Home Mangalorean News Kannada News ಸ್ನೇಹಿತ ಎಂ.ಸಂಜೀವರ ಜೀವನ ಕಥನ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಸ್ನೇಹಿತ ಎಂ.ಸಂಜೀವರ ಜೀವನ ಕಥನ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

Spread the love

ಸ್ನೇಹಿತ ಎಂ.ಸಂಜೀವರ ಜೀವನ ಕಥನ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಮಂಗಳೂರು: ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆತ್ಮೀಯ ಅವಿಭಜಿತ ಜನತಾದಳ ಮುಖಂಡರಾಗಿದ್ದ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕದ್ರಿ ಎಂ.ಸಂಜೀವ ಅವರ ಜೀವನ ಕಥನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ರಾತ್ರಿ ಯುನಿಟಿ ಆಸ್ಪತ್ರೆಯ ವಾರ್ಡಿನಲ್ಲಿ ಬಿಡುಗಡೆ ಮಾಡಿದರು.

ಮಂಗಳೂರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಾಜಿ ಪ್ರಧಾನಿ ಎಚ್.ಡಿದೇವೇಗೌಡ ಅವರು ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ರಾಜಕೀಯ ಸ್ನೇಹಿತ ಎಂ.ಸಂಜೀವ ಅವರ ಯೋಗ ಕ್ಷೇಮ ವಿಚಾರಿಸಲು ಆಗಮಿಸಿದರು. ಇದೇ ಸಂದರ್ಭದಲ್ಲಿ ಎಂ.ಸಂಜೀವ ಅವರ ಜೀವನ ಕಥನ ಸಂಜೀವನ – ಜನನಾಯಕ ಎಂ.ಸಂಜೀವ ಅವರ ಜೀವನ ಕಥನ ಎಂಬ ಕೃತಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಿಡುಗಡೆ ಮಾಡಿದರು.

ಎಂ.ಸಂಜೀವ ಅವರ ಸಹೋದರಿ ಸುಖಲಾಕ್ಷಿ ಸುವರ್ಣ ಅವರು ಅವರ ಜೀವನ ಚರಿತ್ರೆಯನ್ನು ಸಂಗ್ರಹಿಸಿದ್ದು, ದೇವೇಗೌಡ ಅವರು ಕೂಡ ಒಂದು ಅಧ್ಯಯನವನ್ನು ಬರೆದಿದ್ದಾರೆ.

ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆತ್ಮೀಯರಾಗಿದ್ದ ಎಂ.ಸಂಜೀವ ಅವರು ತುರ್ತು ಪರಿಸ್ಥಿತಿ ಕಾಲದಿಂದಲೂ ಜನಪರ ಹೋರಾಟದಲ್ಲಿ ಭಾಗಿಯಾಗಿದ್ದರು. ಯಾವುದೇ ರೀತಿಯ ರಾಜಕೀಯ ಅಧಿಕಾರ ದೊರೆಯದಿದ್ದರೂ ಎಂ.ಸಂಜೀವ ಅವರು ಜನಪರವಾದ ಕಾರ್ಯದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದವರು ಎಂದು ದೇವೇಗೌಡ ಈ ಸಂದರ್ಭದಲ್ಲಿ ಹೇಳಿದರು.

ಮಾಜಿ ಪ್ರಧಾನಿ ದೇವೆಗೌಡ ಅವರು ತಮ್ಮ ಸ್ನೇಹಿತ ಎಂ.ಸಂಜೀವ ಅವರಿಗಿಂತ ಕೇವಲ ಹತ್ತು ದಿವಸ ಹಿರಿಯರಾಗಿದ್ದಾರೆ. ಸಂಸ್ಥಾ ಕಾಂಗ್ರೆಸ್, ಜನತಾ ಪಕ್ಷ, ಜನತಾದಳ ಮುಖಂಡರಾಗಿದ್ದ ಎಂ.ಸಂಜೀವ ಅವರು ತಮ್ಮ ಜೀವನವನ್ನು ಪರರಿರಾಗಿ ತ್ಯಾಗ ಮಾಡಿದ ಸಮಾಜ ಸೇವಕ ಮತ್ತು ಬ್ರಹ್ಮಚಾರಿ ಆಗಿದ್ದರು.

ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಜನತಾದಳ ಟಿಕೇಟಿನಿಂದ ಸ್ಪರ್ಧಿಸಿ ಅಲ್ಪ ಅಂತರದಿಂದ ಸೋಲನುಭವಿಸಿದ್ದರು. ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಹಲವಾರು ವಸತಿ ಬಡಾವಣೆ ಅಭಿವೃದ್ಧಿ ಮಾಡಿದ್ದಲ್ಲದೆ ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿದ್ದರು.

ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾಜಿ ಸಚಿವರಾದ ಅಮರನಾಥ ಶೆಟ್ಟಿ ದಂಪತಿಗಳು, ಯೆನೆಪೋಯ ಮೊಹಮ್ಮದ್ ಕುಂಞ, ಯುನಿಟಿ ಆಸ್ಪತ್ರೆಯ ಹಬೀಬ್ ರೆಹಮಾನ್, ಹಬೀಬ್ ಮೊಹಮ್ಮದ್ ಆಜ್ಮಾಲ್, ಪ್ರಜ್ವಲ್ ರೇವಣ್ಣ, ಜಾತ್ಯತೀತ ಜನತಾದಳ ಮುಖಂಡರಾದ ಮಹಮ್ಮದ್ ಕುಂಞ, ಎಂ.ಬಿ.ಸದಾಶಿವ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ, ಎಂ.ಸಂಜೀವ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.


Spread the love

Exit mobile version