ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಎಲ್ಲಾ ಘಟಕಗಳ ಪುನರ್ ರಚನೆ – ಅಶೋಕ್ ಕುಮಾರ್ ಕೊಡವೂರು
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ನ ವಿವಿಧ ಘಟಕಗಳ ಅಧ್ಯಕ್ಷರುಗಳ ಸಭೆಯು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್ ಅವರ ನೇತೃತ್ವದಲ್ಲಿ ನಡೆಯಿತು.
ಪ್ರಸ್ತುತ ಯಾವುದೇ ಪಕ್ಷಗಳು ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತ ಪಡೆಯದೇ ಇರುವುದರಿಂದ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆಗೆ ಚುನಾವಣೆ ಬರುವ ಎಲ್ಲಾ ಸಾಧ್ಯತೆಗಳಿವೆ. ಅದರೊಂದಿಗೆ ಮುಂಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರುವುದರಿಂದ ಎಲ್ಲಾ ಘಟಕಗಳನ್ನು ಪುನಹಃ ರಚಿಸಿ ಪಕ್ಷಕ್ಕೆ ನವಚೈತನ್ಯ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಘಟಕಗಳ ಅಧ್ಯಕ್ಷರುಗಳು ತನ್ನೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಪಕ್ಷವನ್ನು ಬಲ ಪಡಿಸುವ ನಿಟ್ಟಿನಲ್ಲಿ ವಿವಿಧ ಘಟಕಗಳ ಅಧ್ಯಕ್ಷರುಗಳ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ವೆರೋನಿಕಾ ಕರ್ನೇಲಿಯೋ, ಚಂದ್ರಶೇಖರ್ ಶೆಟ್ಟಿ, ಗೀತಾ ವಾಗ್ಳೆ, ಶಶಿಧರ ಶೆಟ್ಟಿ ಎಲ್ಲೂರ್, ಯತೀಶ್ ಕರ್ಕೇರ, ಇಸ್ಮಾಯಿಲ್ ಆತ್ರಾಡಿ, ಎಸ್. ನಾರಾಯಣ್, ಸುರೇಶ್ ನಾಯ್ಕ್, ಗಣೇಶ್ ಕೋಟ್ಯಾನ್, ವಿಶ್ವಾಸ್ ಅಮೀನ್, ರೋಶನಿ ಒಲಿವರ್, ಹರೀಶ್ ಶೆಟ್ಟಿ ಪಾಂಗಳ, ಉದ್ಯಾವರ ನಾಗೇಶ್ ಕುಮಾರ್, ಕಿಶೋರ್, ಉಪೇಂದ್ರ ಮೆಂಡನ್, ಪ್ರಭಾಕರ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.