Home Mangalorean News Kannada News ಸೋಲಾರ್ ಉಪಯೋಗದ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಾಗಿದೆ – ಪೇಜಾವರ ಸ್ವಾಮೀಜಿ

ಸೋಲಾರ್ ಉಪಯೋಗದ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಾಗಿದೆ – ಪೇಜಾವರ ಸ್ವಾಮೀಜಿ

Spread the love

ಸೋಲಾರ್ ಉಪಯೋಗದ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಾಗಿದೆ – ಪೇಜಾವರ ಸ್ವಾಮೀಜಿ

ಉಡುಪಿ: ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಸೋಲಾರ್ ಉಪಯೋಗದ ಕುರಿತು ಜಾಗೃತಿ ಮೂಡಿಸುವ ಅಗತ್ಯತೆ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಹೇಳಿದರು.

ಅವರು ಭಾನುವಾರ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ಣಾಟಕ ಬ್ಯಾಂಕ್ ಲಿ ಮಂಗಳೂರು, ಅಮಾಸೆಬೈಲು ಗ್ರಾಮಪಂಚಾಯತ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಅಮಾಸೆಬೈಲು ಪ್ರೌಢಶಾಲೆ ಆವರಣದಲ್ಲಿ ಜರುಗಿದ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಸೋಲಾರ್ ದೀಪಗಳ ಕೊಡುಗೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ವಿದ್ಯುಚ್ಛಕ್ತಿಯ ಕೊರತೆಯ ಈ ಸಮದಯದಲ್ಲಿ ಪ್ರಾಕೃತಿಕವಾಗಿ ಲಭಿಸುವ ಸೂರ್ಯನ ಬೆಳಕನ್ನು ಸೋಲಾರ್ ಶಕ್ತಿಯ ಮೂಲಕ ಪಡೆಯುವುದರ ಮೂಲಕ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಹೊಸ ಕ್ರಾಂತಿ ನಡೆದಿದ್ದು ಇದರ ಯಶಸ್ಸಿಗೆ ಮೂಲ ಕಾರಣಿಕರ್ತರು ಎಜಿ ಕೊಡ್ಗಿಯವರು. ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡುವ ಕೆಲಸವನ್ನು ಒರ್ವ ಸಮಾಜಸೇವಕನೂ ಕೂಡ ಮಾಡಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸೇವೆ ಮಾಡಲು ನಮಗೆ ಅಧಿಕಾರವೇ ಬೇಕಿಲ್ಲ ಬದಲಾಗಿ ಕೆಲಸ ಮಾಡುವ ಆಸಕ್ತಿ ಇರಬೇಕು ಎಂದರು.

ತಾವು ಈಗಾಗಲೇ ತಮ್ಮ ಮಠದ ವತಿಯಿಂದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಜನರಿಗೆ ವಿದ್ಯುಚ್ಛಕ್ತಿಯ ವ್ಯವಸ್ಥೆಯನ್ನು ಮಾಡಿರುತ್ತೇವೆ. ಮುಂದಿನ ದಿನಗಳಲ್ಲಿ ಮಠದ ವತಿಯಿಂದ ಸೆಲ್ಕೋ ಸಂಸ್ಥೆಯ ಹರೀಶ್ ಹಂದೆಯವರ ಮಾರ್ಗದರ್ಶನಲ್ಲಿ ನಕ್ಸಲ್ ಪೀಡಿತ ಪ್ರದೇಶಲ್ಲಿ ಸೋಲಾರ್ ದೀಪಗಳನ್ನು ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವಿರೇಂದ್ರ ಹೆಗ್ಗಡೆಯವರು ಮಾತನಾಡಿ ಇಂದು ವಿಶ್ವದಾದ್ಯಂತ ವಿದ್ಯುತ್ತಿನ ಕೊರತೆ ಎದ್ದು ಕಾಣುತ್ತಿದೆ. ಮಹಾತ್ಮಾಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯಂತೆ ನಮ್ಮ ಅವಶ್ಯಕತೆಗಳನ್ನು ನಾವೇ ಹೊಂದಿಸಿಕೊಳ್ಳುವ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಸೋಲಾರ್ ವ್ಯವಸ್ಥೆಯನ್ನು ನಮ್ಮ ನಮ್ಮ ಮನೆಗಳಲ್ಲಿ ಅಳವಡಿಸುವುದರಿಂದ ಹಣದ ಉಳಿತಾಯದೊಂದಿಗೆ ಪ್ರಕೃತಿಯ ಸಂರಕ್ಷಣೆಗೆ ಕೂಡ ಸಹಕಾರ ನೀಡಿದಂತಾಗುತ್ತದೆ. ಸೋಲಾರ್ ವ್ಯವಸ್ಥೆಯ ಬಗ್ಗೆ ಇನ್ನೂ ಕೂಡ ಜನರ ಸ್ಪಂದನೆ ಅಗತ್ಯವಿದೆ. ಸೋಲಾರ್ ದೀಪಗಳ ಅಳವಡಿಕೆಯಲ್ಲಿ ಅಮಾಸೆಬೈಲು ಗ್ರಾಮ ದೇಶಕ್ಕೆ ಮಾದರಿಯಾಗಿದ್ದು ಈ ಯೋಜನೆಯನ್ನು ಗ್ರಾಮದ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸೆಲ್ಕೋ ಇಂಡಿಯಾ ಸಂಸ್ಥೆಯ ಅಧ್ಯಕ್ಷರಾದ ಹರೀಶ್ ಹಂದೆಯವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಇಂದಿಗೂ ಕೂಡ ವಿಶ್ವದ 128 ಕೋಟಿ ಜನರು ವಿದ್ಯುತ್ ಇಲ್ಲದೆ ಬದುಕಿದ್ದರೆ ದೇಶದ 25 ಕೋಟಿ ಜನರಿಗೆ ವಿದ್ಯುತ್ ವ್ಯವಸ್ಥೆ ತಲುಪಿಲ್ಲ. ಅಂತಹ ಸಂದರ್ಭದಲ್ಲಿ ಸೋಲಾರ್ ವ್ಯವಸ್ಥೆ ಸುಲಭದಲ್ಲಿ ಜನರಿಗೆ ತಲುಪಿಸುವತ್ತ ಸರಕಾರಗಳು, ಸಮಾಜ ಸೇವಾ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕಾಗಿದೆ. ಸೋಲಾರ್ ಉಪಯೋಗದಿಂದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವಿದೆ ಈ ಬಗ್ಗೆ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಮಟ್ಟದ ಜಾಗೃತಿ ಕೂಡ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸರಕಾರಗಳ ಮೇಲೆ ಒತ್ತಡ ಹೇರುವ ಕೆಲಸ ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕ್ ಮಂಗಳೂರು ಇದರ ಆಡಳಿತ ನಿರ್ದೇಶಕರು ಹಾಗೂ ಸಿಇಒ ಮಹಾಬಲೇಶ್ವರ ಭಟ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಕರ್ಣಾಟಕ ಬ್ಯಾಂಕ್ ಮಂಗಳೂರು ಇದರ ನಿವೃತ್ತ ಅಧ್ಯಕ್ಷರಾದ ಅನಂತಕೃಷ್ಣ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಎ ಜಿ ಕೊಡ್ಗಿ,   ಶ್ರೀ ಕ್ಷೇತ್ರ ಧರ್ಮಾಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್ ಹೆಚ್ಚ ಮಂಜುನಾಥ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶೀಲಾ ಕೆ ಶೆಟ್ಟಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ್ ಉಡುಪಿ, ಅಮಾಸೆಬೈಲು ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ತಿಮ್ಮಪ್ಪ, ಅಮಾಸೆಬೈಲು ಗ್ರಾಮಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಾಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ವಲಯಾಧ್ಯಕ್ಷರಾದ  ಅಪ್ಪಣ್ಣ ಹೆಗ್ಡೆ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ರವಿರಾಜ್ ಕೊಡವೂರು ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version