Home Mangalorean News Kannada News ಸೊಳ್ಳೆ ಉತ್ಪತ್ತಿ ಜಾಗ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಿ – ಜಿಲ್ಲಾಧಿಕಾರಿ ಡಾ. ಕೆ. ವಿ....

ಸೊಳ್ಳೆ ಉತ್ಪತ್ತಿ ಜಾಗ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಿ – ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ   

Spread the love

ಸೊಳ್ಳೆ ಉತ್ಪತ್ತಿ ಜಾಗ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಿ – ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ   

ಮಂಗಳೂರು: ನಗರದಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಸ್ರಚಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಗಣದಲ್ಲಿ ನಡೆದ “ವಿಶ್ವ ಸೊಳ್ಳೆ ದಿನ 20-08-2020” ಕಾರ್ಯಕ್ರಮ ಹಾಗೂ ಮಲೇರಿಯಾ, ಡೆಂಗ್ಯೂ ನಿಯಂತ್ರಣದಲ್ಲಿ ವಿವಿಧ ಇಲಾಖೆಯ ಪಾತ್ರದ ಕುರಿತು ಅಂತರ್ ಇಲಾಖಾ ಸಮನ್ವಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಳೆದ ಹಲವು ತಿಂಗಳುಗಳಿಂದ ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜು ಸೇರಿದಂತೆ ಇನ್ನಿತರ ಕಟ್ಟಡಗಳು ಮುಚ್ಚಿದ್ದು, ಆ ಕಟ್ಟಡಗಳ ಮೇಲ್ಭಾಗದಲ್ಲಿ ನೀರು ಶೇಖರಣೆಗೊಂಡು ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಆದುದರಿಂದ ಅಂತಹ ಎಲ್ಲಾ ಪ್ರದೇಶಗಳನ್ನು ಗುರುತಿಸಿ, ಜಿಲ್ಲಾ ಆರೋಗ್ಯ ಇಲಾಖೆ, ಆರೋಗ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರ ನೆರವು ಪಡೆದುಕೊಂಡು ಲಾರ್ವಾ ಸಮೀಕ್ಷೆ ನಡೆಸಬೇಕು ಎಂದು ಹೇಳಿದರು.

ಗುಜರಿ ಅಂಗಡಿಗಳ ಸುತ್ತಮುತ್ತ ನಿರುಪಯುಕ್ತ ಸಾಮಾಗ್ರಿಗಳಿಂದ ಸೊಳ್ಳೆ ಉತ್ಪತ್ತಿಯಾಗುತ್ತಿದೆ, ಮಂಗಳೂರು ಮಹಾನಗರಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಅತಂಹ ಅಂಗಡಿಗಳನ್ನು ಪತ್ತೆ ಮಾಡಿ, ಟ್ರೇಡ್ ಲೈಸನ್ಸ್ ರದ್ದುಗೊಳಿಸಿಬೇಕು. ಎಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು. ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ಪ್ರದೇಶಗಳಲ್ಲಿ ಡೆಂಗ್ಯೂ / ಮಲೇರಿಯಾ ಪ್ರಕರಣ ಉಲ್ಬಣಗೊಂಡಿದ್ದು. ಈ ಬಗ್ಗೆ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲಿಸಿದೆ. ಈ ಸಂದರ್ಭದಲ್ಲಿ ರಬ್ಬರ್ ತೋಟಗಳಲ್ಲಿ ಮರಗಳಿಂದ ಹಾಲು ಸಂಗ್ರಹಿಸಲು ಇರಿಸುವ ಗೆರಟೆ, ಅಡಿಕೆ ಸೋಗೆ, ಜೇನು ಸಾಕಾಣಿಕೆಯ ಡಬ್ಬದ ಮೇಲ್ಭಾಗದಲ್ಲಿ ನೀರು ಸಂಗ್ರಹಣೆಯಾಗುವುದರಿಂದ ಪ್ರಕರಣ ಉಲ್ಬಣಗೊಂಡಿರುವುದು ಗಮನಕ್ಕೆ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಸಭೆಗೆ ತಿಳಿಸಿದಾಗ, ತೋಟಗಾರಿಕಾ ಇಲಾಖೆ ಮತ್ತು ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರದ ಮೂಲಕ ಜನರಿಗೆ ಮಾಹಿತಿ ನೀಡಿ ಆಯಾ ಪ್ರದೇಶಗಳಲ್ಲಿ ಸೂಕ್ತಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲಾಖೆಯ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ನಗರದಲ್ಲಿ ನಿರಾಶ್ರಿತರಿಗೆ ಡೆಂಗ್ಯೂ / ಮಲೇರಿಯಾ ಜ್ವರ ಹೆಚ್ಚಾಗಿ ಪತ್ತೆಯಾಗುತ್ತಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆಯ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡ ರಚನೆ ಮಾಡಿ ನಗರದಲ್ಲಿರುವ ನಿರಾಶ್ರಿತರ ಸಂಖ್ಯೆಯನ್ನು ಪಟ್ಟಿ ಮಾಡಿ, ನಗರದಲ್ಲಿರುವ ನಿರ್ಗತಿಕ ಕೇಂದ್ರಗಳನ್ನು ಗುರುತಿಸಿ ಒಂದು ವಾರದೊಳಗಡೆ ವರದಿ ಸಿದ್ಧಪಡಿಸಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಾರ್ವಜನಿಕ ಸ್ಥಳಗಳು ಇನ್ನಿತರ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲ್ಭಾಗದಲ್ಲಿ ನೀರು ಶೇಖರಣೆಗೊಂಡರೆ ಅವುಗಳಿಗೆ ಮಾಲಕರು ನೇರ ಹೊಣೆಯಾಗಿರುತ್ತಾರೆ. ಅಂತವರು ವಿರುದ್ಧ ದಂಡ ವಿಧಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಇಲಾಖಾ ಅಧಿಕಾರಿಗಳು ಜಿಲ್ಲೆಯ ಬಂದರು ಪ್ರದೇಶವನ್ನು ಪರಿಶೀಲಿಸಿದಾಗ ಮೀನುಗಾರಿಕಾ ಸಣ್ಣ ದೋಣಿಗಳಲ್ಲಿ ಪ್ಲಾಸ್ಟಿಕ್ ಕ್ರೇಟ್‍ಗಳಲ್ಲಿ, ನೀರು ಸಂಗ್ರಹಕ ಸಿಂಟೆಕ್ಸ್, ಬ್ಯಾರಲ್ ಇತ್ಯಾದಿಗಳಲ್ಲಿ ಸೊಳ್ಳೆ ಉತ್ಪತ್ತಿ ಕಂಡುಬಂದಿದ್ದು, ಇದಕ್ಕೆ ಲಾರ್ವಾಹಾರಿ ಗಪ್ಪಿ ಮೀನುಗಳನ್ನು ವೃದ್ಧಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಡೆಂಗ್ಯೂ ಮಲ್ಭೆರಿಯಾ ರೋಗಕ್ಕೆ ಸಂಬಂಧಿಸಿದಂತೆ ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಪ್ರಕರಣ ದಾಖಲಾಗಿದೆ ಎಂದು ಮಲೇರಿಯಾ ನಿಯಂತ್ರಣಾಧಿಕಾರಿ ನವೀನ್ ಚಂದ್ರ ಕುಲಾಲ್ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ. ಜೆ. ರೂಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ಧರು.


Spread the love

Exit mobile version