವನ್ನು ಹಾಕುವಾಗ ಜಾಗರೂಕರಾಗಿರಬೇಕು. ಕಸ್ಟಮ್ಸ್, ಆದಾಯತೆರಿಗೆ, ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳು ಫೋನ್ ಅಥವಾ ಇ ಮೇಲ್ ಮೂಲಕ ಬ್ಯಾಂಕ್ ಖಾತೆಯ ಮೂಲಕ ಮಾಹಿತಿಯನ್ನು ಕೇಳುವುದಿಲ್ಲ ಎಂದರು.

ಎಮ್ ಸಿ ಸಿ ಬ್ಯಾಂಕ್ ಬ್ರಹ್ಮಾವರ ಶಾಖೆಯ ಪ್ರಬಂಧಕರಾದ ಒವಿನ್ ರೆಬೆಲ್ಲೊ ಸೈಬರ್ ಕ್ರೈಂ ಮತ್ತು ಡಿಜಿಟಲ್ ಪಾವತಿ ಕುರಿತು ಮಾಹಿತಿ ನೀಡಿ ನಮ್ಮಲ್ಲಿರುವ ಡೆಬಿಟ್ ಹಾಗೂ ಕ್ರೆಡೀಟ್ ಕಾರ್ಡ್ ಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕಾಗಿದ್ದು ಸುಳ್ಳು ಹೇಳಿ ವೃದ್ಧರನ್ನು, ಹಿರಿಯ ನಾಗರಿಕರನ್ನು ವಂಚಿಸುವುದು ಹೆಚ್ಚಾಗುತ್ತಿದ್ದು ಈ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅನಗತ್ಯವಾಗಿ ಡಿಜಿಟಲ್ ಪೇಮೆಂಟ್ ಮಾಡುವುದನ್ನು ಕಡಿವಾಣಗೊಳಿಸಿ ನಗದು ಪಾವತಿ ಮಾಡುವುದರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು. ಸುಲಭ ಹಣದ ಭರವಸೆ ನೀಡುವ ಯೋಜನೆಗಳಿಗೆ ಸಾರ್ವಜನಿಕರು ಎಚ್ಚರವಾಗಿರಬೇಕು ಎಂದರು.

ಚರ್ಚಿನ ಧರ್ಮಗುರು ವಂ|ತೋಮಸ್ ರೋಶನ್ ಡಿಸೋಜಾ, ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಮಾಜಿ ಅಧ್ಯಕ್ಷರಾದ ಎಲ್ ರೋಯ್ ಕಿರಣ್ ಕ್ರಾಸ್ತಾ ಉಪಸ್ಥಿತರಿದ್ದರು.

ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿ, ಕಿರಣ್ ಕ್ರಾಸ್ತಾ ವಂದಿಸಿ, ರೆನಿಟಾ ಬಾರ್ನೆಸ್ ಕಾರ್ಯಕ್ರಮ ನಿರೂಪಿಸಿದರು.


Spread the love