ಸ್ವಚ್ಛ ಸುಂದರ ಕರ್ನಾಟಕಕ್ಕಾಗಿ ಸರ್ಕಾರ ಬದ್ಲಿಸಿ, ಬಿಜೆಪಿ ಗೆಲ್ಲಿಸಿ ; ನರೇಂದ್ರ ಮೋದಿ
ಮಂಗಳೂರು: ನಮ್ಮ ಕಾರ್ಯಕರ್ತರನ್ನು ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಅವರೇ ಮೇ 12ರಂದು ನಿಮ್ಮ ಪಾಪಗಳಿಗೆ ಜನ ಶೀಕ್ಷೆ ನೀಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು. ನಗರದ ಕೇಂದ್ರ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾನೂನು ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರ ಅಪರಾಧಿಗಳನ್ನು ಜಾತಿ, ಪಂಥದ ಆಧಾರದ ಮೇಲೆ ವಿಭಜಿಸುತ್ತಿದೆ. ಆದರೆ, ನಮ್ಮದು ಸಮಾಜ ಕಲ್ಯಾಣ ಸರ್ಕಾರ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಇವಿಎಂ ಬಗ್ಗೆ ಚಕಾರ ಎತ್ತುತ್ತಿದೆ. ನಮ್ಮನ್ನು ಮೋದಿ ಸೋಲಿಸಿಲ್ಲ, ಇವಿಎಂ ಸೋಲಿಸಿದೆ ಎನ್ನುತ್ತಿದ್ದಾರೆ. ನಿಜವಾದ ಇವಿಎಂ ಎಂಬ ನೀವು ಕಾಂಗ್ರೆಸ್ ಅನ್ನು ಸೋಲಿಸಲಿದ್ದೀರಿ. ಅವರ ಆರೋಪ ಈ ಬಾರಿ ನಡೆಯೋದಿಲ್ಲ ಎಂದರು.
ನೋಟು ಅಮಾನ್ಯೀಕರಣಕ್ಕೂ ಟೀಕೆ ಮಾಡುತ್ತೀರಿ. ಇದಾದ ಬಳಿಕ, ಕಾಂಗ್ರೆಸ್ನ ಮುಖಂಡರ ಬಳಿ ಇದ್ದ ಬಂಡಲ್ ಬಂಡಲ್ ನೋಟುಗಳು ಹೊರ ಬಂದವು. ಈ ಹಣ ಯಾರದ್ದು ಎಂದು ಮೋದಿ ಪ್ರಶ್ನಿಸಿದರು.
ಕಾಂಗ್ರೆಸ್ ಸ್ಥಿತಿ ಯಾವ ಹಂತಕ್ಕೆ ಬಂದಿದೆ ಗೊತ್ತಾ? ಎಂದು ಜನರನ್ನು ಪ್ರಶ್ನಿಸಿದ ಪ್ರಧಾನಿ, ನೀರಿನಿಂದ ಹೊರ ತೆಗೆದ ಮೀನಿನಂತಾಗಿದೆ ಕಾಂಗ್ರೆಸ್ ಸ್ಥಿತಿ. ಬಡವರನ್ನು ಲೂಟಿ ಮಾಡಿದವರನ್ನು ಜನ ಅಧಿಕಾರದಲ್ಲಿ ಉಳಿಸುವುದಿಲ್ಲ. ಸ್ವಂತ ಪರಿವಾರಕ್ಕಾಗಿ ಕಾಂಗ್ರೆಸ್ನಿಂದ ಬಡ ಜನರ ಬಲಿ ಪಡೆಯಲಾಗುತ್ತಿದೆ. ಆದರೆ, ನನಗೂ ಪರಿವಾರವಿದೆ ಅದು 125 ಕೋಟಿ ಜನರದ್ದು ಎಂದು ಹೇಳಿದರು.
ಹಿಂದುಳಿದ ನಾಯಕ ದೇವರಾಜ ಅರಸು ಅವರನ್ನು ಕಾಂಗ್ರೆಸ್ ಸೋಲಿಸಿತು, ಆದರೆ, ಇಂದಿರಾ ಗಾಂಧಿ ಅವರನ್ನು ಕರ್ನಾಟಕದಿಂದ ಗೆಲ್ಲಿಸಲು ಸಾಧ್ಯವಾಯಿತು. ದೇವರಾಜ ಅರಸು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದರು. ಕಾಂಗ್ರೆಸ್ ಬಗ್ಗೆ ಟೀಕಿಸಿದ್ದಕ್ಕೆ ಅರಸು ಅವರನ್ನು ಸೋಲಿಸಲಾಯಿತು. ಬಿಜೆಪಿಯಲ್ಲಿ ಪರಿವಾರ ರಾಜಕಾರಣ ಇಲ್ಲ ಎಂದು ಮೋದಿ ಹೇಳಿದರು.
ನಮ್ಮ ಕಾರ್ಯಕರ್ತರನ್ನು ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಅವರೇ ಮೇ 12ರಂದು ನಿಮ್ಮ ಪಾಪಗಳಿಗೆ ಜನ ಶೀಕ್ಷೆ ನೀಡಲಿದ್ದಾರೆ. ಕಾನೂನು ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರ ಅಪರಾಧಿಗಳನ್ನು ಜಾತಿ, ಪಂಥದ ಆಧಾರದ ಮೇಲೆ ವಿಭಜಿಸುತ್ತಿದೆ. ನಮ್ಮ ಸರ್ಕಾರ ಸಮಾಜದ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.
2022ರ ವೇಳೆಗೆ ಯಾವ ಬಡವರೂ ಮನೆ ಇಲ್ಲದೆ ಇರಬಾರದು. ಇದು ನಮ್ಮ ಸಂಕಲ್ಪ. ಬಡವರಿಗೆ ಮನೆ ನಿರ್ಮಾಣಕ್ಕೆ ನಾವು ಕೋಟ್ಯಂತರ ರೂ ನೀಡಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ಅನುಷ್ಠಾನ ಮಾಡಿಲ್ಲ. ಇಂಥವರು ಮೇ12ರಂದು ಮನೆಗೆ ಹೋಗುವುದು ಬೇಡ್ವಾ? ಎಂದು ಪ್ರಶ್ನಿಸಿದ ಮೋದಿ, ನಾವು ನೀಡಿದ ಯೋಜನೆಗಳನ್ನು ಜನರಿಗೆ ತಲುಪಿಸದೆ ರಾಜ್ಯ ಕಾಂಗ್ರೆಸ್ ನಿದ್ದೆ ಮಾಡುತ್ತಿದೆ ಎಂದು ಟೀಕಿಸಿದರು.
ಸುರಕ್ಷಿತ ಕರ್ನಾಟಕ ನಮ್ಮ ಮಿಷನ್. ಹಿಂದೆ ರಾಜೀವ್ಗಾಂಧಿ ಅವರು ಹೇಳಿದ್ದರು ದೆಹಲಿಯಿಂದ 1 ರೂಪಾಯಿ ಬಂದರೆ ಅದು ಹಳ್ಳಿಗಳಿಗೆ ತಲುಪುವ ವೇಳೆಗೆ 15 ಪೈಸೆ ಆಗುತ್ತಿತ್ತು. ಇದು ಹೇಗೆ ಸಾಧ್ಯ? 1 ರೂಪಾಯಿಯಲ್ಲಿ 85 ಪೈಸೆ ಮಧ್ಯವರ್ತಿಗಳ ಜೇಬು ಸೇರುತ್ತಿತ್ತು. ಹಿಂದೆ ಜನರ ಬಳಿಗೆ ಎಷ್ಟು ಹಣ ಹೋಯಿತು ಎಂದು ಲೆಕ್ಕ ಹಾಕಲಾಗುತ್ತಿತ್ತು. ಆದರೆ, ಇಂದು ಜೇಬಿಗೆ ಎಷ್ಟು ಬಂತು ಎಂದು ಕಾಂಗ್ರೆಸ್ ಲೆಕ್ಕ ಹಾಕುತ್ತಿದೆ ಎಂದು ಆಪಾದಿಸಿದರು.
ಮುಸ್ಲಿಂ ಮಹಿಳೆಯರ ರಕ್ಷಣೆಗೆ ಸರ್ಕಾರ ಚಿಂತನೆ ನಡೆಸಿದರೆ ಕಾಂಗ್ರೆಸ್ ಅದಕ್ಕೂ ವಿರೋಧ ವ್ಯಕ್ತಪಡಿಸುತ್ತದೆ. ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋದರೆ ಎಲ್ಲಿಗೆ ಹೋಗಿದ್ದೆ ಎಂದು ಕೇಳುತ್ತಾರೆ. ಆದರೆ, ಗಂಡುಮಕ್ಕಳು ಎಲ್ಲಿಗೆ ಹೋಗಿದ್ದರು ಎಂದು ಕೇಳಬೇಕಿದೆ. ಮಕ್ಕಳ ರಕ್ಷಣೆಗೆ ಕಾಂಗ್ರೆಸ್ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿತ್ತು. ತ್ರಿವಳಿ ತಲಾಖ್ ಮೂಲಕ ಅವರ ಬದುಕು ಸಂಕಷ್ಟವಾಗುತ್ತಿತ್ತು. ಇದನ್ನು ತಪ್ಪಿಸಲು ನಾವು ಕಾನೂನು ಜಾರಿಗೆ ತಂದಿದ್ದೇವೆ ಎಂದರು.
ಸಮುದ್ರ ವ್ಯಾಪಾರವನ್ನು ಹೆಚ್ಚಿಸಬೇಕಾಗಿದೆ, ಸಾಗರ ಮಾಲಾ ಯೋಜನೆ ಮೂಲಕ ಅಭಿವೃದ್ಧಿ ಯೋಜನೆ ಕೈಗೊಂಡಿದ್ದೇವೆ ಎಂದು ಹೇಳಿದರು.
ಯಡಿಯೂರಪ್ಪ ರೈತ ನಾಯಕರಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಮಾಡಬೇಕಿದೆ. ಅದಕ್ಕಾಗಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ. ಕರ್ನಾಟಕದಲ್ಲಿ ಬಿಜೆಪಿ ಬಹುಮತದ ಸರ್ಕಾರ ರಚನೆ ಮಾಡಲಿದೆ. ಆದರೆ, ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಆಪಾದಿಸಿದರು. ಸ್ವಚ್ಛ ಸುಂದರ ಕರ್ನಾಟಕ ನಿರ್ಮಿಸೋಣ, ಸರ್ಕಾರ ಬದ್ಲಿಸಿ, ಬಿಜೆಪಿ ಗೆಲ್ಲಿಸಿ ಎಂದು ಮೋದಿ ಕನ್ನಡದಲ್ಲಿ ಹೇಳುವ ಮೂಲಕ ಭಾಷಣ ಕೊನೆಗೊಳಿಸಿದರು.
ಕೃಪೆ: ಪ್ರಜಾವಾಣಿ