ಸ್ಥಳೀಯರಿಗೆ ಟೋಲ್ ಸಂಗ್ರಹ; ಸೆ.30 ರ ವರೆಗೆ ಯಥಾಸ್ಥಿತಿ ಕಾಪಡಲು ಸೂಚನೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ಪಡೆಯುವ ವಿಚಾರದಲ್ಲಿ ಸೆಪ್ಟೆಂಬರ್ 30 ರ ವರೆಗೆ ಯಥಾಸ್ಥಿತಿ ಕಾಪಾಡಲು ನಿರ್ಧರಿಸಲಾಗಿದೆ.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಳೀಯರ, ಜನಪ್ರತಿನಿಧಿಗಳ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಸಭೆಯನ್ನು ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ತೆಗೆದುಕೊಳ್ಳುವ ವಿಚಾರದಲ್ಲಿ ಹೋರಾಟ ಸಮಿತಿಯ ಸದಸ್ಯರು ಆಕ್ಷೇಪವನ್ನು ವ್ಯಕ್ತಪಡಿಸಿದರಲ್ಲದೆ, ಸಮಿತಿಯ ಸದಸ್ಯರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ತಮ್ಮ ವಿಚಾರವನ್ನು ಮಂಡಿಸಿದರು.
ಸಭೆಯಲ್ಲಿ ನವಯುಗ ಕಂಪೆನಿಯ ಹಿರಿಯ ಅಧಿಕಾರಿಗಳು, ಮತ್ತು ರಾ. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಗೈರಾಗಿದ್ದು ಯಾವುದೇ ನಿರ್ಧಾರವನ್ನು ಆರಂಬದಲ್ಲಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಬಳಿಕ ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು, ಮತ್ತು ಜಿಲ್ಲೆಯ ಜನಪ್ರತಿನಿಧಿಗಳು, ನವಯುಗ ಸಂಸ್ಥೆಯ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರಲ್ಲದೆ ನವಯುಗ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದರು.
ಸಭೆಯಲ್ಲಿ ಹಾಜರಿದ್ದ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಅಸಮರ್ಪಕ ಕಾಮಾಗರಿ ಬಗ್ಗೆ ರಾತ್ರೋರಾತ್ರಿ ಟೋಲ್ ಸಂಗ್ರಹಕ್ಕೆ ಮುಂದಾದ ಬಗ್ಗೆ ತೀಕ್ಷ್ಣ ವಾಗಿ ಖಂಡಿಸಿದರು ಹಾಗೂ ಜನರೊಂದಿಗೆ ದೊಡ್ಡ ಮಟ್ಟದ ಹೋರಾಟಕ್ಕೂ ಸಿದ್ದ ಅಂತ ತಿಳಿಸಿದರು.
ನಂತರ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ ಒಳ್ಳೆಯ ರೀತಿಯಲ್ಲಿ ಇದುವರೆಗೂ ಹೇಗೆ ಹೊರ ಭಾಗದ ವಾಹನಗಳ ಟೋಲ್ ಸ್ವೀಕರಿಸುತ್ತಾ ಇದ್ದಿರೋ ಹಾಗೆ ಮುಂದುವರಿಸಿ ಎಲ್ಲಿಯಾದರೂ ಜಿಲ್ಲೆಯ ವಾಹನಗಳ ಸುದ್ಧಿಗೆ ಬಂದರೆ ನಿಮಗೆ ಯಾರಿಂದಲೂ ಟೋಲ್ ವಸೂಲು ಮಾಡಲು ಬಿಡುವುದಿಲ್ಲಾ ನಾವೆಲ್ಲ ಶಾಸಕರು ಟೋಲ್ ಗೆ ಬಂದು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಾ ಹೆದ್ದಾರಿ ನಿರ್ಮಾಣದ ಸಂದರ್ಭ ಆರಂಭದಲ್ಲಿ ಸರಿಯಾದ ರೂಪುರೇಷೆ ನೀಡಲ್ಲ ಬಳಿಕ ಎರಡನೇ ಸಲ ಟೋಲ್ ಸಂಗ್ರಹಿಸಲು ಶೇಕಡ 75 ಕಾಮಗಾರಿ ಪೂರ್ಣಗೊಳ್ಳುವಂತೆ ಸುತ್ತೋಲೆ ಜಾರಿಗೆಗೊಳಿಸುತ್ತದೆ ಈಗ ಕಂಪೆನಿ ನಷ್ಟದಲ್ಲಿದೆ ಬಡ್ಡಿ ಕಟ್ಟಬೇಕು ಎಂಬೆಲ್ಲಾ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಮುಂದೆ ಟೋಲ್ ಸಂಗ್ರಹಕ್ಕೆ ಮುನ್ನ ಸಮಿತಿಯೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳಬೇಕು. ಅದಕ್ಕಾಗಿ ಸೆಪ್ಟಂಬರ್ 30 ರ ತನಕ ಯಥಾಸ್ಥಿತಿ ಕಾಪಾಡಲು ಸಭೆ ನಿರ್ಧರಿಸಿದೆ ಎಂದರು.
ಸಭೆಯಲ್ಲಿ ಎಸ್ಪಿ ಲಕ್ಷ್ಮಣ್ ನಿಂಬರಗಿ, ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್, ಹೋರಾಟ ಸಮಿತಿಯ ಪ್ರತಾಪ್ ಶೆಟ್ಟಿ, ಆಲ್ವಿನ್ ಅಂದ್ರಾದೆ, ಪ್ರಶಾಂತ್ ಶೆಟ್ಟಿ, ವಕೀಲರಾದ ಶ್ಯಾಮ್ ಸುಂದರ್ ನಾಯರಿ, ಕಾಪು ದಿವಾಕರ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.