ಸ್ಥಳೀಯರಿಗೆ ಟೋಲ್ ವಿನಾಯತಿ ನೀಡದೆ ಪ್ರತಿಭಟನೆ ನಿಲ್ಲದು; ಸಾಸ್ತಾನದಲ್ಲಿ ಹೋರಾಟಗಾರರ ಧೃಡ ನಿಲುವು
ಉಡುಪಿ: ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನ ಟೋಲ್ ವ್ಯಾಪ್ತಿಯ ಕಿಮಿ ವ್ಯಾಪ್ತಿಯ ಸ್ಥಳೀಯರಿಗೆ ವಿನಾಯತಿ ನೀಡಬೇಕು ಎಂದು ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ ಇದರ ನೇತೃತ್ವದಲ್ಲಿ ಶುಕ್ರವಾರ ಕರೆ ನೀಡಿದ್ದ ಕೋಟ ಬಂದ್ ಹಾಗೂ ಪ್ರತಿಭಟನಾ ಸಭೆ ವಿವಿದ ಸ್ವಾಮೀಜಿಗಳು, ಕ್ರೈಸ್ತ ಮುಸ್ಲಿಂ ಧರ್ಮಗುರುಗಳು, ಶಾಸಕರು, ಸಂಸದರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ನಾಗರಿಕರ ಸಹಕಾರದೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿತು. ಸಭೆಯಲ್ಲಿ ಭಾಗವಹಿಸಿದ ನಾಯಕರೆಲ್ಲರೂ ಸ್ಥಳೀಯರಿಗೆ ಟೋಲ್ ನಲ್ಲಿ ವಿನಾಯತಿ ನೀಡಬೇಕು ಎಂದು ಆಗ್ರಹಿಸಿದರು ಅಲ್ಲದೆ ನವಯುಗ ಕಂಪೆನಿ ಸಾರ್ವಜನಿಕರೊಂದಿಗೆ ನಡೆಸುವ ದೌರ್ಜನ್ಯದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಮಾರು ಸಾಂದಿಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಹೋರಾಟಗಳು ನಡೆಸುವುದು ಎಷ್ಟು ಮುಖ್ಯವೊ ಅವುಗಳಲ್ಲಿ ಜನರ ಸಹಭಾಗಿತ್ವ ಕೂಡ ಅಷ್ಟೇ ಮುಖ್ಯವಾಗಿದೆ. ನಮ್ಮ ರಸ್ತೆಗೆ ನಾವು ಟೋಲ್ ಕೊಟ್ಟು ಪ್ರಯಾಣಿಸುವುದು ಖಂಡನೀಯ ಸಂಗತಿ ಕೇವಲ ಉಡುಪಿ ಜಿಲ್ಲೆ ಮಾತ್ರವಲ್ಲದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಟೋಲ್ ಮುಕ್ತವಾಗಬೇಕು. ಯಾವುದೇ ಹೋರಾಟದಲ್ಲೂ ಸೋಲು ಗೆಲುವ ಸಾಮಾನ್ಯ ಆದರೆ ಒಗ್ಗಟ್ಟಿನ ಭಾಗವಹಿಸುವಿಕೆ ಇರಬೇಕು. ಇಂದು ಜನರ ಹಕ್ಕುಗಳ ರಕ್ಷಣೆ ಮಾಡಲು ಜನಪ್ರತಿನಿಧಿಗಳನ್ನು ನಾವು ಆರಿಸಿ ಕಳುಹಿಸಿದ್ದು ಅವರೇ ಇಂದು ಪ್ರತಿಭಟನೆ ಮಾಡುವ ದೌರ್ಭಾಗ್ಯ ಬಂದಿರುವುದು ಖೇದದ ಸಂಗತಿ ಎಂದರು.
ಬಾಳೆಕುದ್ರು ಮಠದ ನರಸಿಂಹಾಶ್ರಮ ಸ್ವಾಮೀಜಿ ಮಾತನಾಡಿ ಇದುವರೆಗೆ ಮುಕ್ತವಾಗಿ ನಾವು ಮನೆಯಿಂದ ಹೊರಬರುತ್ತಿದ್ದೇವು ಆದರೆ ಈಗ ಮನೆಯಿಂದ ಹೊರಗೆ ಬರಬೇಕಾದರೆ ಟೋಲ್ ಕಟ್ಟುವ ಪರಿಸ್ಥಿತಿ ನಮಗೆ ಉದ್ಬವವಾಗಿದೆ. ಟೋಲ್ ಹೆಸರಿನಲ್ಲಿ ನವಯುಗ ಕಂಪೆನಿ ಸ್ಥಳೀಯರ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ. ಸ್ಥಳೀಯರಿಗೆ ಟೋಲ್ ಇಲ್ಲದೆ ಮುಕ್ತವಾಗಿ ತಮ್ಮ ವಾಹನಗಳಲ್ಲಿ ತಿರುಗಾಡುವಂತಹ ಅವಕಾಶ ಆಗಬೇಕು. ಯಾವುದೇ ಹೋರಾಟ ಆರಂಭಿಸುವುದು ಸುಲಭ ಆದರೆ ಅದನ್ನು ಕೊನೆ ಮುಟ್ಟಿಸುವುದು ಅಷ್ಟೇ ಕಷ್ಟದ ಕೆಲಸ. ಸಾರ್ವಜನಿಕರು ಕೊನೆಯವರೆಗೂ ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗವಹಿಸಿದಾಗ ಮಾತ್ರ ಯಶಸ್ಸು ಖಂಡಿತ ಸಿಗಲಿದೆ. ತಮ್ಮ ಮಠದ ವತಿಯಿಂದ ತಾವು ಕೊನೆಯ ವರೆಗೂ ಹೋರಾಟದಲ್ಲಿ ಭಾಗಿಯಾಗುವುದಾಗಿ ಹೇಳಿದರು.
ಸಾಸ್ತಾನ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ. ಜಾನ್ ವಾಲ್ಟರ್ ಮೆಂಡೊನ್ಸಾ ಮಾತನಾಡಿ ನಮ್ಮದೇ ಊರಿನಲ್ಲಿ ನಾವು ಸ್ವತಂತ್ರವಾಗಿ ತಿರುಗಾಡುವ ಹಕ್ಕನ್ನು ಬೇರೆ ರಾಜ್ಯದಿಂದ ಬಂದ ಕಂಪೆನಿಯೊಂದು ಕಿತ್ತುಕೊಂಡಿದೆ. ನಾವು ಎಲ್ಲೋ ನೆರೆ ಬಂದಾಗ ಕೇಳಿ ಸುಮ್ಮನೆ ಕುಳಿತಿದ್ದೇವು ಆದರೆ ಇಂದು ನಮ್ಮ ಮನೆಗೆ ನೆರೆ ಬಂದಾಗ ಅದರ ಪರಿಣಾಮ ನಮಗೆ ತಿಳಿಯುತ್ತಿದೆ. ನಮ್ಮ ವಾಹನಗಳಿಗೆ ಸೂಕ್ತ ತೆರಿಗೆಯನ್ನು ಕಟ್ಟಿದ ಬಳಿಕವೂ ನಾವು ಟೋಲ್ ಕಟ್ಟಲು ಒತ್ತಡ ಹೇರುವುದು ಸರಿಯಲ್ಲ. ಇದರ ವಿರುದ್ದ ಸಂಘಟಿತ ಹೋರಾಟ ನಡೆಸಬೇಕಾಗಿದ್ದು ಕ್ರೈಸ್ತ ಸಮುದಾಯ ಸದಾ ಜೊತೆಯಲ್ಲಿರಲಿದೆ ಎಂದರು.
ಗುಂಡ್ಮಿ ಜುಮ್ಮಾ ಮಸೀದಿ ಮೌಲಾನಾರಾದ ಇರ್ಫಾನ್ ಆಲಂ ಅವರು ಮಾತನಾಡಿ ನವಯುಗ ಕಂಪೆನಿಯವರಿಗೆ ಸಾಸ್ತಾನದಲ್ಲಿ ಟೋಲ್ ಎಂಬ ಉದ್ಯಮ ನಡೆಸಲು ಈ ಭಾಗದ ಜನರು ಮುಕ್ತ ಮನಸ್ಸಿನಿಂದ ಸಹಕಾರ ನೀಡಿದ್ದಾರೆ. ಆದರೆ ಅವರು ಟೋಲ್ ಸಂಗ್ರಹದ ಹೆಸರಿನಲ್ಲಿ ಸ್ಥಳೀಯರನ್ನು ಲೂಟಲು ಹೊರಟಿರುವುದು ಖಂಡನೀಯ ಎಂದರು.
ಉಡುಪಿ ಶಾಸಕ ರಘುಪತಿ ಭಟ್ ಅವರು ಮಾತನಾಡಿ ಕೇಂದ್ರದೊಂದಿಗೆ ಕಂಪೆನಿ ಒಡಂಬಡಿಕೆಯನ್ನು ಮಾಡಿಕೊಂಡಂತೆ ಟೋಲ್ ಸಂಗ್ರಹಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸ್ಥಳೀಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಪೊಲೀಸರು ಟೋಲ್ ನಲ್ಲಿ ನಿಂತು ಟೋಲ್ ಸಂಗ್ರಹಕ್ಕೆ ಬೆಂಬಲಿಸುವುದು ಸರಿಯಲ್ಲ. ನಮ್ಮ ಹೋರಾಟ ಯಾವುದೇ ಕೇಂದ್ರ, ರಾಜ್ಯ ಅಥವಾ ಜಿಲ್ಲಾಡಳಿತದ ವಿರುದ್ದ ಅಲ್ಲ ಬದಲಾಗಿ ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಸಮಸ್ಯೆಯುಕ್ತವಾಗಿ ಮಾಡಿದ ನವಯುಗ ಕಂಪೆನಿಯ ವಿರುದ್ದವಾಗಿದೆ. ಕಂಪೆನಿಯ ಅಸಮರ್ಪಕ ಕಾಮಗಾರಿಯ ಪರಿಣಾಮ ಹಲವಾರು ಜೀವಗಳು ಬಲಿಯಾಗಿವೆ. ಇನ್ನಾದರೂ ಕಂಪೆನಿ ಸ್ಥಳೀಯರಿಂದ ಟೋಲ್ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 2013 ರಲ್ಲಿ ಮುಗಿಯಬೇಕಾಗಿದ್ದು ಇನ್ನೂ ಕೂಡ ಸಂಪೂರ್ಣ ಕಾಮಗಾರಿ ಮುಗಿದಿಲ್ಲ. ಜಿಲ್ಲೆಯ ಕುಂದಾಪುರ ಪಡುಬಿದ್ರೆ ಪರಿಸರದಲ್ಲಿ ಇನ್ನೂ ಹೆಚ್ಚಿನ ರಸ್ತೆ ಕಾಮಗಾರಿ ಬಾಕಿ ಇದೆ. ಕಂಪೆನಿಯ ಅಸಮರ್ಪಕ ಕಾಮಗಾರಿಯ ಕುರಿತು ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರಲ್ಲಿ ಕೂಡ ಪ್ರಸ್ತಾಪ ಮಾಡಿದ್ದು, ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ವಿನಂತಿಸಿದ್ದೇನೆ. ಆದರೆ ಸಚಿವರು ಈಗಾಗಲೇ 60% ಕಾಮಗಾರಿಯನ್ನು ಕಂಪೆನಿ ಪೂರ್ಣಗೊಳಿಸಿದ್ದು ಕಪ್ಪು ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ ಬದಲಾಗಿ ಕಂಪೆನಿಯನ್ನು ಕರೆಸಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ಕಂಪೆನಿ ಸಂಪೂರ್ಣ ನಷ್ಟ ಹೊಂದಿದ್ದು ಕಾಮಗಾರಿ ಮುಂದವರಿಸಲು ಬ್ಯಾಂಕ ಸಾಲದ ವ್ಯವಸ್ಥೆ ಮಾಡಿಕೊಟ್ಟರೆ ಮಾತ್ರ ಕಾಮಗಾರಿ ಪೂರ್ಣಗೊಳಸಲು ಸಾಧ್ಯ ಎಂದ ಬಳಿಕ ಸಾಲದ ವ್ಯವಸ್ಥೆಯನ್ನು ಕೂಡ ಸಚಿವರು ಮಾಡಿದ್ದಾರೆ. ಅದರ ಬಳಿಕ ಕಂಪೆನಿ ಕೆಲವೊಂದು ಕಾಮಗಾರಿಗಳನ್ನು ಮಾಡಿದ್ದು ಇನ್ನೂ ಕೂಡ ಪೂರ್ಣಗೊಂಡಿಲ್ಲ. 2019 ಮಾರ್ಚ್ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಕಂಪೆನಿ ಹೇಳಿದೆ.
ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹಿಸದಂತೆ ಈಗಾಗಲೇ ಹಲವಾರು ಬಾರಿ ಜಿಲ್ಲಾಧಿಕಾರಿಗಳ ಮೂಲಕ ಕಂಪೆನಿಗೆ ಸೂಚನೆ ನೀಡಿದರೂ ಕೂಡ ಜಿಲ್ಲಾಧಿಕಾರಿಗಳ ಮಾತಿಗೆ ಕೂಡ ಕಂಪೆನಿ ಸ್ಪಂದಿಸುತ್ತಿಲ್ಲ. ಸಂಪೂರ್ಣ ಕಾಮಗಾರಿ ನಡೆಯುವ ವರೆಗೆ ಯಾವುದೇ ರೀತಿಯಲ್ಲಿ ಟೋಲ್ ಸಂಗ್ರಹಿಸಬಾರದು ಮತ್ತು ಸ್ಥಳೀಯರಿಗೆ ಉಚಿತವಾಗಿ ಸಂಚರಿಸಲು ವ್ಯವಸ್ಥೆ ಮಾಡಬೇಕು ಎನ್ನುವ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲ ಇದೆ. ಈ ಕುರಿತು ಮಧ್ಯಾಹ್ನ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಹೋರಾಟಗಾರರು ಮತ್ತು ಕಂಪೆನಿಯ ಸಭೆಯನ್ನು ಆಯೋಜಿಸಿದ್ದು ಸ್ಪಷ್ಟ ನಿರ್ಧಾರ ಹೊರಬರುವ ನಿರೀಕ್ಷೆ ಇದೆ ಎಂದರು.
ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ. ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಇಂಟಕ್ ರಾಜ್ಯ ಅಧ್ಯಕ್ಷ ರಾಕೇಶ್ ಮಲ್ಲಿ, ಹೆಜಮಾಡಿ ಟೋಲ್ ವಿರೋಧಿ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಬಿಜೆಪಿ ರಾಜ್ಯ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಲಾರಿ ಮಾಲಕರ ಸಂಘದ ರಾಜೇಶ್ ಕಾವೇರಿ ಪ್ರಸ್ತಾವನೆಗೈದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹೋರಾಟ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗಿಶ್ ಶೆಟ್ಟಿ, ಹೋರಾಟ ಸಮಿತಿಯ ಆಲ್ವಿನ್ ಅಂದ್ರಾದೆ, ಪ್ರಶಾಂತ್ ಶೆಟ್ಟಿ, ಚಂದ್ರಮೋಹನ್, ರಾಜೇಶ್, ಸ್ಥಳೀಯ ಗ್ರಾಪಂ ಅಧ್ಯಕ್ಷರಾದ ಮೊಸೆಸ್ ರೊಡ್ರಿಗಸ್, ಗೋವಿಂದ ಪೂಜಾರಿ, ಜಿಲ್ಲಾಪಂಚಾಯತ್ ಸದಸ್ಯರಾದ ರಾಘವೇಂದ್ರ ಕಾಂಚನ್, ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು.