ಸೌದಿ ಅರೇಬಿಯಾದ 14 ತಿಂಗಳ ಗುಲಾಮಗಿರಿಯಿಂದ ಬಿಡುಗಡೆಯಾದ ಜೆಸಿಂತಾ

Spread the love

ಸೌದಿ ಅರೇಬಿಯಾದ 14 ತಿಂಗಳ ಗುಲಾಮಗಿರಿಯಿಂದ ಬಿಡುಗಡೆಯಾದ ಜೆಸಿಂತಾ

ಉಡುಪಿ: ಏಜೆಂಟ್‌ನಿಂದ ವಂಚನೆಗೊಳಗಾಗಿ ಸೌದಿಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಕಳದ ಮುದರಂಗಡಿಯ ಜೆಸಿಂತಾ ಅವರನ್ನು ಭಾರತಕ್ಕೆ ಕರೆ ತರುವಲ್ಲಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಯಶಸ್ವಿಯಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ  ಸಂಚಾಲಕ ಡಾ|ರವೀಂದ್ರನಾಥ್ ಶ್ಯಾನುಭಾಗ್ ಅವರು ಮುಂಬಯಿಯ ಮಾನವ ಕಳ್ಳಸಾಗಾಣಿಕೆಯ ಜಾಲದ ಮೂಲಕ ಸೌದಿಅರೇಬಿಯಾಕ್ಕೆ ಸಾಗಿಸಲ್ಪಟ್ಟು “ಯಾಂಬೂ” ಪಟ್ಟಣದ ಅರಬ್ಬಿಯ ಮನೆಯೊಂದರಲ್ಲಿ ಗುಲಾಮಳಾಗಿ ದಿನದೂಡುತಿದ್ದ ಮುದರಂಗಡಿಯ ಜೆಸಿಂತಾಳನ್ನು ಇದೀಗ ಅರೇಜೀವ ಸ್ಥಿತಿಯಲ್ಲಿ ಭಾರತಕ್ಕೆ ಕರೆತರಲಾಗಿದೆ. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಕಳೆದ ಏಪ್ರಿಲ್ ತಿಂಗಳಲ್ಲಿ ಜೆಸಿಂತಾಳ ರಕ್ಷಣೆಗಾಗಿ ಗಲ್ಫ ಕನ್ನಡಿಗರಿಗೆ ನೀಡಿದ ಕರೆಗೆ ಸ್ಪಂದಿಸಿದ ಜೆಡ್ಡಾದ ಎನ್.ಆರ್.ಐ. ಪೋರಂನ ಅಧ್ಯಕ್ಷ ರೋಶನ್ ರಾಡ್ರಿಗಸ್ ಮತ್ತವರ ಸಂಗಡಿಗರ ಸತತ ಪ್ರಯತ್ನದ ಫಲವಾಗಿ 14 ತಿಂಗಳ ಬಳಿಕ ಆಕೆ ತನ್ನ ಮಕ್ಕಳನ್ನು ಸೇರಿ ಕೊಂಡಿದ್ದಾಳೆ.

ಪ್ರಕರಣದ ಹಿನ್ನೆಲೆ

ಮುದರಂಗಡಿಯ ಜೆಸಿಂತಾಳ ಗಂಡ ತೀರಿಕೊಂಡಾಗ ತನ್ನ ಮೂರು ಮಕ್ಕಳ ಪಾಲನೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಆಕೆ ಉದ್ಯೋಗದ ಹುಡುಕಾಟದಲ್ಲಿದ್ದಳು. ಕತಾರ್‍ನಲ್ಲಿರುವ ಭಾರತೀಯ ಕುಟುಂಬವೊಂದಕ್ಕೆ ಮಕ್ಕಳ ಪಾಲನೆಗಾಗಿ ಮಹಿಳೆಯೋರ್ವಳ ಅಗತ್ಯವಿದೆ ಎಂದು ಸ್ಥಳಿಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ಜಾಹೀರಾತಿನಿಂದ ತಿಳಿದ ಜೆಸಿಂತಾ  ಮುಂಬಯಿಯ ರಿಕ್ರೂಟ್‍ಮೆಂಟ್ ಎಜೆನ್ಸಿಯನ್ನು ಸಂಪರ್ಕಿಸಿದಳು. ತಿಂಗಳಿಗೆ 25000 ರೂಪಾಯಿ ಕೊಡಿಸುವುದಾಗಿ ಎಜೆನ್ಸಿಯ ಮಾಲಕ ಶಾಬಾಜ್ ಖಾನ್ ಜೆಸಿಂತಾಗೆ ಆಮಿಶವೊಡ್ಡಿದ್ದ. ಯಾವುದೇ ಖರ್ಚುಗಳನ್ನು ತೆಗೆದುಕೊಳ್ಳದೇ ಪ್ರಯಾಣಕ್ಕೆ ಬೇಕಾಗಿರುವ ಪಾಸ್‍ಪೋರ್ಟ್ ಹಾಗೂ ವೀಸಾಗಳನ್ನು ಮಂಗಳೂರಿನಲ್ಲಿರುವ ತನ್ನ ಪ್ರತಿನಿಧಿಯ  ಮೂಲಕ ಮಾಡಿಸುವ ಭರವಸೆಯನ್ನೂ ನೀಡಿದ. ಅತನ ಮಾತಿನ ಮೇಲಿನ ವಿಶ್ವಾಸದಿಂದಾಗಿ ಮುಂಬಯಿಗೆ ತೆರಳಿದ ಜೆಸಿಂತಾಳನ್ನು ಕೆಲವು ದಿನಗಳ ತನಕ ಮುಂಬಯಿಯ ಡೊಂಗ್ರಿ ಎಂಬಲ್ಲಿ ಮನೆಯೊಂದರಲ್ಲಿ ಇರಿಸಲಾಗಿತ್ತು. ಅಲ್ಲಿಂದ ಗೋವಾ ಹಾಗೂ ದಿಲ್ಲಿಯ ಮೂಲಕ ಇನ್ನಿಬ್ಬರು ಯುವತಿಯರೊಂದಿಗೆ ಜೂನ್ 19ರಂದು ದುಬೈಗೆ ಸಾಗಿಸಲಾಯಿತು.  ಅಲ್ಲಿಂದ ಯಾವ ದೇಶದ  ವಿಮಾನವನ್ನೇರಿದೆ ಎಂದು ಆಕೆಗೆ ತಿಳಿಯಲೇಇಲ್ಲ. ಮರುದಿನ ಯಾವುದೋ ಒಂದು ನಿಲ್ದಾಣದಲ್ಲಿ ವಿಮಾನ ಇಳಿದಾಗ ತಾನು ಬಂದಿದ್ದು ಕತಾರ್ ದೇಶಕ್ಕಲ್ಲ, ಸೌದಿ ಅರೇಬಿಯಾಕ್ಕೆ ಎಂದು ತಿಳಿದ ಜೆಸಿಂತಾಗೆ ಆಕಾಶವೇ ಕಳಚಿಬಿದ್ದಂತಾಯಿತು.

ವಿಮಾನ ನಿಲ್ದಾಣಕ್ಕೆ ಬಂದಿದ್ದ ಉದ್ಯೋಗದಾತನ ಡ್ರೈವರನೊಂದಿಗೆ ವಿಚಾರಿಸಿದಾಗ ಅವಳನ್ನು ಕರೆದುಕೊಂಡು ಹೋಗುತ್ತಿರುವ ಊರಿನ ಹೆಸರು ಯಾಂಬು ಎಂದು ತಿಳಿಯಿತಾದರೂ ಉದ್ಯೋಗದಾತನ ಹೆಸರೇನು, ಆತ ಯಾರು ಎಂದು ತಿಳಿಯಲೇ ಇಲ್ಲ.

ಜೆಸಿಂತಾ ಅನುಭವಿಸಿದ ನರಕಯಾತನೆ

ಯಜಮಾನನ ತಾಯಿ, ಆತನ ಮೂವರು ಮಡದಿಯರು ಹಾಗೂ ಹತ್ತಾರು ಮಕ್ಕಳಿದ್ದ ಮೂರು ಬೃಹತ್ ಬಂಗ್ಲೆಗಳಲ್ಲಿ ಬೆಳಗ್ಗೆ ಆರುಗಂಟೆಯಿಂದ ರಾತ್ರಿ ಎರಡುಗಂಟೆಗಳ ತನಕವೂ ಎಲ್ಲರ ಚೌಕರಿ ಮಾಡಬೇಕಾಗಿತ್ತು. ಅವರೆಲ್ಲರ ಊಟ ಮುಗಿದ ಮೇಲೆ ಆಹಾರ ಉಳಿದರೆ ಮಾತ್ರ ಜೆಸಿಂತಾಳಿಗೆ ಊಟ ! ಇಲ್ಲದಿದ್ದಲ್ಲಿ ಉಪವಾಸದಿಂದ ಮಲಗಬೇಕಾಗುತಿತ್ತು.  ದಿನಕ್ಕೆ 16 ಗಂಟೆಗೂ ಅಧಿಕ ಕಾಲದ ದುಡಿತದಿಂದಾಗಿ ಆಕೆಯ ಆರೋಗ್ಯ ಕೆಡುತ್ತಾ ಬಂತು. ದಿನವಿಡೀ ಹಸಿವೆಯಿಂದ ಬಳಲಿದರೆ, ಪ್ರತಿ ರಾತ್ರಿ ಜ್ವರದಿಂದ ನರಳಿದಳು. ತನ್ನ ಆರೋಗ್ಯ ಸರಿಯಿಲ್ಲ, ತನ್ನಿಂದ ಕೆಲಸಮಾಡಲು ಸಾಧ್ಯವಿಲ್ಲ ದಯವಿಟ್ಟು ತನ್ನನ್ನು ಹಿಂದಕ್ಕೆ ಕಳುಹಿಸಿ ಎಂದು ಆಕೆ ಪರಿಪರಿಯಾಗಿ ಗೋಗರೆದರೂ ಕೇಳುವವರೇ ಇರಲಿಲ್ಲ. “ನಿನ್ನ ನೌಕರಿಗಾಗಿ ಮಾಡಿರುವ ಕಂಟ್ರಾಕ್ಟ್ ಮುಗಿಯುವ ತನಕ ಯಾವ ಕಾರಣಕ್ಕೂ ನಿನ್ನನು ಕಳುಹಿಸುವುದಿಲ್ಲ” ಎಂದು ಯಜಮಾನ ಹಾಗಾಗ ಗುಡುಗುತ್ತಿದ್ದ. ಕಂಟ್ರಾಕ್ಟ್ ಮಾಡಿದ್ದು ಯಾರು, ಯಾವಾಗ, ಎಷ್ಟು ವರ್ಷಕ್ಕೆ, ಶರ್ತಗಳೇನು ಮುಂತಾದವುಗಳು ಆಕೆಗೆ ತಿಳಿಯಲೇ ಇಲ್ಲ. ಮಾಡಿದ ಕೆಲಸ ಸರಿಯಾಗಲಿಲ್ಲ ಎಂಬ ಕಾರಣಕ್ಕೆ ಅನೇಕ ಬಾರಿ ಆಕೆಗೆ ದೈಹಿಕವಾಗಿ ಹಿಂಸಿಸಿದ್ದೂ ಇದೆ.

ಈ ನರಕದಲ್ಲಿ ಪ್ರತಿದಿನ ಸಾಯುವುದಕ್ಕಿಂತ ತನಗೆ ಶಿಕ್ಷೆಯಾದರೂ ಚಿಂತೆಯಿಲ್ಲ ಎಂದು ಕಳೆದ ನವೆಂಬರ್ 28ರ ರಾತ್ರಿ ಜಸಿಂತಾ ಮನೆಯಿಂದ ಓಡಿಹೋಗಿ ಭಾರತಕ್ಕೆ ಬರಲು ಪ್ರಯತ್ನಿಸಿದಳು. ಸ್ಥಳಿಯನೋರ್ವ ಆಕೆಗೆ ಭಾರತೀಯ ರಾಯಭಾರಿ ಕಛೇರಿಗೆ ಕೊಂಡೊಯ್ಯೂವ ನೆಪದಲ್ಲಿ ಪೋಲಿಸ್ ಠಾಣೆ ಸೇರಿಸಿದ. ಆಕೆಯನ್ನು ವಿಚಾರಿಸಿದ ಪೋಲಿಸರು ಪುನಃ ಅದೇ ಉದ್ಯೋಗದಾತನ ಮನೆಗೆ ಸೇರಿಸಿದರು ಆ ದಿನ ಮನೆಯ ಗಂಡಸರೆಲ್ಲ ಸೇರಿ ಆಕೆಗೆ ಹಿಗ್ಗಾಮುಗ್ಗಾ ತಳಿಸಿದರು. ತಲೆಯನ್ನು ಗೋಡೆಗೆ ಅಪ್ಪಳಿಸಿದ ಪರಿಣಾಮವಾಗಿ ಆಕೆ ಸ್ಮøತಿಯನ್ನೂ ಕಳೆದುಕೊಂಡಿದ್ದಳು.

ಪ್ರತಿಷ್ಠಾನದ ಪ್ರಯತ್ನ

ದಶಂಬರ್ ಮೊದಲ ವಾರದಲ್ಲಿ ಅದೇ ಊರಿನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಾರು ಚಾಲಕನೋರ್ವನ ನೆರವಿನಿಂದ ಜೆಸಿಂತಾ ಕಾರ್ಕಳದಲ್ಲಿರುವ ತನ್ನ ಮಕ್ಕಳನ್ನು ಸಂಪರ್ಕಿಸಿ ತಾನು ಮೋಸಹೋಗಿರುವ ಕುರಿತು ಮಾಹಿತಿ ನೀಡಿ ಹೇಗಾದರೂ ಮಾಡಿ ತನ್ನನ್ನು ಬಿಡುಗಡೆ ಮಾಡುವಂತೆ ಕೋರಿದಳು.

2016ರ ದಶಂಬರ್ 30ರಂದು ಜೆಸಿಂತಾಳ ಮೂವರು ಮಕ್ಕಳೂ ಚರ್ಚ ಗುರುಗಳ ನೆರೆವಿನಿಂದ  ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದರು. ಅವರೊಂದಿಗೆ ಜೆಸಿಂತಾ ಕೆಲಸ ಮಾಡುವ ಮನೆಯ ವಿಳಾಸ, ಫೋನ್ ನಂಬ್ರ, ಮುಂತಾದ ಯಾವುದೇ ವಿವರಗಳಿರಲಿಲ್ಲ. ಕೊನೆಯ ಪಕ್ಷ ಆಕೆಯನ್ನು ಸೌದಿಗೆ ಕಳುಹಿಸಿದ ಎಜೆಂಟರ ವಿವರಗಳನ್ನಾದರೂ ನೀಡಿದಲ್ಲಿ ಆಕೆಯನ್ನು ತಲುಪುವುದು ಸಾಧ್ಯವಿತ್ತು.  ಅವರಲ್ಲಿ ಅದೂ ಇರಲಿಲ್ಲ.

ಕೊನೆಗೆ ಅವರ ಮನೆಯಲ್ಲ ಹುಡುಕಾಡಿದಾಗ ಮುಂಬಾಯಿಯ ಶಾಬಾಜ್‍ಖಾನನ ಪ್ರಕಟಣೆ, ವಿಳಾಸ ಹಾಗೂ ಮೂರು ಫೋನ್ ನಂಬ್ರಗಳು ಸಿಕ್ಕಿದವು. ಜೆಸಿಂತಾಳ ಪಾಸ್‍ಪೋರ್ಟ್, ಆಕೆ ಪ್ರಯಾಣಿಸಿದ ದಿನಾಂಕ ಇತ್ಯಾದಿಗಳ ಮೂಲಕ ವೈಬ್ ಸೈಟ್ ಪರಿಶೀಲನೆÉ ನಡೆಸಿದಾಗ ಆಕೆ 90 ದಿನಗಳ “ವಿಸಿಟಿಂಗ್ ವೀಸಾ”ದಲ್ಲಿ ಸೌದಿಯನ್ನು ಪ್ರವೇಶಿಸಿರುವುದು ತಿಳಿಯಿತು. ಆದರೆ ಆಕೆಯೊಡನೆ ಉದ್ಯೋಗದ ಅನುಮತಿ ಪತ್ರ ಇದೆಯೋ ಎಂದು ತಿಳಿಯಲಿಲ್ಲ. ಆಕೆಯ ವೀಸಾವನ್ನು ದೇಹಲಿಯ Trio Tracks Travel Consultants ಎಂಬ ಎಜೆನ್ಸಿಯ ಮೂಲಕ ಪಡೆಯಲಾಗಿತ್ತು. ವಿದೇಶಾಂಗ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಈ ಎಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಿರುವುದನ್ನು ಕಂಡಾಗ ಇದೊಂದು ಮಾನವ ಕಳ್ಳಸಾಗಣಿಕೆ ಜಾಲವಿರಬಹುದೇ ಎಂಬ ಸಂಶಯ ಬರತೊಡಗಿತು !

ಹಣ ಪಡೆದವರು ಯಾರು ?

ಇದೇ ವೇಳೆ  ಜೆಸಿಂತಾರ ಉದ್ಯೋಗದಾತ(ಅಬ್ದುಲ್ಲ ಅಲ್ಮುತಾೈರಿ)ನ ವಿಳಾಸ ಹಾಗೂ ವಿವರಗಳು ದೊರೆತವು. ಅಬ್ದುಲ್ಲ ಅಲ್ಮುತಾೈರಿಯನ್ನು ನೇರವಾಗಿ ವಿಚಾರಿಸಿದಾಗ “ ಎರಡು ವರ್ಷಗಳ ಕಾಲ ತನ್ನ ಮನೆಯಲ್ಲಿ ಕೆಲಸಮಾಡಲು ಜೆಸಿಂತಾ ಒಪ್ಪಂದ(Contract) ಮಾಡಿಕೊಂಡಿದ್ದಾಳೆ. ಇದಕ್ಕಾಗಿ ಭಾರತೀಯ ಎಜೆಂಟ್ ನನ್ನಿಂದ 24000 ಸೌದಿ ರಿಯಾಲ್ (ಸುಮಾರು 5ಲಕ್ಷ ರೂಪಾಯಿ)ಗಳನ್ನು ಪಡೆದುಕೊಂಡಿದ್ದಾನೆ. ಅವನ್ನು ಹಿಂದಿರುಗಿಸಿದಲ್ಲಿ ಜೆಸಿಂತಾಳನ್ನು ಭಾರತಕ್ಕೆ ಕಳುಹಿಸಲಾಗುವುದು” ಎಂದು ತಿಳಿಸಿದ.

ಈ ಹಣವನ್ನು ಜೆಸಿಂತಾಳ ಕುಟುಂಬದವರಂತೂ ಪಡೆದುಕೊಂಡಿರಲಿಲ್ಲ. ಹಾಗಾದರೆ ಹಣ ಲಪಟಾಯಿಸಿದವರನ್ನು ಕಂಡುಹುಡುಕಲು ಪೋಲಿಸರಿಗೆ ದೂರು ನೀಡಲು ನಿರ್ಧರಿಸಲಾಯಿತು.

ನಿಷ್ಪ್ರಯೋಜಕ ಪೊಲೀಸ್ ಕಾರ್ಯಚರಣೆ

ದಶಂಬರ್ 30 ರಂದು ದ.ಕ. ಜಿಲ್ಲಾಡಳಿತದ ಮೂಲಕ ಮಂಗಳೂರಿನ ಸಹಾಯಕ ಪೊಲೀಸ್ ಕಮಿಶನರಿಗೆ ಲಿಖಿತ ದೂರನ್ನು ನೀಡಿದ ಪ್ರತಿಷ್ಠಾನವು ಈ ಕುರಿತ ತನಿಖೆ ನಡೆಸುವಂತೆ ವಿನಂತಿಸಿತು.

ಮಂಗಳೂರು ಪ್ರತಿನಿಧಿಯ ಮೂಲಕ ದ.ಕ. ಪೊಲೀಸರು ಮುಂಬೈ ಎಜೆಂಟ್‍ನನ್ನು ಬಂಧಿಸಿ ವಿಚಾರಿಸುತ್ತಾರೆ ಎಂದು ನಿರೀಕ್ಷಿಸಿದ್ದೆವು. ಮಂಗಳೂರಿನ ಪ್ರತಿನಿಧಿ ಜೇಮ್ಸ್ ಎಂಬವರನ್ನು ವಿಚಾರಿಸಿದರಾದರೂ ಅವರ ಮೂಲಕ ಮುಂಬೈ ಎಜಂಟರನ್ನು ತಲಪುವ ಯಾವುದೇ ಕಾರ್ಯಚರಣೆ ನಡೆಯಲಿಲ್ಲ ಎಫ್.ಐ.ಆರ್ ಕೂಡ ದಾಖಲಾಗಲಿಲ್ಲ. ಪುನಃ ಪುನಃ ಪತ್ರಿಕಾ ಗೋಷ್ಟಿಗಳನ್ನು ನಡೆಸಿ ಆಗ್ರಹಿಸಿದ ನಂತರ ಸುಮಾರು ಏಳೂವರೆ ತಿಂಗಳ ಅನಂತರ ಮಂಗಳೂರು ಪೋಲಿಸರು ಎಫ್.ಐ.ಆರ್ ದಾಖಲಿಸಿ ಮಂಗಳೂರಿನ ಪ್ರತಿನಿಧಿ ಜೆಮ್ಸ್ ಅವರನ್ನು ಬಂಧಿಸಿದರೇ ವಿನಃ ಮುಂಬಾಯಿಯ ಮುಖ್ಯ ಎಜೆಂಟ್ ಶಾಭಾಜ್ ಖಾನ್‍ನ ಸಂಪರ್ಕವನ್ನೇ ಮಾಡಲಿಲ್ಲ. ಹಾಗದರೆ ಆತ ಲಪಟಾಯಿಸಿದ ಹಣಪಡೆಯುವುದೆಂತು ?

ಸುಮಾರು ನಾಲ್ಕು ತಿಂಗಳು ಕಳೆದರೂ ಹಣ ಲಪಟಾಯಿಸಿದ ಮುಂಬೈ ಎಜೆಂಟ್ ಶಾಬಾಜ್ ಖಾನ್ ಬಂಧನ ಅಥವಾ ವಿಚಾರಣೆ ನಡೆಯದಿದ್ದಾಗ ಎಪ್ರಿಲ್ 6 ರಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ವಿವರವಾದ ಪತ್ರ ಬರೆಯಲಾಯಿತು. ಟ್ವಿಟರ್ ಮೂಲಕವೂ ಅವರ ಗಮನ ಸೆಳೆದೆವು. ಕೇವಲ ಎರಡು ವಾರದೊಳಗೆ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿರೇಂದರ್ ಶರ್ಮಾರವರು ಮಹಾರಾಷ್ಟ್ರದ ಗೃಹ ಸಚಿವರಿಗೂ ಡೆರೆಕ್ಟರ್ ಜನರಲ್ ಆಫ್ ಪೊಲೀಸ್ ಇವರಿಗೂ ಪತ್ರಬರೆದು ಪ್ರಕರಣದ ತನಿಖೆಗೆ ಆದೇಶ ನೀಡಿದರು. ಇದಾಗಿ ನಾಲ್ಕು ತಿಂಗಳುಗಳು ಕಳೆದರೂ ಮುಂಬೈ ಪೊಲೀಸರಿಂದಲೂ ಕಾರ್ಯಚರಣೆ ನಡೆಯಲಿಲ್ಲ.

ಗಲ್ಫ್ ಕನ್ನಡಿಗರಿಗೆ ಕರೆ

ಈ ಮೇಲೆ ಸೂಚಿಸಿದ ಎಲ್ಲಾ ಸರಕಾರಿ ಇಲಾಖೆಗಳು ನಿಷ್ಪ್ರಯೋಜಕವೆನಿಸಿದ ಮೇಲೆ ಜೆಸಿಂತಾಳ ಉದ್ಯೋಗದಾತನೊಂದಿಗೆ ವ್ಯವಹರಿಸಲು ಸಹಾಯ ಮಾಡಬೇಕೆಂದು ಗಲ್ಫ್ ಕನ್ನಡಿಗರಿಗೆ ಕರೆ ನೀಡಿದೆವು. ಅದಾಗಲೇ ಜೆಸಿಂತಾಳ ಆರೋಗ್ಯ ಸಂಪೂರ್ಣ ಹಾಳಾಗಿತ್ತು. ನಮ್ಮ ಕರೆಗೆ ಒಗೊಟ್ಟ ಮಂಗಳೂರು ಮೂಲದ ಎನ್.ಆರ್.ಐ. ಫೋರಂನ ಸ್ಥಾಪಕ ಶ್ರೀ ಬಿ.ಕೆ. ಶೆಟ್ಟಿ ಹಾಗೂ ಇಂದಿನ ಅಧ್ಯಕ್ಷ ಶ್ರೀ ರೋಶನ್ ರಾಡ್ರಿಗಸ್ ಅವರು ವೇದಿಕೆಯನ್ನು ಸಂಪರ್ಕಿಸಿ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದರು. ಹಂತ ಹಂತವಾಗಿ ಅಬ್ದುಲ್ ಅಲ್ಮುತಾೈರಿಯೊಂದಿಗೆ ವ್ಯವಹರಿಸಿ ಆತನಿಗೆ ನೀಡಬೇಕಾದ ಮೊತ್ತವನ್ನು ಕಡಿಮೆಗೊಳಿಸಿದರು. ಅಂತೂ ಸಪ್ಟೆಂಬರ್ 16 ರಂದು ಜೆಸಿಂತಾಳನ್ನು ಯಾಂಬುವಿನಿಂದ ಬಿಡುಗಡೆಗೊಳಿಸಿ ಜೆಡ್ಡಾ ತಲುಪಿಸಿದರು.

ಇದೀಗ ಇನ್ನೊಂದು ಸಮಸ್ಯೆ ಎದುರಾಯಿತು. ಜೆಸಿಂತಾ ಅರಬ್ಬಿಯಿಂದ ಬಿಡುಗಡೆಗೊಂಡರೂ ಭಾರತಕ್ಕೆ ಬರುವಂತಿರಲಿಲ್ಲ. ಏಕೆಂದರೆ ಅವರಿಗೆ ಉದ್ಯೋಗದ ಅನುಮತಿ (Work permit)ಇರಲೇ ಇಲ್ಲ. ಜೆಸಿಂತಾಳನ್ನು ಮಾನವ ಕಳ್ಳ ಸಾಗಾಣಿಕಾ  ಜಾಲದವರಿಂದ ನೇರವಾಗಿ ಅಬ್ದುಲ್ಲಾ ಖರೀದಿಸಿದ್ದುದರಿಂದ  ವರ್ಕ್‍ಪರ್ಮಿಟ್ ಮಾಡದೆಯೇ ಕೆಲಸಕ್ಕಿಟ್ಟುಕೊಂಡಿದ್ದರು ! ಈ ಪರಿಸ್ಥಿತಿಯಲ್ಲಿ ಯಾವುದೇ ಸಮಯದಲ್ಲಿ ಜೆಸಿಂತಾಳನ್ನು ಬಂಧಿಸಿ ಶಾಶ್ವತವಾಗಿ ಜೈಲಿಗೆ ತಳ್ಳುವ ಸಾಧ್ಯತೆ ಇತ್ತು. ರೋಶನ್ ಹಾಗೂ ಅವರ ಸಂಗಡಿಗರು ಆರು ದಿನಗಳ ಕಾಲ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಕೊನೆಗೂ ವರ್ಕ್ ಪರ್ಮಿಟ್ ಪಡೆಯುವಲ್ಲಿ ಸಫಲರಾದರು.

ಮಾನವ ಕಳ್ಳ ಸಾಗಾಣಿಕಾದಾರರ ಜಾಲಕ್ಕೆ ಸಿಕ್ಕಿ ನ್ಯಾಯಬಾಹಿರವಾಗಿ ಸೌದಿ ಅರೇಬಿಯಾಕ್ಕೆ ಸಾಗಿಸಲ್ಪಟ್ಟ ಜೆಸಿಂತಾ ಕೊನೆಗೆ ಹೃದಯವಂತರಿಂದ ರಕ್ಷಿಸಲ್ಪಟ್ಟು ನ್ಯಾಯ ಮಾರ್ಗದಲ್ಲೇ ಹೋರಬಂದು ಗೌರವ ಪೂರ್ವಕವಾಗಿ ಸಪ್ಟೆಂಬರ್ 22 ರಂದು ಭಾರತ ಪ್ರವೇಶಿಸಿದರು.

14 ತಿಂಗಳ ನಂತರ ಕುಟುಂಬದವರನ್ನು ಭೇಟಿ ಮಾಡಿ ಭಾವುಕರಾದ ಜೆಸಿಂತಾ ಅವರು ‘ಇನ್ನು ಮುಂದೆ ಇಲ್ಲಿಯೇ ಯಾವುದೇ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಇರುತ್ತೇನೆ. ದೇಶಕ್ಕೆ ಮರಳುವ ಭರವಸೆಯೇ ಕಳೆದುಕೊಂಡಿದ್ದ ನನಗೆ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನ್‌ಭಾಗ್ ಅವರು ಸಹಾಯ ಮಾಡಿದರು. ಅವರ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ’ ಎಂದರು.


Spread the love
3 Comments
Inline Feedbacks
View all comments
YOGISH SHETTY KADEKAR
7 years ago

Great job from the Human rights Federation , Udupi. Salute to Sri Ravindra Shanbough and others who assisted to rescue the lady.
It is unfortunate that the concerned Govt departments are not doing anything to prevent such incidents.

Shankar
7 years ago

Excellent and unbelievable job done by all.

7 years ago

It is good you wrote one female suffered in Saudi. but why you dont write crore or people are enjoying in Saudi and making money and cleared their loan. you want to discourage person going to abroad?