ಸೋನಿಯಾ ಗಾಂಧಿ ಕುರಿತು ಸಿಟಿ ರವಿ ಟ್ವಿಟ್, ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್ ಖಂಡನೆ

Spread the love

ಸೋನಿಯಾ ಗಾಂಧಿ ಕುರಿತು ಸಿಟಿ ರವಿ ಟ್ವಿಟ್, ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್ ಖಂಡನೆ

ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಿದ ವಿಚಾರವಾಗಿ ಬಿಜೆಪಿ ನಾಯಕ ಸಿಟಿ ರವಿಯವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಾಕಿದ ಪೋಸ್ಟ್ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹಾಗೂ ರಿಜ್ವಾನ್ ಅರ್ಷದ್ ಮತ್ತು ಬಿಜೆಪಿ ನಾಯಕ ಸಿಟಿ ರವಿ ನಡುವೆ ಟ್ವಿಟ್ಟರ್ ಕಿತ್ತಾಟಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಕ್ಕೆ ಚಿಕಿತ್ಸೆಗೆ ತೆರಳಿದ ವಿಚಾರವಾಗಿ ಸಿ ಟಿ ರವಿಯವರು “ವೈದ್ಯಕೀಯ ಚಿಕಿತ್ಸೆಗಾಗಿ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳುತ್ತಿರುವುದು ಅಚ್ಚರಿ ಉಂಟು ಮಾಡಿದೆ, ಆವರು ಚಿಕಿತ್ಸೆಗಾಗಿ ಹೋಗುತ್ತಿದ್ದಾರೋ ಇಲ್ಲಾ ಈಗಿರುವ ಖಾತೆಗಳಿಂದ ಸುರಕ್ಷಿತ ಖಾತೆಗಳಿಗೆ ಹಣ ವರ್ಗಾಯಿಸಲು ಹೋಗುತ್ತಿದ್ದಾರೋ,” ಎಂದು ಟ್ವೀಟ್ ಮಾಡಿದ್ದರು.

ಇದಾಗಿ ಮತ್ತೆ ಟ್ವಿಟ್ಟರಿನಲ್ಲೇ ದಾಳಿ ನಡೆಸಿದ ಸಿಟಿ ರವಿ, “6 ದಶಕಗಳ ಕಾಲ ಭಾರತವನ್ನು ಆಳ್ವಿಕೆ ಮಾಡಿಯೂ ಸೋನಿಯಾ ಗಾಂಧಿಗೆ ಚಿಕಿತ್ಸೆ ನೀಡಲಾಗುವಂಥ ಆಸ್ಪತ್ರೆ ಕಟ್ಟಲಾಗಲಿಲ್ಲ ಎನ್ನುವುದು ಗಾಂಧಿಗಳಿಗೆ ಅವಮಾನ,” ಎಂದು ಟ್ವಿಟ್ ಮಾಡಿದರು.

ಮತ್ತೆ ಟ್ವೀಟ್ ಮಾಡಿದ ರವಿ, “ರಾಹುಲ್ ಗಾಂಧಿ ಯಾಕೆ ತಾಯಿ ಸೋನಿಯಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಬಾರದು? ಕರ್ನಾಟಕ ಮುಖ್ಯಮಂತ್ರಿಗಳು ಖಂಡಿತವಾಗಿಯೂ ಒಳ್ಳೆ ರೀತಿಯಲ್ಲಿ ನೋಡಿಕೊಳ್ಳುತ್ತಾರೆ,” ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಅಟಲ್ ಬಿಹಾರಿ ವಾಜಪೇಯಿಯವರ ಹೇಳಿಕೆಯ ಚಿತ್ರವೊಂದನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ಹೀಗಿತ್ತು, “ಸಿಟಿ ರವಿಯವರೇ ಇಷ್ಟು ಸೊಕ್ಕಿನಿಂದ, ಅವಮಾನಕರವಾಗಿ ಮಾತನಾಡಬೇಡಿ. ನೀವು ಜೀವ ಕೊಡುತ್ತೀರಾ? ರಾಜಕೀಯ ದ್ವೇಷದ ಮಧ್ಯೆ ಮಾನವೀಯತೆಯನ್ನು ಮರೆಯಬೇಡಿ. ಅಟಲ್ ಬಿಹಾರಿ ವಾಜಪೇಯಿ ರಾಜೀವ್ ಗಾಂಧಿ ಬಗ್ಗೆ ಹೇಳಿದ್ದು ಇಲ್ಲಿದೆ..,” ಎಂದು ಟ್ವೀಟ್ ಮಾಡಿದರು.

ಅಲ್ಲದೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ ಪ್ರತಿಕ್ರಿಯೆ ನೀಡಿ  ಸಿಟಿ ರವಿ ತಮ್ಮ ಅನಾರೋಗ್ಯಕರ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಅವರ ತಲೆಯಲ್ಲಿ ಕಸ ತುಂಬಿಕೊಂಡಿರುವುದನ್ನು ಇದು ಸೂಚಿಸುತ್ತದೆ. ಅವರ ಇಷ್ಟು ಕೀಳು ಮಟ್ಟಕ್ಕೆ ಇಳಿದಿರುವುದು ಬೇಸರದ ಸಂಗತಿ,” ಎಂದು ಹೇಳಿದ್ದಾರೆ.


Spread the love