Home Mangalorean News Kannada News ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ತ್ವರಿತಗೊಳಿಸಲು ಡಿಸಿ ಸಿಂಧೂ ಬಿ. ರೂಪೇಶ್ ಸೂಚನೆ

ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ತ್ವರಿತಗೊಳಿಸಲು ಡಿಸಿ ಸಿಂಧೂ ಬಿ. ರೂಪೇಶ್ ಸೂಚನೆ

Spread the love

ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ತ್ವರಿತಗೊಳಿಸಲು ಡಿಸಿ ಸಿಂಧೂ ಬಿ. ರೂಪೇಶ್ ಸೂಚನೆ

ಮಂಗಳೂರು : ಸ್ಮಾರ್ಟ್‍ಸಿಟಿ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.

ಅವರು ಗುರುವಾರ ಮಹಾನಗರಪಾಲಿಕೆ ಸಭಾಂಗಣದಲ್ಲಿ ಸ್ಮಾರ್ಟ್‍ಸಿಟಿ ಅಂತರ್ ಇಲಾಖಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದ ಕೆಲವು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಖಾಸಗೀ ಭೂಮಾಲೀಕರ ತಕರಾರಿನಿಂದ ಅರ್ಧದಲ್ಲಿಯೇ ನಿಂತಿರುವುದಕ್ಕೆ ಹಾಗೂ ಈ ವಿಷಯದಲ್ಲಿ ಯಾವುದೇ ಪ್ರಗತಿಯಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಟಿಡಿಆರ್ ಅಡಿ ಜಾಗ ವರ್ಗಾವಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ರೈಲ್ವೇ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿಗಾಗಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಸಂಬಂಧಪಟ್ಟ ಇಲಾಖೆಯೊಂದಿಗೆ ನಿರಂತರ ಸಮನ್ವಯದೊಂದಿಗೆ ವ್ಯವಹರಿಸಿ ಕಾಮಗಾರಿ ತ್ವರಿತಗೊಳಿಸಬೇಕು. ಕೇವಲ ಪತ್ರ ಬರೆದು, ಅನುಮತಿಗಾಗಿ ಕಾಯುವುದರಿಂದ ಯೋಜನೆ ವಿಳಂಬವಾಗಲು ಕಾರಣವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 ನಗರ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ಮನೆ ಒದಗಿಸಲು ಶಕ್ತಿನಗರದಲ್ಲಿ ಗುರುತಿಸಲಾಗಿರುವ ಜಮೀನಿಗೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇರುವುದರಿಂದ ಈ ಬಗ್ಗೆ ಸಮಸ್ಯೆ ಸರಿಪಡಿಸಲು ಅಥವಾ ಪರ್ಯಾಯ ಜಮೀನು ಗುರುತಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದರು.

ಕುಡ್ಸೆಂಪ್ ವತಿಯಿಂದ ಕೈಗೊಳ್ಳಲಾಗುವ ಒಳಚರಂಡಿ ಕಾಮಗಾರಿಗಳನ್ನೂ ತ್ವರಿತಗತಿಯಲ್ಲಿ ನಡೆಸಲು ಅವರು ಕುಡ್ಸೆಂಪ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಕ್ಲಾಕ್‍ಟವರ್‍ನಿಂದ ಆರ್‍ಟಿಓ ಸರ್ಕಲ್‍ವರೆಗಿನ ರಸ್ತೆಯನ್ನು ಏಕಮುಖವಾಗಿ ಪರಿವರ್ತಿಸುವ ಪ್ರಸ್ತಾವಕ್ಕೆ  ಪೊಲೀಸ್ ಇಲಾಖೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಡಿಸಿ ಕಚೇರಿ, ಅಗ್ನಿಶಾಮಕ ಕಚೇರಿ ಸೇರಿದಂತೆ ಪ್ರಮುಖ ಸರಕಾರಿ ಕಚೇರಿಗಳು ಇರುವುದರಿಂದ ಹಾಗೂ ಆಗಿಂದಾಗ್ಗೆ ನೆಹರೂ ಮೈದಾನಕ್ಕೆ ವಿವಿಐಪಿಗಳ ಭೇಟಿ ಇರುವುದರಿಂದ ಈ ರಸ್ತೆಯನ್ನು ಏಕಮುಖವನ್ನಾಗಿ ಪರಿವರ್ತಿಸುವುದು ಸೂಕ್ತವಲ್ಲ ಎಂದು ಪೊಲೀಸ್ ಇಲಾಖೆ ಅಭಿಪ್ರಾಯಿಸಿದೆ. ಈ ಹಿನ್ನೆಲೆಯಲ್ಲಿ ಈ ಪ್ರಸ್ತಾವವನ್ನು ಕೈಬಿಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ತಿಳಿಸಿದರು.

 ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version