ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಡಾ. ಶರತ್ ಕುಮಾರ್ ರಾವ್ ಕರೆ
ಮಂಗಳೂರು : ಭಾರತದಲ್ಲಿ ಪ್ರತಿ ವರ್ಷ ಐದು ಕೋಟಿ ರಕ್ತದ ಯುನಿಟ್ಗಳ ಅಗತ್ಯವಿದ್ದು, ಶೇ. 50 ರಷ್ಟು ಮಾತ್ರ ಲಭ್ಯವಿದೆ. ಆದ್ದರಿಂದ, ದೇಶದಲ್ಲಿ ರಕ್ತದ ತೀವ್ರ್ರ ಕೊರತೆ ಇದ್ದು ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಹಾಗೂ ಪ್ರಾದೇಶಿಕ ರಕ್ತ ಪ್ರಸರಣಾ ಕೇಂದ್ರದ ಡಾ. ಶರತ್ ಕುಮಾರ್ ರಾವ್ ಜಿ ಇವರು ಕರೆ ನೀಡಿದರು.
ಅವರು ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ರಕ್ತದಾನಿಗಳ ಕೂಟ ಆಯೋಜಿಸಿದ್ದು ಜನವರಿ 25 ರಂದು ಆರನೇ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. ರಕ್ತ ದಾನವು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ತಂತ್ರಜ್ಞಾನ ಬೆಳೆದಂತೆ ವೈಜ್ಞಾನಿಕವಾಗಿ ಪರೀಕ್ಷಿಸಿ ಸುರಕ್ಷಿತ ರಕ್ತವನ್ನು ನೀಡಲಾಗುತ್ತಿದೆ. ಆರೋಗ್ಯವಂತ ವ್ಯಕ್ತಿಯೊಬ್ಬರು ತಮ್ಮ ಜೀವಮಾನದಲ್ಲಿ 18 ರಿಂದ 65 ವರ್ಷದೊಳಗೆ 150ಕ್ಕೂ ಹೆಚ್ಚಿನ ಸಲ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ದೇಹಕ್ಕೆ ಅನಗತ್ಯವಾದ ಕೊಲೆಸ್ಟ್ರಾಲ್, ಯುರಿಯ, ಯೂರಿಕ್ ಆಮ್ಲ ಕಡಿಮೆಯಾಗುತ್ತದೆ, ಹಾಗೂ ಹೃದಯಾಘಾತವನ್ನು ತಡೆಯುತ್ತದೆ ಎಂದು ತಿಳಿಸಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪೆÇ್ರ. ಕೆ. ಭೈರಪ್ಪ ಅವರು, ಎಂಸಿಜೆ ವಿಭಾಗದ ಸಂವಹನ ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಈ ರಕ್ತದಾನ ಶಿಬಿರ ಒಂದು ಅತ್ಯುತ್ತಮ ಕಾರ್ಯಕ್ರಮ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಮಾಜಕ್ಕೆ ಹತ್ತಿರವಾಗಿರುವುದರಿಂದ ಈ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ ಎಂದರು.
ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಕ್ತದಾನಿಗಳ ಸಂಘದ ಸಂಯೋಜಕರಾದ ಪ್ರೋ. ಜಿ.ಪಿ. ಶಿವರಾಂ ಅವರು, 2012 ರಿಂದ ಇದುವರೆಗೆ ಆರು ಶಿಬಿರಗಳನ್ನು ಮಾಡಿದ್ದು, ಇದನ್ನು ನನ್ನ ನಿವೃತ್ತಿಯ ನಂತರವೂ ವಿಭಾಗದ ವಿದ್ಯಾರ್ಥಿಗಳು, ಇತರರು ಮುಂದುವರೆಸಲು ಕರೆ ನೀಡಿದರು. ರಕ್ತದಾನ ನೀಡುವಿಕೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ ಸ್ವಯಂ ಪ್ರೇರಿತರಾಗಿ ಹಾಗೂ ಸಮಾಜಮುಖಿಯಾಗಿ ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕೆಂದು ಡಾ. ಶಿವರಾಂ ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತು ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಬ್ಲಡ್ಬ್ಯಾಂಕ್ ಮತ್ತು ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ನಡೆದ ಈ ರಕ್ತದಾನ ಶಿಬಿರದಲ್ಲಿ ಸುಮಾರು 90 ಮಂದಿ ಪಾಲ್ಗೊಂಡಿದ್ದರು.
ಎಂಸಿಜೆ ವಿಭಾಗದ ಅಧ್ಯಕ್ಷೆ ಪ್ರೋ. ವಹೀದಾ ಸುಲ್ತಾನ, ಬ್ಲಡ್ ಬ್ಯಾಂಕ್ ವೈದ್ಯರುಗಳು ಹಾಗೂ ತಾಂತ್ರಿಕ ಸಿಬ್ಬಂದಿ ಶಿಬಿರದಲ್ಲಿ ಭಾಗವಹಿಸಿದ್ದರು. ಸಂವಹನ ಕೂಟದ ಉಪಾಧ್ಯಕ್ಷ ಜಯರಾಜ್ ವಂದಿಸಿದರು.