ಸ್ವರ್ಗಕ್ಕೆ ಹೋಗಬಯಸುವವರು ಸಂಸ್ಕೃತ ಭಾಷೆಯನ್ನು ಕಲಿಯಬೇಕು – ಪುತ್ತಿಗೆ ಸ್ವಾಮೀಜಿ
ಉಡುಪಿ: ಸಂಸ್ಕೃತ ಭಾಷೆ ಗೊತ್ತಿಲ್ಲದಿದ್ದರೆ ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ. ಸ್ವರ್ಗಕ್ಕೆ ಹೋಗಬಯಸುವವರು ಎಲ್ಲರೂ ಸಂಸ್ಕೃತ ಭಾಷೆಯನ್ನು ಕಲಿಯಬೇಕು. ಇದು ಪವಿತ್ರ, ಪಾವನ ಮತ್ತು ಶ್ರೇಷ್ಠವಾಗಿರುವ ಭಾಷೆ ಎಂದು ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಶ್ರೀಪುತ್ತಿಗೆ ಮಠ, ಶ್ರೀಕೃಷ್ಣ ಮಠದ ವತಿಯಿಂದ ರವಿವಾರ ರಾಜಾಂಗಣದಲ್ಲಿ ನಡೆದ ಶ್ರೀಕೃಷ್ಣ ಮಾಸೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಕೃತ ಸರಳ, ಸುಂದರ ಮತ್ತು ಸುಲಭವಾದ ಭಾಷೆಯಾಗಿದ್ದು, ಇದು ವಿಶ್ವಭಾಷೆ, ದೇವಭಾಷೆಯಾಗಿದೆ. ಎಲ್ಲಾ ಭಾಷೆಗಳ ಮೂಲ ಮತ್ತು ಜನನಿ ಸಂಸ್ಕೃತವಾಗಿದೆ. ಇದು ಕೇವಲ ಭಾರತೀಯ ಭಾಷೆಗಳ ಮೂಲವಲ್ಲದೇ ಆಂಗ್ಲಭಾಷೆಯ ಮೂಲವೂ ಆಗಿದೆ ಎಂದು ಅವರು ತಿಳಿಸಿದರು.
ಕೇರಳ ರಾಜ್ಯಪಾಲ ಆರಿಫ್ ಖಾನ್ ಭಾಗವಹಿಸಿ ಮಾತನಾಡಿ, ದೇವರಿಗೆ ಯಾವ ಭಾಷೆಯಲ್ಲಿ ಪ್ರಾರ್ಥನೆ ಮಾಡುತ್ತೇವೆ ಎನ್ನುವುದಕ್ಕಿಂತ ಯಾವ ಭಾವದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ವೈವಿಧ್ಯ ನಮ್ಮ ಪ್ರಕೃತಿಯ ನಿಯಮ. ಈ ವೈವಿಧ್ಯ ಇರುವುದರಿಂದಲೇ ನಾವೆಲ್ಲರೂ ಸುಖಕರವಾಗಿರಲು ಸಾಧ್ಯವಾಗಿರುವುದು ಎಂದು ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀಸುಶ್ರೀಂದ್ರ ತೀರ್ಥರು ಆಶೀರ್ವಚನ ನೀಡಿದರು.
ಶಾಸಕರಾದ ಯಶಪಾಲ್ ಎ.ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು.
ಮಠದ ರಘೋತ್ತಮ್ ಆಚಾರ್ಯ ಸ್ವಾಗತಿಸಿದರು. ಡಾ.ಬಿ. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.