ಸ್ವಚ್ಚತೆಗೆ ರಾಷ್ಟ್ರಪ್ರಶಸ್ತಿ ಪಡೆದ ಉಡುಪಿ ನಗರ ಸಭಾ ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ

Spread the love

ಸ್ವಚ್ಚತೆಗೆ ರಾಷ್ಟ್ರಪ್ರಶಸ್ತಿ ಪಡೆದ ಉಡುಪಿ ನಗರ ಸಭಾ ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ

ಉಡುಪಿ: ಸ್ವಚ್ಚತೆಗಾಗಿ ರಾಷ್ಟ್ರ ರಾಜ್ಯ ಪ್ರಶಸ್ತಿಗಳನ್ನು ಪಡೆದ ರಾಜ್ಯದ ಪ್ರತಿಷ್ಟಿತ ನಗರಸಭೆ ಎಂದರೆ ಅದು ಉಡುಪಿ. ವ್ಯವಸ್ಥಿತವಾದ ಕಸದ ವಿಲೇವಾರಿ, ನಗರದ ಸ್ವಚ್ಚತೆಗಾಗಿ ವ್ಯವಸ್ಥಿತ ಸ್ವಚ್ಚತಾ ರಾಯಭಾರಿ ಇಂತಹ ಹಲವು ವ್ಯವಸ್ಥೆಗಳನ್ನು ಮಾಡಿಕೊಂಡಿರುವ ನಗರ ಸಭೆಯ ವ್ಯಾಪ್ತಿಯಲ್ಲಿ ಲೋಡುಗಟ್ಟಲೇ ಕಸದ ರಾಶಿ ಮಾತ್ರ ರಸ್ತೆಯಲ್ಲಿ ಹಾದು ಹೋಗುತ್ತಿರುವ ಪಾದಾಚಾರಿಗಳಿಗೆ ಇದುವೇ ನಮ್ಮ ಸ್ಚಚ್ಚ ಉಡುಪಿ ಎನ್ನುವುದು ಸಂಶಯಕ್ಕೆ ಕಾರಣವಾಗಿದೆ.

ಮಳೆಗಾಲಕ್ಕೆ ಮುನ್ನ ಕಸದ ಸಮರ್ಪಕ ವಿಲೇವಾರಿಯ ಕುರಿತು ನಗರಸಭಾ ಅಧಿವೇಶನದಲ್ಲಿ ಆಡಳಿತ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ನಡುವೆ ಮಾತಿನ ವಾಗ್ವದ ನಡೆದು ಅಧಿಕಾರಿಗಳು ನೀಡಿರುವುದು ಕೇವಲ ಕಾಟಾಚಾರದ ಮಾಹಿತಿ ಎನ್ನುವುದು ಗೊತ್ತಾಗಬೇಕಾದರೆ ಒಂದು ಸುತ್ತು ಉಡುಪಿ ಕರಾವಳಿ ಬೈಪಾಸ್ ಬಳಿಯ ಶಾರದಾ ಹೋಟೆಲ್ ಬಳಿ ಹೋದರೆ ಸ್ಚಚ್ಚ ನಗರಸಭೆ ಉಡುಪಿಯ ನರಕ ದರ್ಶನವಾಗುತ್ತದೆ.

ಉಡುಪಿ ಕರಾವಳಿ ಬೈಪಾಸ್ ಬಳಿಯ ಶಾರದಾ ಹೋಟೆಲ್ ಬಳಿ ಹೋದರೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ. ರಸ್ತೆಯ ಬದಿಯಲ್ಲೇ ರಾಶಿ ರಾಶಿ ಎಳನೀರಿನ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸದ ತುಂಬಿ ತುಳುಕುತ್ತದೆ. ಅದಕ್ಕೆ ತಾಗಿಕೊಂಡೇ ವಲಸೆ ಕಾರ್ಮಿಕರು ತಮ್ಮ ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದು ನಗರಸಭೆಯ ಆಡಳಿತ ಕಸದ ಸಮರ್ಪಕ ವಿಲೇವಾರಿಗೆ ಕೈಗೊಂಡಿರುವ ಕ್ರಮ ಎಷ್ಟು ಸತ್ಯ ಎನ್ನುವುದು ತಿಳೀಯುತ್ತದೆ. ರಸ್ತೆಯ ಬದಿಯಲ್ಲಿ   ಹೀಗೆ ಎಲ್ಲೆಂದರಲ್ಲಿ ತ್ಯಾಜ್ಯ ಬಿದ್ದಿದ್ದು, ಪ್ಲಾಸ್ಟಿಕ್‌ ಹರಡಿದ್ದುಅಸಹ್ಯ ಮೂಡಿಸುತ್ತಿದೆ. ಅಲ್ಲದೆ ಕಸದ ರಾಶಿ ತುಂಬಿ ಕೊಳೆತು ದುರ್ವಾಸನೆ ಬೀರುತ್ತಿದೆ.

ನಗರಸಭೆಯ ಸ್ಚಚ್ಚತಾ ಅಭಿಯಾನ ಕೇವಲ ನಗರ ಪ್ರದೇಶದ ಒಳಗೆ ಮಾತ್ರ ಸೀಮಿತವಾಗಿದ್ದು, ಸ್ವಚ್ಛ ಭಾರತಅಭಿಯಾನ ಅಲ್ಲಲ್ಲಿ ನಡೆಯುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಭಾಗದ ಜನತೆಗೆ, ಸ್ಥಳೀಯ ನಗರಸಭಾ ಸದಸ್ಯರಿಗೆ, ಅಧಿಕಾರಿಗಳಿಗೆ ಅದು ಕೇಳಿಸಿದಂತಿಲ್ಲ.

ನಗರಸಭೆ ಅಲ್ಲಲ್ಲಿ ‘ಕಸ ಹಾಕಬೇಡಿ’ ಎಂಬ ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ಅದು ನಾಗರಿಕರ ಕಣ್ಣಿಗೆಬಿದ್ದಂತಿಲ್ಲ. ಅಲ್ಲದೆ ಅಲ್ಲಿರುವ ಕಸವನ್ನು ವಿಲೇವಾರಿ ಮಾಡುವ ಗೋಜಿಗೆ ನಗರಸಭೆಯ ಆಡಳಿತ ಅಥವಾ ಅಧಿಕಾರಿ ವರ್ಗ ಕೂಡ ಮನಸ್ಸು ಮಾಡಿದಂತಿಲ್ಲ.

ಜನತೆ ಕಸವನ್ನು ಪ್ಲಾಸ್ಟಿಕ್‌ ಅನ್ನು, ತ್ಯಾಜ್ಯವನ್ನು ಕೊಳೆತ ತರಕಾರಿಗಳನ್ನು, ಎಳನೀರಿನ ತ್ಯಾಜ್ಯವನ್ನು ತಂದುರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿದ್ದಾರೆ. ಅದು ಕೊಳೆತು ದುರ್ವಾಸನೆ ಬೀರುತ್ತಿದೆ.  ಮಳೆಗಾಲ ಆರಂಭವಾಗಿದ್ದು ಕಸದ ಪಕ್ಕದಲ್ಲಿಯೇ ವಲಸೆ ಕಾರ್ಮಿಕರು ವಾಸ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ತೀವ್ರರೀತಿಯ ಆರೋಗ್ಯದ ಸಮಸ್ಯೆ ಅವರನ್ನು ಕಾಡುವುದಂತು ಖಚಿತ. ಈ ಕುರಿತು ನಗರಸಭಾ ಆಡಳಿತ ಆದಷ್ಟೂ ಬೇಗ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.ಅಲ್ಲದೆ ರಸ್ತೆಯ ಬದಿಯಲ್ಲೂ ಜನರು ತ್ಯಾಜ್ಯವನ್ನುಎಸೆಯದಂತೆ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು  . ನಗರಸಭೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದೇ ಎಂದು ಕಾದು ನೋಡಬೇಕಾಗಿದೆ.


Spread the love