ಸೊಳ್ಳೆಗಳ ನಿಯಂತ್ರಣ ಸಾರ್ವಜನಿಕರಲ್ಲಿ ತಿಳುವಳಿಕೆ ಕೊರತೆ – ಮನಪಾ ಜಂಟಿ ಆಯುಕ್ತೆ ಗಾಯತ್ರಿ ನಾಯಕ್

Spread the love

ಸೊಳ್ಳೆಗಳ ನಿಯಂತ್ರಣ ಸಾರ್ವಜನಿಕರಲ್ಲಿ ತಿಳುವಳಿಕೆ ಕೊರತೆ – ಮನಪಾ ಜಂಟಿ ಆಯುಕ್ತೆ ಗಾಯತ್ರಿ ನಾಯಕ್

ಮಂಗಳೂರು :ಸೊಳ್ಳೆಗಳ ನಿಯಂತ್ರಣಕ್ಕೆ ಮೊದಲು, ಲಾರ್ವಗಳ ನಾಶ ಮುಖ್ಯವಾಗಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಕೊರತೆ ಕಂಡುಬರುತ್ತಿದೆ. ಹಾಗಾಗಿ ಎಲ್ಲರಿಗೂ ಏಕರೂಪದ ಮಾಹಿತಿ ನೀಡಲು ಕಾರ್ಯಾಗಾರ ನಡೆಸಬೇಕು ಎಂದು ನಗರಪಾಲಿಕೆ ಜಂಟಿ ಆಯುಕ್ತೆ ಗಾಯತ್ರಿ ನಾಯಕ್ ಹೇಳಿದರು.

ಗುರುವಾರ ಮಂಗಳೂರು ಮಹಾನಗರಪಾಲಿಕೆ ಮಂಗಳಾ ಸಭಾಂಗಣದಲ್ಲಿ ನಡೆದ ಡೆಂಗ್ಯೂ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಂಬಂಧ ಬಿಲ್ಡರ್‍ಗಳ ಜೊತೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು ಡೆಂಗ್ಯೂ ಜ್ವರವು ವೈರಸ್‍ನಿಂದ ಉಂಟಾಗುವ ಕಾಯಿಲೆ, ಇದು ಸೋಂಕು ಹೊಂದಿದ ಈಡಿಸ್ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದರ ಬಗ್ಗೆ ಜನರು ಮಾಹಿತಿ ಪಡೆದುಕೊಳ್ಳಬೇಕು. ನಿಮ್ಮ ಮನೆ, ನಿಮ್ಮ ಪರಿಸರ ನಿಮ್ಮ ಜವಬ್ದಾರಿ. ಡೆಂಗ್ಯೂ, ಮಲೇರಿಯಾ ರೋಗಗಳಿಗೆ ಕಾರಣವಾಗುವ ಯಾವುದೇ ರೀತಿಯ ಅಂಶಗಳು ಸೃಷ್ಟಿಯಾಗದಂತೆ ಹಾಗೂ ಮಳೆ ನೀರು, ಇತರ ತ್ಯಾಜ್ಯಗಳ ನೀರು ನಿಲ್ಲದಂತೆ ಗಮನಹರಿಸಬೇಕು. ಎಂದು ಸೂಚಿಸಿದರು.

ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿ ಅಂದರೆ ಮುಖ್ಯವಾಗಿ, ಬಿಲ್ಡರ್ಸ್‍ಗಳಿಗೆ, ಕಟ್ಟಡ ನಿರ್ಮಾಣದ ಹಂತದಲ್ಲಿ, ಕಟ್ಟಡ ಖಾಲಿ ಇರುವ ಪ್ರದೇಶದಲ್ಲಿ ಬಹಳ ವ್ಯಾಪಕವಾಗಿ ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ. ಇದರ ಬಗ್ಗೆ ಬಿಲ್ಡರ್ಸ್‍ಗಳಿಗೆ, ಮಾಲೀಕರಿಗೆ ಮಾಹಿತಿ ನೀಡಿಯೂ ಪಾಲಿಸದೇ ಇದ್ದಲ್ಲಿ, ಸಾರ್ವಜಿನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಬಹಳ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ, ಕೆಲವೊಂದು ಬಾರಿ ಅನಿವಾರ್ಯವಾಗಿ ದಂಡ ಕೂಡ ವಿಧಿಸಿದೆ ಎಂದು ಹೇಳಿದರು.

ಡೆಂಗ್ಯೂ, ಮಲೇರಿಯಾವನ್ನು ನಿರ್ಲಕ್ಷಿಸಿದರೆ ಮುಂದೆ ಚಿಕನ್‍ಗುಣ್ಯ, ಝೀಕಾ ಮುಂತಾದ ಹಾನಿಕಾರಕ ಕಾಯಿಲೆಗಳನ್ನು ನೋಡಬೇಕಾಗುತ್ತದೆ. ಅಲ್ಲಲ್ಲಿ ಮಳೆನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದೆ, ಹೀಗಾಗಿ ಮನೆ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಮುಖ್ಯವಾಗಿ ಮಹಡಿ ಡ್ರಮ್, ಬಕೆಟ್, ಇತ್ಯಾದಿ ವಸ್ತುಗಳಲ್ಲಿ ಸಂಗ್ರಹವಾಗುವ ಶುದ್ಧ ಮಳೆ ನೀರಿನಲ್ಲಿಯೇ ಸೊಳ್ಳೆ ಉತ್ಪತ್ತಿಯಾಗುವುದರಿಂದ ಮಳೆ ನೀರು ನಿಲ್ಲದಂತೆ ಎಚ್ಚರವಹಿಸಿ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್ ಹೇಳಿದರು.

ಡೆಂಗ್ಯೂ ಜ್ವರ ಯಾವ ರೀತಿಯಲ್ಲಿ ಹರಡುತ್ತದೆ. ಸಾರ್ವಜನಿಕರು ಯಾವ ರೀತಿಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವಿವರಿಸುತ್ತಾ, ಮಂಗಳೂರಿನಲ್ಲಿ ಮಲೇರಿಯಾವು ಹೆಚ್ಚಾಗಿ ಕಂಡುಬರುತ್ತಿದ್ದು, ಜ್ವರ ಶಂಕಿತ ರೋಗಿಗೆ ಮೊದಲು ಡೆಂಗ್ಯೂ ಪರಿಶೀಲನೆ ಮಾಡುವ ಬದಲು ಮಲೇರಿಯಾ ಪರಿಶೀಲನೆ ಅಗತ್ಯವಾಗಿದೆ. ಮಲೇರಿಯಾ ಡೆಂಗ್ಯೂ ಜ್ವರಕ್ಕಿಂತ ಅಪಾಯವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 60 ಡೆಂಗ್ಯೂ ಹಾಗೂ ಶೇಕಡಾ 92 ಮಲೇರಿಯಾ ಕಂಡುಬಂದಿದೆ. ರೋಗಗಳು ಬರುವುದು ಸರ್ವೇ ಸಾಮಾನ್ಯ, ಅದು ಹೆಚ್ಚಾದರೆ ಮನುಷ್ಯ ಸಂಕುಲಕ್ಕೆ ತೊಂದರೆಯಾಗುತ್ತದೆ ಎಂದರು.

ಬಿಲ್ಡರ್ಸ್ ಹಾಗೂ ಇಂಜೀನಿಯರ್‍ಗಳು ತಮ್ಮ ಕಾರ್ಮಿಕರ ಬಗ್ಗೆ ನಿಗಾವಹಿಸುವಂತೆ ಹಾಗೂ ಕಾಲಕಾಲಕ್ಕೆ ಅವರ ಆರೋಗ್ಯ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ದೊರಕುವಂತೆ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಿದರು.


Spread the love