ಸ್ಮಾರ್ಟ್‍ಸಿಟಿ ಕಾಮಗಾರಿಗಳು : ಮಹಾನಗರಪಾಲಿಕೆ, ಎನ್.ಐ.ಟಿ.ಕೆ ಯಿಂದ ಪರಿಶೀಲನೆ
ಮಂಗಳೂರು: ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಮಂಗಳೂರಿನಲ್ಲಿ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ಮಹಾನಗರಪಾಲಿಕೆ ಹಾಗೂ ಎನ್.ಐ.ಟಿ.ಕೆ. ಯಿಂದ ಪ್ರತ್ಯೇಕವಾಗಿ ತಾಂತ್ರಿಕ ಪರಿಶೀಲನೆಗೊಳಪಡಿಸಲು ನಿರ್ಧರಿಸಲಾಗಿದೆ.
ಸೋಮವಾರ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ಮಾರ್ಟ್‍ಸಿಟಿ ಅನುಷ್ಠಾನ ಮತ್ತು ಪರಿಶೀಲನಾ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು. ಸಚಿವರು ಮಾತನಾಡಿ, ಸ್ಮಾರ್ಟ್‍ಸಿಟಿ ಒಂದು ನಿಗದಿತ ಅವಧಿಯ ಯೋಜನೆಯಾಗಿರುವುದರಿಂದ ಎಲ್ಲಾ ಕಾಮಗಾರಿಗಳು ಮುಕ್ತಾಯವಾದ ಬಳಿಕ ಮಹಾನಗರಪಾಲಿಕೆಗೆ ಹಸ್ತಾಂತರವಾಗಬೇಕಾಗುತ್ತದೆ. ನಂತರ ಯಾವುದೇ ಲೋಪದೋಷಗಳು ಉಂಟಾಗದಂತೆ, ನಗರಪಾಲಿಕೆಗೆ ವಹಿಸುವ ಮೊದಲೇ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಸ್ಮಾರ್ಟ್‍ಸಿಟಿ ಲಿ. ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್, ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಪೂರ್ಣಗೊಂಡ ನಂತರ ಮಹಾನಗರಪಾಲಿಕೆಗೆ ಹಸ್ತಾಂತರಿಸುವ ಮೊದಲು ಮಹಾನಗರಪಾಲಿಕೆ ಹಾಗೂ ಎನ್.ಐ.ಟಿ.ಕೆ. ಸಂಸ್ಥೆಯಿಂದ ಸಮಾನಾಂತರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಸ್ಮಾರ್ಟ್‍ಸಿಟಿಯಲ್ಲಿ ಕೈಗೊಳ್ಳಲಾಗುವ ಯೋಜನೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರಬೇಕು ಎಂದು ತಿಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಮಗಾರಿಗಳ ಅನುಷ್ಠಾನ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕನಿಷ್ಠ ತೊಂದರೆಯಾಗುವಂತೆ ಕಾಮಗಾರಿ ನಡೆಸಬೇಕು. ಸುಗಮ ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾಮಗಾರಿಗಳನ್ನು ನಡೆಸುವಂತೆ ಸೂಚಿಸಿದರು. ಕಾಮಗಾರಿ ನಡೆಯುವ ಸ್ಥಳದಲ್ಲಿ ಯೋಜನೆಯ ಸಂಪೂರ್ಣ ವಿವರ, ವೆಚ್ಚ ಹಾಗೂ ಗುತ್ತಿಗೆದಾರರ ವಿವರಗಳನ್ನೊಳಗೊಂಡ ಮಾಹಿತಿ ಫಲಕವನ್ನು ಅಳವಡಿಸಬೇಕು ಎಂದು ಸಚಿವರು ನಿರ್ದೇಶಿಸಿದರು.
ನಗರದ ಆರ್‍ಟಿಓ ಸರ್ಕಲ್‍ನಿಂದ ಗಡಿಯಾರ ಗೋಪುರದವರಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಗುತ್ತಿಗೆದಾರರು ನಿಗದಿತ ಅವಧಿಯೊಳಗೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸಲು ತಾಕೀತು ಮಾಡಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾಡಿ, ಸ್ಮಾರ್ಟ್‍ಸಿಟಿ ಯೋಜನೆಗಳು ಅನುಷ್ಠಾನ ಸಂದರ್ಭದಲ್ಲಿ ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಸಂಸ್ಥೆ ನಡುವೆ ಹೊಂದಾಣಿಕೆ ಇಲ್ಲದೇ, ಕೆಲವು ಯೋಜನೆಗಳ ಅನುಷ್ಠಾನದಲ್ಲಿ ವಿಳಂಭವಾಗಿದೆ. ಸಾರ್ವಜನಿಕರಿಗೆ ಉಪಯೋಗವಾಗುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದರು. ರಸ್ತೆ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ಇಂತಹ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು. ಸ್ಮಾರ್ಟ್ ಶಾಲೆಗಳ ಆಯ್ಕೆ ಸಂದರ್ಭದಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಆದ್ಯತೆ ನೀಡಬೇಕು ಎಂದರು. ಸ್ಮಾರ್ಟ್ ಬಸ್ ತಂಗುದಾಣ ವಿನ್ಯಾಸ ಹಾಗೂ ಯೋಜನಾ ವೆಚ್ಚದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನ ಇದ್ದು, ಈ ಬಗ್ಗೆ ಜನತೆಗೆ ಉತ್ತರಿಸಲಾಗದ ಪರಿಸ್ಥಿತಿ ಇದೆ ಎಂದು ಶಾಸಕರು ತಿಳಿಸಿದರು.
ಮಂಗಳೂರು ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಮಾತನಾಡಿ, ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಈಗಾಗಲೇ ಸ್ಮಾರ್ಟ್ ರಸ್ತೆಯಲ್ಲಿ ಬರುವ ಸರಕಾರಿ ಕಚೇರಿಗಳಿಗೆ ಎಲ್‍ಇಡಿ ಲೈಟ್ ದೀಪಗಳ ಅಳವಡಿಕೆ ಹಾಗೂ ಹಂಪನಕಟ್ಟೆಯಲ್ಲಿ ಗಡಿಯಾರ ಗೋಪುರ ನಿರ್ಮಾಣ ಪೂರ್ಣಗೊಂಡಿದೆ. ಆರ್‍ಟಿಓ ಸರ್ಕಲ್‍ನಿಂದ ಗಡಿಯಾರ ಗೋಪುರದವರಗೆ ರಸ್ತೆ ಅಭಿವೃದ್ಧಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಜನವರಿ 30ರೊಳಗೆ ಪೂರ್ಣಗೊಳ್ಳಲಿದೆ. ವಲಯ 4ರಲ್ಲಿ ಒಳಚರಂಡಿ ಯೋಜನೆ ಪ್ರಗತಿಯಲ್ಲಿದೆ. ನೆಲ್ಲಿಕಾಯಿ ರಸ್ತೆ ಕಾಮಗಾರಿ ಮುಕ್ತಾಯಗೊಂಡಿದ್ದು ಮಿಷನ್ ಸ್ಟೀಟ್ ರಸ್ತೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಗರದ ವಿವಿದೆಡೆ 14 ಸ್ಮಾರ್ಟ್ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯ ಎಸ್.ಆರ್ ದರದಂತೆ ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಮತ್ತಿತರರು ಇದ್ದರು.