ಸ್ವಚ್ಛ ಮಂಗಳೂರು ನೂರು ಅಭಿಯಾನ – ಸ್ವಯಂ ಸೇವಕರ ಸಭೆ
ಮಂಗಳೂರು: ರಾಮಕೃಷ್ಣ ಮಿಶನ್ ಸ್ವಚ್ಛ ಮಂಗಳೂರು ತೃತೀಯ ಹಂತದ ಅಭಿಯಾನದ ನೂರು ಕಾರ್ಯಕ್ರಮಗಳ ಪ್ರಯುಕ್ತ ಸ್ವಯಂ ಸೇವಕರ ಸಭೆಯನ್ನು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಇದಕ್ಕೂ ಮುನ್ನ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ನಗರದ ಬೇರೆ ಬೇರೆ 40 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಯಂಸೇವಕರ ಸಭೆಯನ್ನು ಚೆನ್ನೈ ರಾಮಕೃಷ್ಣ ಮಿಶನ್ನಿನ ಸ್ವಾಮಿ ಸತ್ಯಜ್ಞಾನಾನಂದಜಿ ಮಹರಾಜ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
“ಮಂಗಳೂರಿನಲ್ಲಿ ನಡೆಯುವ ಸ್ವಚ್ಛ ಭಾರತ ಕಾರ್ಯಕ್ರಮ ಇಡೀ ದೇಶಕ್ಕೆ ಮಾದರಿಯಾಗಿದೆ. ಇದು ಕೇವಲ ಕಸಗುಡಿಸುವ ಕೆಲಸವಾಗಿಲ್ಲ ಬದಲಿಗೆ ಸುಮಾರು 50 ತಂಡಗಳನ್ನು ರಚಿಸುವುದರ ಮೂಲಕ ನಗರದಲ್ಲಿರುವ ಮನಸ್ಸುಗಳನ್ನು ಜೋಡಿಸುವ ಅಧ್ಬುತವಾದ ಕೆಲಸವಾಗಿದೆ. ಇಂದು ಭಾರತ ಹಲವಾರು ಕ್ಷೇತ್ರಗಳಲ್ಲಿ ಉನ್ನತಿಯನ್ನು ಸಾಧಿಸುವತ್ತ ಮುನ್ನಡೆಯುತ್ತಿದೆ. ಅದೇ ರೀತಿ ಸ್ವಚ್ಛತೆಯಲ್ಲೂ ಜಗತ್ತಿನಾದ್ಯಂತ ಹೆಸರು ಮಾಡಬೇಕು. ಇಂತಹ ಕಾರ್ಯಕ್ರಮಗಳನ್ನು ಕಂಡಾಗ ಆ ದಿನಗಳು ದೂರವಿಲ್ಲ. ಇಲ್ಲಿಯ ಪ್ರೇರಣೆಯಿಂದ ಚೆನ್ನೈನಲ್ಲಿಯೂ ಮಂಗಳೂರು ಮಾದರಿಯಲ್ಲಿ ಸ್ವಚ್ಛ ಭಾರತವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ಅವರು ತಮ್ಮ ಉದ್ಘಾಟನಾ ನುಡಿಯಲ್ಲಿ ತಿಳಿಸಿದರು.
ಸ್ವಾಮಿ ಜಿತಕಾಮಾನಂದಜಿ ಮಹರಾಜ ತೃತೀಯ ಹಂತದ ನೂರು ಸ್ವಚ್ಛತಾ ಕಾರ್ಯಕ್ರಮಗಳು ನಡೆದು ಬಂದ ಹಾದಿ ಹೇಗಿತ್ತು ಎನ್ನುವುದನ್ನು ತಿಳಿಸಿದರು.
ಗದಗಿನ ಸ್ವಾಮಿ ನಿರ್ಭಯಾನಂದಜಿ ಮಹರಾಜ್ ಮಾತನಾಡಿ “ಈ ಸ್ವಚ್ಛತಾ ಕಾರ್ಯ ಸ್ವಾಮಿ ವಿವೇಕಾನಂದರ ಸೇವಾ ಕಲ್ಪನೆಯನ್ನು ಸ್ಪಷ್ಟವಾಗಿ ಅನುಷ್ಠಾನಗೊಳಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರ. ಈ ಮಾದರಿಯನ್ನು ನಾವು ಗದಗಿನಲ್ಲಿ ಜಾರಿಗೊಳಿಸುವ ಸಲುವಾಗಿ ಇಲ್ಲಿ ಕಣ್ಣಾರೆ ಕಂಡು ಹೋಗಲು ಬಂದಿದ್ದೇನೆ. ಇಂದು ಬೆಳಿಗ್ಗೆ ಇಡೀ ನಗರದಲ್ಲಿ 40 ಸ್ಥಳಗಳಲ್ಲಿ ಅಭಿಯಾನ ನಡೆಯುತ್ತಿರುವಾಗ ಇದು ನನಗೆ ಸಾಕ್ಷಾತ್ ಭಗವತ್ ದರ್ಶನದಂತೆ ಭಾಸವಾಗಿತ್ತು. ಇಲ್ಲಿಯ ಜನರ ಬದ್ಧತೆ ಹಾಗೂ ಸೇವಾ ತತ್ಪರತೆ ಅನನ್ಯ” ಎಂದು ಬಣ್ಣಿಸಿದರು.
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ವಿನಯ ಹೆಗ್ಡೆ ಮಾತನಾಡಿ “ ಸ್ವಚ್ಛ ಮಂಗಳೂರು ಕಾರ್ಯಕ್ರಮ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ನಡೆಯುತ್ತಿದೆ ಅದಕ್ಕಾಗಿ ರಾಮಕೃಷ್ಣ ಮಿಷನ್ನಿಗೆ ಅಭಿನಂದಿಸುತ್ತೇನೆ. ಮಂಗಳೂರು ಎರಡು ವರ್ಷಗಳ ಹಿಂದೆ ನಕಾರಾತ್ಮಕವಾಗಿ ಪ್ರಚಾದಲ್ಲಿತ್ತು ಇಂದು ಇಂತಹ ಸಕಾರಾತ್ಮಕ ಕಾರ್ಯಗಳು ಚಿಂತನೆಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಕಾರ್ಯಗಳಿಗೆ ಹೆಚ್ಚು ಪ್ರಚಾರ ದೊರಕಬೇಕು ಅಂದಾಗ ಮಾತ್ರ ದೇಶದ ಉನ್ನತಿ ಸಾಧ್ಯ” ಎಂದು ತಿಳಿಸಿದರು
ಎಂ ಆರ್ ಪಿ ಎಲ್ ಸಂಸ್ಥೆಯ ಡಿಜಿಎಂ ಶ್ರೀ ಹರೀಶ್ ಬಾಳಿಗಾ ಮಾತನಾಡಿ “ರಾಮಕೃಷ್ಣ ಮಿಶನ್ನಿ ನ ಜೊತೆಗೆ ಈ ಕಾರ್ಯಕ್ರಮದಲ್ಲಿ ಜೋಡಿಸಿಕೊಂಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ. ಸ್ವಚ್ಛ ಭಾರತದ ಕಾರ್ಯಕ್ಕೆ ಪೂರ್ಣಪ್ರಮಾಣದಲ್ಲಿ ಸಹಕಾರ ನೀಡುತ್ತಿರುವುದಾಗಿ ತಿಳಿಸಿದರು. ಅಲ್ಲದೇ ಈ ಕಾರ್ಯಕ್ರಮದ ಪರಿಣಾಮ ಸಮಾಜದ ಮೇಲೆ ಯಾವ ರೀತಿಯಾಗಿದೆ ಎಂಬುದನ್ನು ಅಧ್ಯಯನ ಮಾಡಬೇಕಾಗಿದೆ. ಮುಂಬರುವ ದಿನಗಳಲ್ಲಿಯೂ ರಾಮಕೃಷ್ಣ ಮಿಶನ್ನಿನ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಪೂರ್ಣಪ್ರಮಾಣದ ಸಹಕಾರ ನೀಡುವುದಾಗಿ ತಿಳಿಸಿದರು
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸ್ವಾಮಿ ಏಕಗಮ್ಯಾನಂದಜಿ ಧನ್ಯವಾದ ಸಮರ್ಪಿಸಿದರು. ಪ್ರಾಧ್ಯಾಪಕಿ ಶ್ರೀಮತಿ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.