ಸ್ಪಷ್ಟ ನಿರ್ಧಾರ ತಳೆಯಲು ವಿಫಲವಾದ ಸಚಿವ ರೇವಣ್ಣ ನೇತೃತ್ವದ ಟೋಲ್ ಸಮಸ್ಯೆ ಕುರಿತ ಉನ್ನತ ಮಟ್ಟದ ಸಭೆ
ಬೆಂಗಳೂರು: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹರಿಸಲು ಬೆಂಗಳೂರಿನ ವಿಧಾನಸೌಧದಲ್ಲಿ ಲೋಕೊಪಯೋಗಿ ಸಚಿವ ಎಚ್ ಡಿ ರೇವಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರದೆ ಅಂತ್ಯ ಕಂಡಿದೆ.
ಸಚಿವ ರೇವಣ್ಣ ನೇತ್ರತ್ವದಲ್ಲಿ ಸಭೆ – ಸಭೆಯಲ್ಲಿ ಸಚಿವರಾದ ರೇವಣ್ಣ, ಜಯಮಾಲಾ, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ರಘುಪತಿ ಭಟ್, ಸುಕುಮಾರ ಶೆಟ್ಟಿ, ಹಾಗೂ ಹೋರಾಟಗಾರರ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಹೋರಾಟ ಸಮಿತಿಯ ಸದಸ್ಯರು ಟೋಲ್ ವಸೂಲಿ ಪ್ರಾರಂಭಿಸುವುದು ರಾಜ್ಯ ಸರಕಾರದ ಕೈಯಲ್ಲಿಲ್ಲ ಎಂದು ಹೇಳುತ್ತಾ ಯಾವುದೇ ರೀತಿಯ ಸ್ಪಷ್ಟ ನಿರ್ಧಾರವನ್ನು ತಳೆಯಲು ಸಾಧ್ಯವಾಗದೆ ಕುಳಿತರು.
ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಸಂಪೂರ್ಣಗೊಳಿಸದೆ ನವಯುಗ ಕಂಪೆನಿ ಟೋಲ್ ವಸೂಲಾತಿಗೆ ಕೈ ಹಾಕಿದೆ. ಜಿಲ್ಲೆಯಲ್ಲಿ ಕಾಮಗಾರಿಯು ಸಂಪೂರ್ಣ ಅಪೂರ್ಣವಾಗಿದ್ದು ಟೋಲ್ ವಸೂಲಾತಿ ಬಗ್ಗೆ ನವಯುಗ ಕಂಪೆನಿಯವರ ವಿರುದ್ಧ ತೀವ್ರ ಅಸಮಾಧಾನವನ್ನು ಹೊರಹಾಕಿದರು. ಕಾಮಗಾರಿ ಸಂಪೂರ್ಣಗೊಳ್ಳುವ ತನಕ ಟೋಲ್ ವಸೂಲಿ ಮಾಡದಂತೆ ಸರಕಾರದ ವತಿಯಿಂದ ನಿರ್ದೇಶನ ನೀಡುವಂತೆ ಸಚಿವ ರೇವಣ್ಣ ಅವರಲ್ಲಿ ವಿನಂತಿಸಿದರೂ ಕೂಡ ಸಚಿವ ರೇವಣ್ಣ ಯಾವುದೇ ನಿರ್ಧಾರ ಕೈಗೊಳ್ಳುವುದು ರಾಜ್ಯ ಸರಕಾರದ ಕೈಯಲ್ಲಿಲ್ಲ. ಏನಾದರೂ ನಿರ್ಧಾರ ಕೈಗೊಳ್ಳಬೇಕಾದರೆ ಅದು ಕೇಂದ್ರ ಸರಕಾರ ಎಂದು ಕೈ ತೊಳೆದುಕೊಂಡರು.
ಈ ನಡುವೆ ಸಭೆಯಲ್ಲಿ ಉಪಸ್ಥಿತರಿದ್ದ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಅವರು ನವಯುಗ ಸಂಸ್ಥೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ ಸ್ಥಳೀಯರಿಂದ ಯಾವುದೇ ಟೋಲ್ ಸಂಗ್ರಹಿಸುವುದರ ಬಗ್ಗೆ ಈ ವರೆಗೆ ನಡೆದಿರುವ ಅಸಮರ್ಪಕ ಕಾಮಗಾರಿಯ ಕುರಿತು ತಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.
ಟೋಲ್ ಕೇಂದ್ರದಲ್ಲಿ ಪೋಲಿಸ್ ಬಲದೊಂದಿಗೆ ಟೋಲ್ ಸಂಗ್ರಹಿಸುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ ಮತ್ತು ರಘುಪತಿ ಭಟ್ ಅವರು ಜನರೊಂದಿಗೆ ನಾವಿದ್ದೇವೆ, ಪೋಲಿಸರು ಏನು ಮಾಡುತ್ತಾರೆ ನೋಡಿಕೊಳ್ಳೋಣ ಎಂಬ ಎಚ್ಚರಿಕೆಯನ್ನು ನೀಡಿದರಲ್ಲದೆ ಬೇರೆ ಕಡೆಯ ವಾಹನಗಳಿಗೂ ಟೋಲ್ ವಸೂಲಾತಿಗೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ನಡುವೆ ಇಬ್ಬರೂ ಶಾಸಕರನ್ನು ಸಮಾಧಾನಪಡಿಸಲು ಸಚಿವೆ ಡಾ|ಜಯಮಾಲಾ ಹರಸಾಹಸ ಪಟ್ಟರು ಅಲ್ಲದೆ ಉಸ್ತುವಾರಿ ಸಚಿವರು ಜಿಲ್ಲೆಯಲ್ಲೇ ಇನ್ನೊಂದು ಸಭೆ ಏರ್ಪಡಿಸೋಣ ಎಂದು ಮನವೊಲಿಸಲು ಪ್ರಯತ್ನಿಸಿದರು. ಸಭೆಯಲ್ಲಿ ಸ್ಪಷ್ಟ ನಿರ್ಧಾರ ತಳೆಯಲು ಸಾಧ್ಯವಾಗದಾಗ ಸ್ಥಳೀಯರಿಂದ ಹೇಗೆ ಟೋಲ್ ವಸೂಲಿ ಮಾಡುತ್ತಿರೋ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿ ಸಭೆಯಿಂದ ಹೊರನಡೆದರು. ಈ ವೇಳೆ ಸಭೆಯಲ್ಲಿದ್ದ ಹೋರಾಟಗಾರರು ಸಹ ಶಾಸಕರೊಂದಿಗೆ ಹೊರನಡೆದರು ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರಿಗೆ ಜಿಲ್ಲೆಯ ಬಗ್ಗೆ ಇರುವ ಕಾಳಜಿಯನ್ನು ಹಾಗೂ ಸಮಸ್ಯೆಯನ್ನು ಪರಿಹರಿಸಲು ಸಚಿವೆ ಹರಸಾಹಸ ಪಟ್ಟಿರುವುದನ್ನು ಹಾಗೂ ಶಾಸಕ ರಘುಪತಿ ಭಟ್ ಮತ್ತು ಕೋಟ ಶ್ರೀನಿವಾಸ್ ಪೂಜಾರಿಯವರ ಸಹಕಾರವನ್ನು ಹೋರಾಟಗಾರರು ಪ್ರಶಂಸಿದ್ದಾರೆ.
ಸಭೆಯಲ್ಲಿ ಕಂಡು ಬಂದ ಸ್ಥಳೀಯ ಶಾಸಕರ ಹಾಗೂ ಸಂಸದೆ ಅನುಪಸ್ಥಿತಿ
ಜಿಲ್ಲೆಯ ಟೋಲ್ ವಿಚಾರದಲ್ಲಿ ಹಲವಾರು ಸಮಯದಲ್ಲಿ ನವಯುಗ ಕಂಪೆನಿ, ಜಿಲ್ಲಾಡಳಿತ, ಸರಕಾರದ ನಡುವೆ ಜಂಗಿಕುಸ್ತಿ ನಡೆಯುತ್ತಿದ್ದರೂ ಎಂದೂ ಕೂಡ ಈ ಬಗ್ಗೆ ತೆಲೆ ಕೆಡಿಸಿಕೊಳ್ಳದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಗುರುವಾರ ಸಚಿವರ ನೇತೃತ್ವದಲ್ಲಿ ನಡೆದ ಸಭೆಗೆ ಬೆಂಗಳೂರಿನಲ್ಲಿ ಇದ್ದುಕೊಂಡು, ಸಭೆಯ ಮಾಹಿತಿ ಇದ್ದೂ ಕೂಡ ಸಭೆಗೆ ಭಾಗವಹಿಸಿದೆ ಇರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ಪಕ್ಷದ ರಾಜ್ಯ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ ಸಂಸದೆ ಶೋಭಾ ಕರಂದ್ಲಾಜೆ
ಸಭೆಯ ಕುರಿತು ಸ್ವತಃ ಶಾಸಕ ಹಾಗೂ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಸಂಸದರಿಗೆ ಹೋರಾಟಗಾರರ ಎದುರಿನಲ್ಲೇ ಮಾಹಿತಿ ನೀಡಿದ್ದು, ಸರಕಾರದ ವತಿಯಿಂದ ಕೂಡ ಮಾಹಿತಿ ಇತ್ತು ಎನ್ನಲಾಗಿದೆ. ಸಂಸದರು ಗುರುವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪಕ್ಷದ ರಾಜ್ಯ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ ಫೋಟೋಗಳು ವೈರಲ್ ಆಗಿದ್ದು ಜಿಲ್ಲೆಯ ಜ್ವಲಂತ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕರೆದ ಸಭೆಗೆ ಭಾಗವಹಿಸದಿರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ಪಕ್ಷದ ರಾಜ್ಯ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ ಸಂಸದೆ ಶೋಭಾ ಕರಂದ್ಲಾಜೆ
ಈ ನಡುವೆ ಸಭೆಗೆ ಕಾಪು ಶಾಸಕ ಮತ್ತು ಕುಂದಾಪುರ ಶಾಸಕರೂ ಕೂಡ ಹಾಜರಾಗಿಲ್ಲ ಎನ್ನಲಾಗಿದ್ದು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ಹಾಜರಾಗಲು ಸಾಧ್ಯವಾಗದಿದ್ದರೂ ಕೂಡ ಸಭೆಯ ಬಗ್ಗೆ ಫೋನ್ ಮೂಲಕ ಮಾಹಿತಿ ಪಡೆದುಕೊಂಡಿದ್ದರಲ್ಲದೆ ಸಲಹೆಗಳನ್ನು ನೀಡಿದ್ದರು ಎಂದು ಹೋರಾಟಗಾರರ ಪ್ರತಿನಿಧಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರಿ, ವಕೀಲರಾದ ಶ್ಯಾಂ ಸುಂದರ್ ನಾಯಿರಿ, ಹೋರಾಟ ಸಮಿತಿಯ ಪ್ರತಿನಿಧಿಗಳಾದ ಪ್ರತಾಪ್ ಶೆಟ್ಟಿ, ವಿಠಲ್ ಪೂಜಾರಿ ಐರೋಡಿ, ಪ್ರಶಾಂತ್ ಶೆಟ್ಟಿ, ನವೀನ್ ಬಾಂಜಿ, ಬೋಜ ಪೂಜಾರಿ,ಆಲ್ವಿನ್ ಅಂದ್ರಾದೆ, ಗೋವಿಂದ ಪೂಜಾರಿ ಹಾಗೂ ಇತರರು ಭಾಗವಹಿಸಿದ್ದರು.