ಸೊರಕೆ ಪಿಎ ಮನೆ ಮೇಲೆ ಚುನಾವಣಾ ಆಯೋಗ ದಾಳಿ; ಬರಿಗೈಯಲ್ಲಿ ವಾಪಾಸಾದ ಅಧಿಕಾರಿಗಳು

Spread the love

ಸೊರಕೆ ಪಿಎ ಮನೆ ಮೇಲೆ ಚುನಾವಣಾ ಆಯೋಗ ದಾಳಿ; ಬರಿಗೈಯಲ್ಲಿ ವಾಪಾಸಾದ ಅಧಿಕಾರಿಗಳು

ಬ್ರಹ್ಮಾವರ: ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಅವರು ಆಪ್ತಸಹಾಯಕರ ಮನೆಗೆ ಮಂಗಳವಾರ ಚುನಾವಣಾ ಆಯೋಗದ ತಂಡ ದಾಳಿ ನಡೆಸಿದ್ದು, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಯಾವುದೇ ವಸ್ತುಗಳು ಸಿಗದೇ ಬರಿಕೈಯಲ್ಲಿ ಹಿಂತಿರುಗಿದೆ. ಆದರೇ ದಾಳಿ ನಡೆಸಿದ ರೀತಿ ಸಾರ್ವಜನಿಕವಾಗಿ ಟೀಕೆಗೆ ಕಾರಣವಾಗಿದೆ.

ಸೊರಕೆ ಅವರ ಆಪ್ತ ಸಹಾಯಕ ಆಶೋಕ್ ಅವರು ಬ್ರಹ್ಮಾವರದ ನಿವಾಸಿಯಾಗಿದ್ದು, ಅವರ ಪತ್ನಿ ಮಣಿಪಾಲದಲ್ಲಿ ಖಾಸಗಿ ಉದ್ಯೋಗಿಯಾಗಿದ್ದಾರೆ. ಮಂಗಳವಾರ ಸಂಜೆ 4 ಗಂಟೆಗೆ ಹತ್ತಾರು ವಾಹನಗಳಲ್ಲಿ ಹಠಾತ್ತನೇ ಬಂದ ಸುಮಾರು 40 ಮಂದಿ ಅಧಿಕಾರಿಗಳು ಅವರ ಮನೆಯ ಬಾಗಿಲು ಬಡಿದಿದ್ದಾರೆ, ಆಶೋಕ್ ಅವರು ಸೊರಕೆಯವರೊಂದಿಗೆ ಚುನಾವಣಾ ಪ್ರಚಾರದಲ್ಲಿದ್ದು, ಪತ್ನಿ ಕೆಲಸದಿಂದ ಬಂದಿರಲಿಲ್ಲ, ಮನೆಯಲ್ಲಿ ಅವರ ಮಗಳು ಮಾತ್ರ ಇದ್ದು, ಆಕೆ ಇಷ್ಟು ಸಂಖ್ಯೆಯ ಅಧಿಕಾರಿಗಳನ್ನು ಕಂಡು ಕಂಗಾಲಾಗಿದ್ದಾಳೆ. ವಿಷಯ ತಿಳಿಯದೇ ಅಧಿಕಾರಿಗಳು ಮನೆಯನ್ನು ಜಾಲಾಡುತ್ತಿದ್ದುದನ್ನು ನೋಡುತ್ತಾ ಅಸಹಾಯಕಳಾಗಿದ್ದಾಳೆ.

ಅಧಿಕಾರಿಗಳು ಮನೆಯ ಇಂಚಿಂಚೂ ಹುಡುಕಿದ್ದು, ವಸ್ತುಗಳನ್ನು ಜಾಲಾಡಿಸಿದ್ದಾರೆ. ಮನೆಯ ಮೇಲಿದ್ದ ನೀರಿನ ಟ್ಯಾಂಕಿನೊಳಗೂ ಇಳಿದು ನೋಡಿದ್ದಾರೆ. ಅಶೋಕ್ ಅವರ ಪತ್ನಿ ಬರುವಾಗ ದಾಳಿ ಮುಗಿದು ಅಧಿಕಾರಿಗಳು ಹಿಂದಕ್ಕೆ ಹೊರಟಿದ್ದಾರೆ.

ಇತ್ತೀಚೆಗೆ ಸೊರಕೆ ಅವರ ಆಪ್ತ ಕಾಂಗ್ರೆಸ್ ನಾಯಕ ದೇವಿಪ್ರಸಾದ್ ಶೆಟ್ಟಿ ಮನೆಗೂ ದಾಳಿ ನಡೆದಿದ್ದು, ಈ ಎರಡೂ ದಾಳಿಗಳು ಸೊರಕೆ ಅವರನ್ನು ಚುನಾವಣೆಯಲ್ಲಿ ಸೋಲಿಸುವುದಕ್ಕೆ ಸಾಧ್ಯವಾಗದೇ ಬಿಜೆಪಿ ನಾಯಕರು ನೀಡಿದ ಸುಳ್ಳು ದೂರಿನ ಹಿನ್ನೆಲೆಯಲ್ಲಿ ಆಗಿದೆ. ಸೊರಕೆ ಅವರನ್ನು ಮತ್ತು ಗೆಲ್ಲುವ ಉತ್ಸಾಹದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಇದಾಗಿದೆ ಎಂದು ದೇವಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ.


Spread the love