Home Mangalorean News Kannada News ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಒತ್ತಾಯ

ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಒತ್ತಾಯ

Spread the love

ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಒತ್ತಾಯ

ಮೈಸೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಶೀಘ್ರವೇ ನಡೆಸುವಂತೆ ಸರ್ಕಾರವನ್ನು ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ಒತ್ತಾಯಿಸಿದ್ದಾರೆ.

ಜನರಿಂದ ಜನರಿಗಾಗಿ ಇರುವುದು ಜನರ ಸರಕಾರ. ಇದುವೇ ಪ್ರಜಾಪ್ರಭುತ್ವದ ಮೂಲ. ಅಧಿಕಾರಿಶಾಹಿಯನ್ನು ನಿಯಂತ್ರಣದಲ್ಲಿರಿಸಿ ಕೊಂಡು ನಾಗರಿಕ ಸಮಾಜದ ಬೇಕು-ಬೇಡಗಳ ಬಗ್ಗೆ ಆಲೋಚನೆ ಮತ್ತು ಅನುಷ್ಠಾನಕ್ಕೆ ತುಡಿಯುವ ಮನಸ್ಸುಳ್ಳ ಸಮರ್ಥರನ್ನು ಆಯ್ಕೆ ಮಾಡುವ ಮೂಲಕ ನಮ್ಮನ್ನು ನಾವೇ ಆಳ್ವಿಕೆ ಮಾಡಿಕೊಳ್ಳಲು ಸಂವಿಧಾನದತ್ತವಾಗಿರುವ ಪ್ರಕ್ರಿಯೆ ಚುನಾವಣೆಯಾಗಿದೆ.

ಪ್ರತಿ ಐದು ವರ್ಷಕ್ಕೊಮ್ಮೆ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯುವಂತೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೂ ಸೇರಿದಂತೆ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಗದಿತ ವೇಳೆಗೆ ಚುನಾವಣೆ ನಡೆದು ಸ್ಥಳೀಯ ಸರಕಾರಗಳೂ ಕೂಡ ಬಲಿಷ್ಠವಾಗಿ ನಿರ್ಮಾಣವಾಗಬೇಕೆಂಬುದು ಸಂವಿಧಾನದ ಆಶಯ. ಆದರೆ, ಇತ್ತೀಚೆಗೆ ಸರಕಾರಗಳು ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ನಿರ್ಲಕ್ಷ್ಯ ಮಾಡು ತ್ತಿರುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನವಾಗಿದೆ ಎಂದಿದ್ದಾರೆ.

ಕ್ಷೇತ್ರ ಮರು ವಿಂಗಡಣೆ, ಮೀಸಲು ಬದಲಾವಣೆ, ಪ್ರವಾಹ ಅಥವಾ ಬರ ಇಂತಹ ಕಲ್ಪಿತ ನೆಪಗಳನ್ನು ಮುಂದಿಟ್ಟುಕೊಂಡು ಈ ಚುನಾವಣೆಗಳನ್ನು ಮುಂದೂಡುವಲ್ಲಿ ಸರಕಾರಗಳು ಹೊಣೆಗೇಡಿತನ ಪ್ರದರ್ಶನ ಮಾಡಿವೆ. ಗ್ರಾಮೀಣ ಭಾರತವೇ ನೈಜ ಭಾರತ. ಇದು ನಮ್ಮ ದೇಶದ ಪ್ರಗತಿಯ ಮೂಲ ಮಂತ್ರ. ಗ್ರಾಮೋದ್ಧಾರಕ್ಕೆ ಇರುವ ಆಯಕಟ್ಟಿನ ಅಧಿಕಾರದ ವಲಯಗಳೇ ಈ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು. ಸರ್ಕಾರದ ಬೇಜವಾಬ್ದಾರಿ ಮತ್ತು ವಿಳಂಬದಿಂದ ಮೂರು ವರ್ಷದಿಂದ ಇವುಗಳು ನಿರ್ಜೀವವಾಗಿವೆ.

ಪ್ರಜಾಪ್ರಭುತ್ವದ ಮೆರುಗು ಹೆಚ್ಚಿಸುವ ಈ ಕೆಳ ಹಂತದ ಸೇವಾ ವಲಯಗಳಾದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಕೂಡಲೇ ಚುನಾವಣೆ ನಡೆಸುವ ಮೂಲಕ ಸಂವಿಧಾನದ ಮೇಲಿನ ಗೌರವವನ್ನು ಎತ್ತಿಹಿಡಿಯಬೇಕಿದೆ ಎಂದು ಹೇಳಿದ್ದಾರೆ.


Spread the love

Exit mobile version