ಸ್ವಚ್ಚ ಭಾರತ್ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಆಯ್ಕೆ
ಹೆಜಮಾಡಿ : ಸ್ವಚ್ಛ ಗ್ರಾಮ ಭಾರತ್ ಮಿಷನ್ ಯೋಜನೆಯ ಅನುಷ್ಠಾನದ ಕಾರಣ ಮಹತ್ಮಾ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಅ. 2ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಗುಜರಾತಿನ ಸಾಬರ್ಮತಿ ಆಶ್ರಮದಲ್ಲಿ ನಡೆಯಲಿರುವ ಸ್ವಚ್ಚ ಭಾರತ್ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮ ಪಂಚಾಯಿತು ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್ ಹಾಗೂ ಕಾರ್ಕಳ ಮುಡಾರುವಿನ ಸ್ವಚ್ಚಾಗ್ರಹಿ ಶ್ರೀಮತಿ ಮಾಧವಿ ಕೆ ನಾಯಕ್ ಆಯ್ಕೆ ಆಗಿದ್ದಾರೆ.
ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚ ಗ್ರಾಮ ಯೋಜನೆಯಡಿ ನಿರ್ಮಾಣದಿಂದ ಎಸ್ಎಲ್ಆರ್ಎಂ ತ್ಯಾಜ್ಯ ಘಟಕದಿಂದ ತ್ಯಾಜ್ಯ ಮುಕ್ತ ಗ್ರಾಮ ಪಂಚಾಯತ್ ಆಗಿ ಹೆಸರು ಪಡೆದಿದೆ. ಸ್ವಚ್ಚಗ್ರಾಮ ಭಾರತ್ ಮಿಷನ್ ಯೋಜನೆಯ ಅನುಷ್ಠಾನವನ್ನು ಸಮರ್ಪಕವಾಗಿ ಮಾಡಿದ ಹಿನ್ನೆಲೆಯಲ್ಲಿ ಮಹತ್ಮಾಗಾಂಧಿಯವರ ಸಾಬರ್ಮತಿ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸ್ವಚ್ಚಭಾರತ್ ಮಿಶನ್ ಕಾರ್ಯಕ್ರಮದಲ್ಲಿ ಭಾಗಿ ಆಗುವ ಯೋಗ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶಾಲಾಕ್ಷಿ ಅವರಿಗೆ ಸಿಕ್ಕಿದೆ.
ಈ ಸಂದರ್ಭ ವಿಶಾಲಾಕ್ಷಿ ಪುತ್ರನ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಹೆಜಮಾಡಿ ಗ್ರಾಮವನ್ನು ಸ್ವಚ್ಚ ಗ್ರಾಮ ಎಂದು ಕೇಂದ್ರ ಗುರುತಿಸಿ ಸಾಬರ್ಮತಿ ಆಶ್ರಮಕ್ಕೆ ಕರೆದಿರುವುದು ಹೆಮ್ಮೆ ತಂದಿದೆ. ಈ ಆಯ್ಕೆಗೆ ಹೆಜಮಾಡಿ ಗ್ರಾಮ ಪಂಚಾಯಿತು ಉಪಾಧ್ಯಕ್ಷ ಸಿಹಿತ ಎಲ್ಲಾ ಸದಸ್ಯರು ಮತ್ತು ಗ್ರಾಮದ ಎಲ್ಲಾ ಗ್ರಾಮಸ್ಥರ ಕೈಜೋಡಿಸುವಿಕೆ ಇದೆ. ಇದ್ಕಕೆ ಮೂಲ ಕಾರಣರಾದ ಸಿಪಿಓ ಶ್ರೀನಿವಾಸ ರಾವ್, ರಘುನಾಥ್ ಮತ್ತು ಮೂರ್ತಿ ಸರ್ ಕಾರಣ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅತೀವ ಸಂತಸ ಆಗುತ್ತಿದೆ ಎಂದರು.
ಗ್ರಾಮ ಪಂಚಾಯತು ಉಪಾಧ್ಯಕ್ಷ ಸುಧಾಕರ ಕರ್ಕೇರಾ ಮಾತನಾಡಿ, ಇಲ್ಲಿಯ ತ್ಯಾಜ್ಯ ಘಟಕವನ್ನು ಕಳೆದ ನವಂಬರ್ ತಿಂಗಳಲ್ಲಿ ಪ್ರಾರಂಭಿಸಿದ್ದೇವೆ. ಪ್ರಾರಂಭದಲ್ಲಿ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಇಲ್ಲಿಯ ಕೆಲಸ ಕಾರ್ಯಗಳನ್ನು ನೋಡಿ ಜನರಿಂದ ತುಂಬಾ ಬೆಂಬಲ ಸಿಗುತ್ತಿದೆ. ಘಟಕದ ಪಕ್ಕದಲ್ಲಿಯೇ ಖಾಸಗಿ ಶಾಲೆಯೊಂದಿದ್ದು, ಮೊದಲಿಗೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಾವು ಶಾಲಾ ಆಡಳಿತ ಮಂಡಳಿಯವರನ್ನು ನಿಟ್ಟೆಯಲ್ಲಿ ಯಶಸ್ವಿ ಕಾರ್ಯಚರಿಸುತ್ತಿರುವ ಘಟಕಕ್ಕೆ ಕರೆದು ಕೊಂಡು ಹೋಗಿ ಅವರಿಗೆ ತೋರಿಸಿದಾಗ ಅವರು ಸಂತೋಷದಿಂದ ಒಪ್ಪಿಗೆ ನೀಡಿದ್ದಾರೆ.
ಹೆಜಮಾಡಿ ಗ್ರಾಮ ವ್ಯಾಪ್ತಿಯಲ್ಲಿ ಹಿಂದೆ ಕಸದ ಕೊಂಪೆಗಳು ಅಲ್ಲಲ್ಲಿ ಇತ್ತು. ಆದರೆ ಈಗ ಎಲ್ಲೂ ಕಸ ಕಾಣ ಸಿಗುತ್ತಿಲ್ಲ. ಹೆಜಮಾಡಿ ಗ್ರಾಮದ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ರವರನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಗುಜರಾತಿನ ಸಾಬರ್ಮತಿ ಆಶ್ರಮದಲ್ಲಿ ನಡೆಯುವ ಸ್ವಚ್ಚ ಭಾರತ ಕಾರ್ಯಕ್ರಮಕ್ಕೆ ಕೇಂದ್ರದಿಂದ ಕರೆಸಿಕೊಂಡಿರುವುದು ಅತೀವ ಸಂತಸ ತಂದಿದೆ ಎಂದಿದ್ದಾರೆ.
ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್, ಸದಸ್ಯರಾದ ಪ್ರಾಣೇಶ್ ಹೆಜಮಾಡಿ, ಗೋವರ್ಧನ ಕೋಟ್ಯಾನ್, ರೇಷ್ಮಾ ಮೆಂಡನ್ ಹಾಗೂ ತ್ಯಾಜ್ಯ ಘಟಕದ ನೌಕರ ವೃಂದ ಉಪಸ್ಥಿತರಿದ್ದರು.