ಸ್ಪರ್ಶ ಯೋಜನೆಯ ಮೂಲಕ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
ಮಂಗಳೂರು: ಸಿಒಡಿಪಿ (ರಿ) ಮಂಗಳೂರು ಮತ್ತು ಕಾರಿತಾಸ್ ಇಂಡಿಯಾ ಇವರ ಜಂಟಿ ಆಶ್ರಯದಲ್ಲಿ ಕ್ಯಾನ್ಸರ್ ಕಾಯಿಲೆ ವಿರುದ್ಧ ಆಂದೋಲನ – “ಸ್ಪರ್ಶ” ಯೋಜನೆಗೆ ಸಿಒಡಿಪಿಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪೌಲ್ ಸಲ್ಡಾನರವರು ಸ್ಪರ್ಶ ಯೋಜನೆಯ ಲಾಂಛನವನ್ನು ಬಿಡುಗಡೆ ಮಾಡಿ, “ನಮ್ಮ ಸಮಾಜದಲ್ಲಿ ಅತ್ಯಧುನಿಕ ಉಪಕರಣಗಳು ಹಾಗೂ ಸುಸರ್ಜಿತ ಆಸ್ಪತ್ರೆಗಳು ಇವೆ ಆದರೆ ಕ್ಯಾನ್ಸರ್ ಪೀಡಿತರಿಗೆ ಸರಿಯಾದ ಪುನರ್ ವಸತಿ ಕೇಂದ್ರಗಳು ಇಲ್ಲದಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಸಿಒಡಿಪಿ ಹಾಗೂ ಕಾರಿತಾಸ್ ಇಂಡಿಯಾ ಕೈಗೆತ್ತಿಕೊಂಡಿರುವ ಕ್ಯಾನ್ಸರ್ ಜಾಗೃತಿ, ಪತ್ತೆಹಚ್ಚಿ ಚಿಕಿತ್ಸೆ ಮಾಡುವುದು ಮತ್ತು ಕ್ಯಾನ್ಸರ್ ರೋಗ ತಡೆಗಟ್ಟುವ ಈ ಸ್ಪರ್ಶ ಯೋಜನೆಯು ಶ್ಲಾಘನೀಯವಾಗಿದೆ. ಈ ಯೋಜನೆಯಿಂದ ನಮ್ಮ ಸಮಾಜದಲ್ಲಿ ಈ ಮಾರಕ ಕಾಯಿಲೆಯಿಂದ ನಮ್ಮ ಜನರು ಮುಕ್ತಿ ಪಡೆದು ಆರೋಗ್ಯಭರಿತ ಜೀವನ ನಡೆಸುವಂತಾಗಲಿ” ಎಂದು ಕರೆ ನೀಡಿದರು.
ನಂತರ ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕರಾದ ವಂದನೀಯ ಫಾ| ರಿಚರ್ಡ್ ಕುವೆಲ್ಲೊ ರವರು ಲಕ್ಷ್ಮಣ ಫಲ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕಂಕನಾಡಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ವಿವರ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಷ್ಮಾನ್ ಭಾರತ್/ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಸಂಯೋಜನ ಅಧಿಕಾರಿ ಶ್ರೀಮಾನ್ ಸಚ್ಚಿದಾನಂದ ಎಮ್.ಎಲ್ ರವರು ಆರೋಗ್ಯ ಸಂಬಂಧ ಸರಕಾರದಿಂದ ಲಭಿಸುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾದ ಎ.ಜೆ ಆಸ್ಪತ್ರೆಯ ವೈದ್ಯರಾದ ಡಾ| ನವೀನ್ ರುಡೊಲ್ಫ್ ರೊಡ್ರಿಗಸ್ರವರು ಕ್ಯಾನ್ಸರ್ ಕಾಯಿಲೆಯ ಬಗ್ಗೆ ಸವಿಸ್ತರವಾಗಿ ಮಾಹಿತಿ ನೀಡಿದರು.
ಆರಂಭದಲ್ಲಿ ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ| ಓಸ್ವಲ್ಡ್ ಮೊಂತೇರೊ ರವರು ಎಲ್ಲರಿಗೂ ಸ್ವಾಗತ ಕೋರುತಾ, ತಮ್ಮ ಪ್ರಾಸ್ತವಿಕ ಭಾಷಣದಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪೀಡಿತರ ಸಂಖ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ಸ್ಪರ್ಶ ಯೋಜನೆಯು ಸಮಾಜದಲ್ಲಿ ಸಾಕಷ್ಟು ಜಾಗೃತಿ ತರಲಿ ಮತ್ತು ಪೀಡಿತರಿಗೆ ಸಾಂತ್ವನ ನೀಡಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮಕ್ಕೆ ರಾಯಬಾರಿಯಾಗಿ ಶ್ರೀಮತಿ ಜೆಸೆಲ್ ಡಿ ಸೋಜರವರು ಕ್ಯಾನ್ಸರ್ ರೋಗದ ಬಗ್ಗೆ ತಮ್ಮ ಸ್ವಂತ ಅನುಭವವನ್ನು ಹಂಚಿದರು.
ಸಿಒಡಿಪಿ ಸಂಸ್ಥೆಯ ಸಿಬ್ಬಂಧಿಗಳಾದ ಶ್ರೀಮತಿ ಶಿಲ್ಪ ರೈನಾ ಡಿ ಸೋಜ ಹಾಗೂ ಕುಮಾರಿ ಲೆನೆಟ್ ಗೊನ್ಸಾಲ್ವಿಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಸಿಒಡಿಪಿ ಸಂಸ್ಥೆಯ ಸಂಯೋಜಕಿಯಾದ ಶ್ರೀಮತಿ ರೀಟಾ ಡಿ ಸೋಜರವರು ವಂದಿಸಿದರು.