ಸ್ಥಿರಾಸ್ತಿಯ ಸುಳ್ಳು ದಾಖಲೆ ಸೃಷ್ಟಿಸಿ ಸಹಕಾರಿ ಸಂಘದಿಂದ ರೂ. 45 ಲಕ್ಷ ಸಾಲ ಪಡೆದ ಆರೋಪ – ದೂರು ದಾಖಲು
ಕಾಪು: ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘ(ನಿ), ಸಹಕಾರ ಸೌಧದ ಶಾಖೆಯಿಂದ ಆರೋಪಿಗಳು ಸ್ಥಿರಾಸ್ತಿಯ ಕುರಿತು ಸುಳ್ಳು ದಾಖಲೆ ಸೃಷ್ಟಿಸಿ 45 ಲಕ್ಷ ಸಾಲ ಪಡೆದ ಕುರಿತು ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘ(ನಿ), ಸಹಕಾರ ಸೌಧದ ಶಾಖೆಯ ಪ್ರಧಾನ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ಮೈದಿನ ಡಿ ಖಾನ್ ಈ ಕುರಿತು ದೂರು ದಾಖಲಿಸಿದ್ದಾರೆ.
ದೂರಿನ ಅನ್ವಯ 2024 ರ ಫೆ 21 ರಂದು ಆರೋಪಿಗಳಾದ ರಿಯಾನತ್ ಬಾನು ಹಾಗೂ ಆಕೆಯ ಗಂಡ ನೂಮನ್ ಇಸ್ಮಾಯಿಲ್ ಎಂಬವರು ಸಂಘಕ್ಕೆ ಬಂದು ಸ್ಥಿರಾಸ್ತಿ ಖರೀದಿಸಲು ತಮಗೆ ರೂ 45 ಲಕ್ಷ ಸಾಲದ ಅಗತ್ಯವಿದೆ ಎಂದು ಸಾಲದ ಅರ್ಜಿಯನ್ನು ಸಲ್ಲಿಸಿದ್ದಾರೆ. 2024 ರ ಫೆ 23 ರಂದು ಜರುಗಿದ ಸಂಘದ ಆಡಳಿ ಮಂಡಳಿ ಸಭೆಯಲ್ಲಿ ನಿರ್ಣಯ ನಂ.640/19-1 ರಲ್ಲಿ ಆರೋಪಿಗಳು ಸಲ್ಲಿಸಿದ ಅರ್ಜಿಯಲ್ಲಿನ ಸ್ಥಿರಾಸ್ತಿ ಖರೀದಿಗಾಗಿ ಅಡಮಾನ ಸಾಲವಾಗಿ ರೂ 45 ಲಕ್ಷವನ್ನು ಆರೋಪಿಗೆ ಕೊಡಬಹುದೆಂದು ಮಂಜೂರಾಗಿದೆ.
ಬಳಿಕ ಆರೋಪಿತರು ತಾವು ಖರೀದಿಸಬೇಕಾದ ಸ್ಥಿರಾಸ್ತಿಗೆ ಸಂಬಂಧಪಟ್ಟ ಮೂಲ ಕ್ರಯ ಪತ್ರ, ಮೂಲ ದಾಖಲೆಗಳೆನ್ನಲಾದ ಖರೀದಿ ಒಪ್ಪಂದದ ಕರಾರು & ಸಾಲ ನೀಡಲು ಬೇಕಾದ ಇತರೇ ದಾಖಲೆಗಳನ್ನು ಹಾಜರುಪಡಿಸಿದ್ದು, ಆರೋಪಿ 3 ದಿನೇಶ್ & ಆರೋಪಿ 4 ರಾಜೇಶ್ ಎಂಬವರನ್ನು ಜಾಮೀನುದಾರರನ್ನಾಗಿ ನೀಡಿರುತ್ತಾರೆ.
ಸಾಲಕ್ಕೆ ಅಡವು ಇಡಬೇಕಾದ ಉಡುಪಿ ಬನ್ನಂಜೆಯಲ್ಲಿರುವ ಸ್ಥಿರಾಸ್ತಿಯನ್ನು ಅದರ ಒಡತಿ ಎನ್ನಲಾದ ಶಕುಂತಲಾ ಆರ್ ರಿಂದ ಆರೋಪಿಯು ಕ್ರಯ ಸಾಧನದ ಮೂಲಕ ಖರೀದಿಸಿದ್ದು, ಉಡುಪಿ ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ಆದ ಕ್ರಯ ಪತ್ರದ ದಾಖಲೆಯನ್ನು ಸಂಘಕ್ಕೆ ಹಾಜರುಪಡಿಸಿದ್ದರು. ಹಾಗೆಯೇ ಅಡವು ಮಾಡಿದ ಆಸ್ತಿಯ ಬಗ್ಗೆ 26/03/2024 ರಂದು Memorandam of Deposit of Title Deed ನ್ನು ಉಡುಪಿ ಹಿರಿಯ ಉಪ ನೋಂದಣಿ ಅಧಿಕಾರಿಯವರ ಕಚೇರಿಯಲ್ಲಿ ರಿಜಿಸ್ಟರ್ ಮಾಡಿದ್ದು, ಅದರ ದಾಖಲೆಯನ್ನು ಹಾಗೆಯೇ ಆಡವಿಟ್ಟ ಆಸ್ತಿಯ ಬಗ್ಗೆ ಋಣ ಭಾರರಾಹಿತ್ಯ ಪ್ರಮಾಣ ಪತ್ರವನ್ನು ಕೂಡಾ ಒಂದನೇ ಮತ್ತು ಎರಡನೇ ಆರೋಪಿಗಳು ಸಂಘಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿತರಿಂದ ಮೂಲ ದಾಖಲೆಗಳನ್ನು ಪಡೆದ ಬಳಿಕ ಸಂಘವು ಸ್ಥಿರಾಸ್ತಿ ಖರೀದಿಸುವರೇ ಸಂಘದ IDBI ಬ್ಯಾಂಕ್ ಖಾತೆಯಿಂದ ಶಕುಂತಲಾ ಆರ್ ಎಂಬ ಹೆಸರಿಗೆ ದಿನಾಂಕ 25/3/2024 ರಂದು ರೂ. 45 ಲಕ್ಷ ಕ್ಕೆ ಕ್ರಾಸ್ ಚೆಕ್ ನಂ .580435 ಬರೆದು ದಿನಾಂಕ 27/3/2024 ರಂದು ರಿಯಾನತ್ ಬಾನು ರವರಿಗೆ ಹಸ್ತಾಂತರಿಸಿರುತ್ತಾರೆ.
ಚೆಕ್ ನ್ನು ಆರೋಪಿಗಳು ಬಂಧನ್ ಬ್ಯಾಂಕ್ ಉಡುಪಿ ಶಾಖೆಯಿಂದ ನಗದೀಕರಿಸಿದ್ದಾರೆ ಎಂದು ನಂತರ ತಿಳಿದು ಬಂದಿರುತ್ತದೆ. ಬಳಿಕ ಆರೋಪಿಗಳು 3 ತಿಂಗಳ ಕಂತನ್ನು ಸಂಘಕ್ಕೆ ಪಾವತಿಸಿದ್ದು, ನಂತರ ಪಾವತಿ ಮಾಡದೇ ಇದ್ದ ಕಾರಣ ಆರೋಪಿಗಳ ಮೇಲೆ ಅನುಮಾನ ಬಂದು ಅವರು ನೀಡಿರುವ ದಾಖಲೆಗಳನ್ನು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳೊಂದಿಗೆ ವಿಚಾರಿಸಿದಾಗ ಆರೋಪಿಗಳು ಸಂಘದಿಂದ ಸಾಲ ತೆಗೆದು ಕೊಳ್ಳುವ ಉದ್ದೇಶಕ್ಕಾಗಿ ಸರಕಾರಿ ಅಧಿಕಾರಿಗಳ ಪೋರ್ಜರಿ ದಾಖಲೆ, ಸಹಿ, ಮೊಹರು(ಸೀಲ್) ಗಳನ್ನು ಬಳಸಿ ಕೊಂಡು ಸುಳ್ಳು ದಾಖಲೆಗಳನ್ನು ತಯಾರಿಸಿ ದುರ್ಬಳಕೆ ಮಾಡಿಕೊಂಡಿದ್ದು ತಿಳಿದು ಬಂದಿದೆ. ಆರೋಪಿಗಳು ಬ್ಯಾಂಕಿಗೆ ಹಾಜರುಪಡಿಸಿದ ಶಕುಂತಳಾ ಆರ್.ಇವರದ್ದು ಎನ್ನಲಾದ ಕ್ರಯಚೀಟಿಯ ದಸ್ತಾವೇಜು, ಒಪ್ಪಂದಕಾರರು, ಉಪ ನೋಂದಣಾ ಅಧಿಕಾರಿಯ ಸಹಿ, ಅವರ ಆಫೀಸಿನ ಮೊಹರು, ಋಣ ಭಾರ ಪತ್ರ. ಅದರಲ್ಲಿರುವ ರೆವೆನ್ಯು ಅಧಿಕಾರಿಗಳ ಸಹಿ, ಮೊಹರು ಎಲ್ಲವೂ ಪೋರ್ಜರಿ ಎಂದು ತಿಳಿದು ಬಂದಿದೆ. ಬಳಿಕ ಶಕುಂತಳಾ ಆರ್.ಅವರನ್ನು ಹುಡುಕಿಕೊಂಡು ಬೇಟಿ ಮಾಡಿದಾಗ ತಾವು ಆರೋಪಿಗಳಿಗಾಗಲಿ ಅಥವಾ ಇತರರಿಗಳಿಗಾಗಲಿ ಆಸ್ತಿಯನ್ನು ಮಾರಾಟ ಮಾಡಿಲ್ಲವೆಂದೂ, ಅಂತಹ ಕ್ರಯಪತ್ರವಿದ್ದಲ್ಲಿ ಅದು ಸುಳ್ಳು, ಮತ್ತು ತನಗೂ ಅದಕ್ಕೂ, ಯಾವುದೇ ಸಂಬಂಧವಿಲ್ಲವೆಂದು ಹೇಳಿರುತ್ತಾರೆ.
ಆರೋಪಿಗಳು ಸುಳ್ಳು ಮತ್ತು ಪೋರ್ಜರಿ ದಾಖಲೆಗಳನ್ನು ನೀಡಿ ರೂ. 45 ಲಕ್ಷವನ್ನು ಪಡೆದು ಸಂಘಕ್ಕೆ ಮೋಸ, ಮತ್ತು ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 02/2025 ಕಲಂ: 417, 420, 467, 468, 471, 472 RW 34 IPCಯಂತೆ ಪ್ರಕರಣ ದಾಖಲಾಗಿರುತ್ತದೆ.