ಸೌದಿಯಲ್ಲಿ ಮೃತಪಟ್ಟ ಸುಳ್ಯದ ಯುವಕನ ಅಂತ್ಯಕ್ರಿಯೆಗೆ ಕೆಸಿಎಫ್, ದಾರುಲ್ ಹಿಕ್ಮ್ ನೆರವು
ದಮಾಮ್ : ಇಲ್ಲಿಗೆ ಸಮೀಪದ ಉರೈರಾ ಎಂಬಲ್ಲಿ ರಸ್ತೆ ಅಪಘಾಕ್ಕೊಳಗಾಗಿ ಕಳೆದ ವಾರ ಮೃತಪಟ್ಟಿದ್ದ ಸುಳ್ಯ ತಾಲೂಕಿನ ಪಂಜ – ನೆಕ್ಕಿಲ ನಿವಾಸಿ ಇಸ್ಮಾಈಲ್ (38) ಎಂಬ ಯುವಕನ ಅಂತ್ಯ ಕ್ರಿಯೆಯು ಇಲ್ಲಿನ ಅಲ್ – ಫುರ್ಖಾನ್ ಮಸೀದಿ ಖಬರಸ್ಥಾನದಲ್ಲಿ ನಡೆಯಿತು. ಕಳೆದ ಎಂಟು ವರ್ಷಗಳಿಂದ ಸೌದಿ ರಿಯಾದ್ ಪ್ರಾಂತ್ಯದ ಗೊರ್ನಾಥ ಎಂಬಲ್ಲಿ ಮನೆ ಚಾಲಕನಾಗಿ ದುಡಿಯುತ್ತಿದ್ದ ಇಸ್ಮಾಈಲ್ ಇತ್ತೀಚೆಗಷ್ಟೆ ಹೊಸ ವೀಸಾವೊಂದನ್ನು ಖರೀದಿಸಿ ಸ್ವಂತ ಗಾಡಿಯಲ್ಲಿ ದುಡಿಯಲು ಶುರು ಮಾಡಿದ್ದರು.
ನವೆಂಬರ್ 23 ರಂದು ರಿಯಾದ್ ನಿಂದ ದಮ್ಮಾಂ ವಿಮಾನ ನಿಲ್ದಾಣಕ್ಕೆ ತೆರಳಲು ಸೌದಿ ಕುಟುಂಬವೊಂದು ಇಸ್ಮಾಈಲ್ ನ ವಾಹನ ಬಾಡಿಗೆಗೆ ಗೊತ್ತುಪಡಿಸಿತ್ತೆನ್ನಲಾಗಿದೆ. ಹೀಗೆ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿ ವಾಪಾಸಾಗುತ್ತಿದ್ದ ಇಸ್ಮಾಈಲ್ ನ ವಾಹನ ದಮ್ಮಾಂ – ರಿಯಾದ್ ಹೆದ್ದಾರಿಯಲ್ಲಿ, ದಮ್ಮಾಂ ನಿಂದ ಸುಮಾರು 180 ಕಿ.ಮೀ ಅಂತರದಲ್ಲಿರುವ ಉರೈರಾ ಎಂಬಲ್ಲಿ ಪಲ್ಟಿಯಾಗಿ ಜಖಂಗೊಂಡಿದೆ. ಅಪಘಾತಕ್ಕೊಳಗಾದ ವಾಹನದಿಂದ ಚಾಲಕನು ಹೊರಗೆಸೆಯಲ್ಪಟ್ಟಿದ್ದು ಎಸೆತದ ರಭಸಕ್ಕೆ ಸ್ತಳದಲ್ಲೇ ಅಸುನೀಗಿರಬಹುದೆಂದು ಶಂಕಿಸಲಾಗಿದೆ. ಮೃತದೇಹದ ಬಗ್ಗೆ ಯಾರೋ ಸಾರ್ವಜನಿಕರು ಹೆದ್ದಾರಿ ಪೋಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೋಲೀಸರು ಮೃತದೇಹವನ್ನು ಸ್ಥಳೀಯ ಕಿಂಗ್ ಖಾಲಿದ್ ಆಸ್ಪತ್ರೆಗೊಯ್ದಿದ್ದಾರೆ.
ರಿಯಾದ್ ನಿಂದ ಬಾಡಿಗೆಗೆ ತೆರಳಿದ್ದ ಇಸ್ಮಾಈಲ್ ನ ಬಗ್ಗೆ ಮೂರು ದಿನಗಳ ತನಕ ಸೌದಿಯಲ್ಲೇ ಇರುವ ಸಂಬಂಧಿಕರಿಗಾಗಲೀ ಮಿತ್ರರಿಗಾಗಲೀ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಈ ನಡುವೆ ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾಮಾಜಿಕ ತಾಣಗಳ ಮೂಲಕ ಆಸ್ಪತ್ರೆಯಲ್ಲಿರುವ ಕನ್ನಡಿಗನೊಬ್ಬನ ಅಜ್ಞಾತ ಮೃತದೇಹದ ಬಗ್ಗೆ ಮಾಹಿತಿ ರವಾನಿಸಿದ್ದು ಈ ಮಾಹಿತಿಯನ್ನಾಧರಿಸಿ ಸಡೆಸಿದ ಶೋಧನೆಯಿಂದ ಕಾಣೆಯಾದ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದು ಬಂತು.
ಮರಣದ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಸ್ಪಂದಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕಾರ್ಯಕರ್ತರು ಸಂಘಟನೆಯ ಮುಖಂಡರಿಗೆ ಸುದ್ದಿ ಮುಟ್ಟಿಸಿ ಅವರ ನೆರವು ಕೋರಿದ್ದಾರೆ. ಜತೆಗೆ ರಿಯಾದ್ ನಲ್ಲಿರುವ ”ದಾರುಲ್ ಹಿಕ್ಮ ಬೆಳ್ಳಾರೆ” ಇದರ ರಿಯಾದ್ ಸಮಿತಿಯ ನಾಯಕರೂ ಮೃತದೇಹದ ಮರಣೋತ್ತರ ಕ್ರಿಯೆಗಾಗಿ ನಿದ್ದೆಗೆಟ್ಟು ದುಡಿದಿದ್ದು ಎಲ್ಲರ ಪ್ರಯತ್ನದಿಂದ ಕುಟುಂಬಸ್ಥರ ಒಪ್ಪಿಗೆ ಪಡೆದು ಇಲ್ಲೇ ದಫನ ಮಾಡಲು ನಿರ್ಧರಿಸಲಾಯಿತು.
ಮರಣೋತ್ತರ ಪ್ರಕ್ರಿಯೆಗೆ ಅಗತ್ಯವಿರುವ, ಭಾರತೀಯ ರಾಯಭಾರ ಕಛೇರಿ, ಸೌದಿ ಪೋಲೀಸ್ ಇಲಾಖೆ, ಸ್ಥಳೀಯ ಆಸ್ಪತ್ರೆ, ಸೌದಿ ಕಾರ್ಮಿಕ ಪ್ರಾಧಿಕಾರ ಇತ್ಯಾದಿಗಳಿಂದ ದೊರೆಯಬೇಕಾದ ಕಾಗದಪತ್ರಗಳನ್ನು ಸರಿಪಡಿಸಲು ಕೆಸಿಎಫ್ ಸೌದಿ ಕೇಂದ್ರೀಯ ಸಮಿತಿ ಕೋಶಧಿಕಾರಿ ಅಬ್ಬಾಸ್ ಅಹ್ಮದ್ ಉಳ್ಳಾಲ್ ಹಾಗೂ ದಮ್ಮಾಂ ನಲ್ಲಿ ಅಗತ್ಯವಿರುವ ಕೆಲಸ ಕಾರ್ಯಗಳನ್ನು ನಿರ್ವಹಿಸಲು ”ದಾರುಲ್ ಹಿಕ್ಮ ಬೆಳ್ಳಾರೆ” ಇದರ ರಿಯಾದ್ ಸಮಿತಿ ಕಾರ್ಯದರ್ಶಿ ಝಕರಿಯಾ ಪಂಜ ಹಗಲಿರುಳೆನ್ನದೆ ದುಡಿದಿದ್ದು ಕುಟುಂಬಸ್ಥರು, ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ದಮ್ಮಾಂ ನಲ್ಲಿ ನಡೆದ ಅಂತ್ಯ ಕ್ರಿಯೆಯಲ್ಲಿ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ಕೆಸಿಎಫ್ ದಮ್ಮಾಂ, ಅಲ್ ಹಸಾ ಕಾರ್ಯಕರ್ತ ಹಕೀಮ್ ಜೋಹರಿ,ಸಮಾಜಿಕ ಕಾರ್ಯಕರ್ತ ಹುಸೈನ್ ಕೇರಳ, ರಿಯಾದ್ ಝೋನಲ್ ಕೋಶಾಧಿಕಾರಿ ಹನೀಫ್ ಬೆಳ್ಳಾರೆ, ”ದಾರುಲ್ ಹಿಕ್ಮ ಬೆಳ್ಳಾರೆ” ರಿಯಾದ್ ಸಮಿತಿ ಸದಸ್ಯರು, ಕೆಸಿಎಫ್ ಶಿಫಾ ಸೆಕ್ಟರ್ ಅಧ್ಯಕ್ಷ ಯೂಸುಫ್ ಚೆನ್ನಾರ್, ದಾರುಲ್ ಹಿಕ್ಮ ರಿಯಾದ್ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಸಅದಿ ಎಣ್ಮೂರು, ಸೌದಿಯಲ್ಲಿರುವ ಮೃತರ ಬಂಧು -ಮಿತ್ರಾದಿಗಳು ಹಾಗೂ ಸ್ಥಳೀಯರೂ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.