ಸ್ವಯಂಪ್ರೇರಿತ ಬಂದ್ ಗೆ ಬಿಜೆಪಿಯಿಂದ ತಡೆ: ಕಾಂಗ್ರೆಸ್ ಆರೋಪ
ಉಡುಪಿ: ಕಾಂಗ್ರೆಸ್ ಆಯೋಜಿಸಿದ ಭಾರತ್ ಬಂದ್ ನ್ನು ಬಿಜೆಪಿಗರು ಉದ್ದೇಶಪೂರ್ವಕವಾಗಿ ವಿಫಲಗೊಳಿಸಲು ಷಡ್ಯಂತ್ರವನ್ನು ರೂಪಿಸಿದ್ದು ಜಿಲ್ಲೆಯ ಜನತೆ ಬಂದ್ ಬೆಂಬಲಿಸಿ ಯಶಸ್ವಿಗೊಳಿಸದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಬೆಲೆ ಏರಿಕೆಯಿಂದ ಬೇಸತ್ತು ಉಡುಪಿಯ ಜನತೆ ಭಾರತ್ ಬಂದ್ಗೆ ಈ ಮೊದಲೇ ಸ್ಪಂದಿಸಿದ್ದರು. ಹಾಗಾಗಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳನ್ನು ಬಿಜೆಪಿ ಕಾರ್ಯಕರ್ತರು ಒತ್ತಾಯ ಪೂರ್ವಕವಾಗಿ ತೆರೆಯುವಂತೆ ಮಾಡಿದ್ದೆ ಭಾರತ್ ಬಂದ್ ಪ್ರತಿಭಟನೆಯ ಸಮಯ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಪಕ್ಷ ಎಂದೂ ಕೂಡಾ ಹಿಂಸೆ ಪ್ರಚೋದನೆ ನೀಡುವ ಕೆಲಸ ಮಾಡಿದ ಉದಾಹಣೆ ಇಲ್ಲ. ರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ವಿರುದ್ದ ಭಾರತ್ ಬಂದ್ಗೆ ಕರೆ ನೀಡಿದ್ದು, ಅದರ ಪ್ರಯುಕ್ತ ಜಿಲ್ಲೆಯಲ್ಲೂ ಕೂಡ ನಾಗರೀಕರಿಂದ ಉತ್ತಮವಾದ ಬೆಂಬಲ ವ್ಯಕ್ತವಾಗಿತ್ತು.
ಭಾರತ್ ಬಂದ್ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನವಿ ಮೂಲಕ ಸ್ವಯಂಪ್ರೇರಿತ ಬಂದ್ ಮಾಡುವಂತೆ ವಿನಂತಿಸಿ ಕೊಳ್ಳುತ್ತಿರುವಾಗ ಪೂರ್ವಯೋಜಿತ ಯೋಜನೆಯಂತೆ ಬಿಜೆಪಿ ಕಾರ್ಯಕರ್ತರ ಗುಂಪು ಏಕಾಏಕಿ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಉದ್ದೇಶಪೂರ್ವಕವಾಗಿದೆ. ಬಂದ್ ಅನ್ನು ವಿಫಲಗೊಳಿಸಲು ಪೂರ್ವ ತಯಾರಿಯಾಗಿ ಬಂದ ಬಿಜೆಪಿ ಕಾರ್ಯಕರ್ತರನ್ನು ಪೋಲಿಸರು ಚದುರಿಸುವ ಬದಲು ಜನಪ್ರತಿನಿಧಿಗಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆಯೇ ಏಕಾಏಕಿ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ.
ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಬಿಜೆಪಿ ಪ್ರತಿಭಟನೆ ಹಾಗೂ ಬಂದ್ಗಳಿಗೆ ಕರೆ ನೀಡಿತ್ತು. ಆದರೆ ಕಾಂಗ್ರೆಸ್ ಎಂದೂ ಪೂರ್ವ ತಯಾರಿಯೊಂದಿಗೆ ಬೆನ್ನಟ್ಟಿ ಬಂದು ವಿಫಲಗೊಳಿಸಲು ಪ್ರಯತ್ನಿಸಿಲ್ಲ. ಉದ್ದೇಶಪೂರ್ವಕವಾಗಿ ಬೆನ್ನಟ್ಟಿ ಬಂದು ಬಂದ್ಅನ್ನು ವಿಫಲಗೊಳಿಸುವ ಬಿಜೆಪಿ ನಡೆ ಜಿಲ್ಲೆಯ ಪ್ರತಿಭಟನೆಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಂತಾಗಿದೆ. ಬಿಜೆಪಿ ಮುಖಂಡರು ಬಂದ್ಅನ್ನು ವಿಫಲಗೊಳಿಸಲು ಆರಂಭದಿಂದಲೇ ಷಡ್ಯಂತ್ರವನ್ನು ರೂಪಿಸಿದ್ದರೂ ಜನತೆ ಬಂದನ್ನು ಯಶಸ್ವಿಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಮುಖಂಡರಾದ ದಿನೇಶ್ ಪುತ್ರನ್, ಬಿ. ನರಸಿಂಹ ಮೂರ್ತಿ, ಪ್ರಖ್ಯಾತ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಜನಾರ್ದನ ಭಂಡಾರ್ಕಾರ್, ಶೇಖರ್ ಜಿ. ಕೋಟ್ಯಾನ್, ನಾರಾಯಣ ಕುಂದರ್, ಯತೀಶ್ ಕರ್ಕೇರ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.