ಸ್ವತಂತ್ರ ಭಾರತ ಸಾಮಾನ್ಯನಿಗೂ ಸಾಧನೆ ಮಾಡುವ ಅವಕಾಶ ನೀಡಿದೆ: ಹಾಜಬ್ಬ
ಮಂಗಳೂರು: ಮಾಧ್ಯಮಗಳ ಪ್ರಚಾರ ಮತ್ತು ದಾನಿಗಳ ಸಹಕಾರದಿಂದ ನನ್ನಂತ ಬಡವನೂ ಶಾಲೆ ಕಟ್ಟಲು ಸಾಧ್ಯವಾಯಿತು ಎಂದು ಹರೇಕಳ ಹಾಜಬ್ಬ ಹೇಳಿದರು.
ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಗುರುವಾರ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನಡೆಸಿ ಮಾತನಾಡಿದ ‘ಅಕ್ಷರ ಸಂತ’ ಹಾಜಬ್ಬ, ಮಾಧ್ಯಮಗಳಿಂದ ನಾನು ಈ ಮಟ್ಟಕ್ಕೆ ಏರಲು ಸಾಧ್ಯವಾಯಿತು. ಈಗ ಅನೇಕರು ಗುರುತಿಸಿ ಧನಸಹಾಯ ಮಾಡಿದ್ದಾರೆ. ಸ್ವತಂತ್ರ ಭಾರತದಲ್ಲಿ ನನಗೆ ಒದಗಿ ಬಂದ ಅವಕಾಶ ನಿಮಗೂ ಬರಲಿ ಎಂದು ವಿದ್ಯಾರ್ಥಿಗಳನ್ನು ಹಾರೈಸಿದರು. ಇದೇ ವೇಳೆ ಕಾಲೇಜಿನ ವತಿಯಿಂದ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷೀಯ ಮಾತುಗಳನ್ನಾಡಿದ ಪ್ರಾಂಶುಪಾಲರಾದ ಡಾ.ಉದಯ ಕುಮಾರ್ ಎಂ.ಎ, ಅನೇಕ ಬಾರಿ ಕೇವಲ ನುಡಿಶೂರರಾಗಿ ಜವಾಬ್ದಾರಿ ಮರೆಯುವ ನಮಗೆ ಹರೇಕಳ ಹಾಜಬ್ಬರಂಥವರು ಪ್ರೇರಣೆಯಾಗಬೇಕು. ಹಣ್ಣು ವ್ಯಾಪಾರದಿಂದ ಸಿಗುವ 50-100 ರೂಪಾಯಿಯಲ್ಲಿ ಶಾಲೆ ಕಟ್ಟುವ ಕನಸು ಕಂಡಿದ್ದೇ ಅದ್ಭುತ. ಇಂಥವರು ಹೊಗಳಿಕೆಗೆ ಕೆಲಸ ಮಾಡುವುದಿಲ್ಲ, ಅತ್ಮತೃಪ್ತಿಗೆ ಮಾಡುತ್ತಾರೆ. ನಾವೂ ಸಮಾಜದಲ್ಲಿ ಬಯಸುವುದನ್ನು ನಮ್ಮಿಂದಲೇ ಆರಂಭಿಸೋಣ ಎಂದರು.
ಇದೇ ವೇಳೆ ಜಿಲ್ಲಾ ಮಟ್ಟದ ಪಥಸಂಚಲನದಲ್ಲಿ ದ್ವಿತೀಯ ಬಹುಮಾನ ಪಡೆದ ಕಾಲೇಜಿನ ನೌಕಾದಳದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ. ರಾಜೇಶ್ವರಿ, ಎನ್ಸಿಸಿ ಪದಾಧಿಕಾರಿಗಳಾದ ಡಾ. ಜಯರಾಜ್, ಡಾ. ಯತೀಶ್ ಕುಮಾರ್, ಎನ್ಎಸ್ಎಸ್ಪದಾಧಿಕಾರಿಗಳಾದ ಸುರೇಶ್ ಮತ್ತು ಡಾ. ಗಾಯತ್ರಿ ಉಪಸ್ಥಿತರಿದ್ದರು. ಮನೀಷಾ ಕಾರ್ಯಕ್ರಮ ನಿರೂಪಿಸಿದರು.