ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಿ: ಜಿಪಂ ಅಧ್ಯಕ್ಷ ದಿನಕರ ಬಾಬು

Spread the love

ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಿ: ಜಿಪಂ ಅಧ್ಯಕ್ಷ ದಿನಕರ ಬಾಬು

ಉಡುಪಿ : “ಉಡುಪಿ ಸೀರೆ”ಗಳು ಉಡುಪಿಯ ಹೆಮ್ಮೆಯ ಸ್ಥಳೀಯ ಉತ್ಪನ್ನವಾಗಿದ್ದು ಪ್ರಧಾನಮಂತ್ರಿ ಅವರು ನೀಡಿದ ಕರೆಯಂತೆ, ಸಾರ್ವಜನಿಕರು ಸ್ವದೇಶಿ ವಸ್ತುಗಳ ಬಳಕೆ, ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಬೆಂಬಲ ನೀಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಅವರು ಮಂಗಳವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದ ಆವರಣದಲ್ಲಿ , ಜಿಲ್ಲಾ ಪಂಚಾಯತ್, ಉಡುಪಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಉಡುಪಿ ಜಿಲ್ಲೆಯ ಕೈಮಗ್ಗ ನೇಕಾರರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ , ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ವೋಕಲ್ ಫಾರ್ ಲೋಕಲ್ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಕೈಮಗ್ಗ ನೇಕಾರರ ಸಹಕಾರ ಸಂಘಗಳ ಕೈಮಗ್ಗ ನೇಕಾರರಿಂದ ಉತ್ಪಾದಿಸಲ್ಪಟ್ಟ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ಹೆಮ್ಮೆಯಾದ ಉಡುಪಿ ಸೀರೆಗಳ ಬಳಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುವುದರ ಮೂಲಕ ಸ್ಥಳೀಯ ಉತ್ಪನ್ನಕ್ಕೆ ಮಾರುಕಟ್ಟೆ ವ್ಯವಸ್ಥೆ ಒದಗಿಸಿ ಅದನ್ನು ಪೋತ್ಸಾಹಿಸಬೇಕಿದೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಉಡುಪಿ ಸೀರೆಯ ಬಳಕೆ ಮಾಡುತ್ತಾರೆ, ಸ್ಥಳೀಯರಾದ ನಾವು ಉಡುಪಿ ಸೀರೆಯನ್ನು ಬಳಕೆ ಮಾಡುವ ಮೂಲಕ ನಮ್ಮದೇ ಸ್ಥಳೀಯ ಉತ್ಪನ್ನಕ್ಕೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ದಿನಕರ ಬಾಬು ಹೇಳಿದರು.

ಉಡುಪಿ ಕೈಮಗ್ಗ ಸೀರೆಗಳು ನಮ್ಮದೇ ನೇಕಾರರ ವಿಶಿಷ್ಟ ಕಲೆಯಾಗಿದ್ದು, ಈ ಕಲೆಯನ್ನು ಪ್ರೋತ್ಸಾಹಿ ಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪಂಚಾಯತ್ನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಸದಸ್ಯರ ವಿಶೇಷ ಆಸಕ್ತಿಯಿಂದ , ಸೀರೆಗಲ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿತ್ತು.

ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ನಿ., ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ನಿ., ಬ್ರಹ್ಮಾವರ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘ ನಿ,. ದ ಸದಸ್ಯರು ಉಡುಪಿ ಸೀರೆಗಳ ಮಾರಾಟದಲ್ಲಿ ಭಾಗವಹಿಸಿದ್ದರು. ರೂ.850 ರಿಂದ 1400 ರ ವರೆಗೆನ ಸೀರೆಗಳು ಪ್ರದರ್ಶನದಲ್ಲಿ ಲಭ್ಯವಿದ್ದು, ಪುರುಷರ ಉಡುಪುಗಳು ಸಹ ಲಭ್ಯವಿವೆ. ಪ್ರಸ್ತುತ ಬೇಡಿಕೆ ಬರುತ್ತಿದ್ದು, ಕಾರ್ಮಿಕರ ಸಮಸ್ಯೆಯಿಂದ ಉತ್ಪಾದನೆ ಕಡಿಮೆಯಿದೆ, ಸ್ಥಳೀಯರಿಂದ ಉತ್ತಮ ಬೆಂಬಲ ದೊರೆಯುತ್ತಿದೆ ಎನ್ನುತ್ತಾರೆ ಮಾರಾಟಗಾರ ಮಾಧವ ಅವರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ , ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಪ್ರೀತಿ ಗೆಹ್ಲೊಟ್ , ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಕೈಮಗ್ಗ & ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು


Spread the love