Home Mangalorean News Kannada News ಸೋಲಿನ ಭೀತಿಯಿಂದ ಮುನಿಯಾಲು ವಿರುದ್ದ ಬಿಜೆಪಿ ದೂರು – ದೀಪಕ್ ಕೋಟ್ಯಾನ್

ಸೋಲಿನ ಭೀತಿಯಿಂದ ಮುನಿಯಾಲು ವಿರುದ್ದ ಬಿಜೆಪಿ ದೂರು – ದೀಪಕ್ ಕೋಟ್ಯಾನ್

Spread the love

ಸೋಲಿನ ಭೀತಿಯಿಂದ ಮುನಿಯಾಲು ವಿರುದ್ದ ಬಿಜೆಪಿ ದೂರು – ದೀಪಕ್ ಕೋಟ್ಯಾನ್

ಉಡುಪಿ: ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರ ವಿರುದ್ದ ಬಿಜೆಪಿಗರು ಚುನಾವಣಾ ಆಯೋಗಕ್ಕೆ ದೂರು ದಾಖಲು ಮಾಡಿರುವುದು ಹತಾಶೆಯ ಪ್ರತೀಕ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿಗಳು ರದ್ದಾಗಲಿವೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿಗರು ಚುನಾವಣಾ ಆಯೋಗಕ್ಕೆ ದೂರು ನೀಡಿರುವುದು ಕೈಲಾಗದವ ಮೈ ಪರಚಿಕೊಂಡಂತೆ ಎಂಬಂತಾಗಿದೆ. ಬಿಜೆಪಿಗರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಶಾಸಕರು ಕಡಿಮೆ ಅಂತರದ ಮತಗಳನ್ನು ಗಳಿಸಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಜನರು ಬಿಜೆಪಿಯನ್ನು ತಿರಸ್ಕರಿಸಿದ್ದು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಅದಕ್ಕೆ ಸ್ಪಷ್ಟ ಉತ್ತರ ಲಭಿಸುವ ಸೂಚನೆ ದೊರಕಿದ್ದು ಇದೇ ಹೆದರಿಕೆಯಿಂದ ಇಂತಹ ಕೀಳು ಮಟ್ಟದ ರಾಜಕೀಯವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಓರ್ವ ಸಜ್ಜನ ರಾಜಕಾರಣಿಯನ್ನು ಸ್ಪರ್ಧೆಗೆ ಅವಕಾಶ ನೀಡಿದ್ದು ಅವರ ಗೆಲುವಿಗಾಗಿ ಉದಯ್ ಕುಮಾರ್ ಶೆಟ್ಟಿಯವರು ಅಖಾಡಕ್ಕೆ ಇಳಿದಿರುವುದು ಬಿಜೆಪಿಗರಿಗೆ ನುಂಗಲಾರದ ತುತ್ತಾಗಿದೆ.

ಕಾರ್ಕಳದ ಶಾಸಕರಾದ ಸುನೀಲ್ ಕುಮಾರ್ ಅವರು ಕೇವಲ ಸುಳ್ಳುಗಳ ಮೇಲೆ ಸಾಮ್ರಾಜ್ಯವನ್ನು ಕಟ್ಟಿದ್ದು ಬಿಟ್ಟರೆ ಅಭಿವೃದ್ಧಿ ಮಾತ್ರ ಶೂನ್ಯ. ಪರಶುರಾಮ ಥೀಂ ಪಾರ್ಕ್ ಹೆಸರಿನಲ್ಲಿ ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟ ಆಡಿದಾಗ ಬಿಜೆಪಿಗರ ಬಾಯಿಗೆ ಬೀಗ ಹಾಕಿದ್ದು ಅದರ ಕುರಿತು ಯಾವುದೇ ರೀತಿ ದೂರ ದಾಖಲಿಸುವ ದಮ್ಮು ತಾಕತ್ತು ತೋರಿಸಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು ಅವುಗಳನ್ನು ಅನುಷ್ಠಾನ ಮಾಡುವುದರ ಮೂಲಕ ನುಡಿದಂತೆ ನಡೆದಿರುವುದು ಶಾಸಕ ಸುನೀಲ್ ಕುಮಾರ್ ಅವರ ಆತಂಕಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಕೆಲವೇ ಅಂತರದಲ್ಲಿ ಗೆದ್ದ ಅವರು ಮುಂದಿನ ಚುನಾವಣೆಯಲ್ಲಿ ಠೇವಣಿಯೇ ಕಳೆದುಕೊಳ್ಳಲಿದ್ದಾರೆ ಎಂದು ದೀಪಕ್ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love

Exit mobile version