ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ – ಸೂಕ್ತ ಕಾನೂನು ಕ್ರಮಕ್ಕೆ ಮಾಜಿ ಸಿಎಮ್ ಸಿದ್ದರಾಮಯ್ಯ ಒತ್ತಾಯ
ಉಡುಪಿ: ಉಡುಪಿ ಜಿಲ್ಲೆಯ ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಮರಳು ಕಳ್ಳ ಸಾಗಣೆಯಲ್ಲಿ ಆಡಳಿತ ಪಕ್ಷದ ನಾಯಕರು ಭಾಗಿಯಾಗಿರುವ ಆರೋಪವಿದ್ದು ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಸ್ವರ್ಣಾ ನದಿಯ ಮರಳು ಕಳ್ಳಸಾಗಣೆ ವಿರುದ್ದ ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಅವರಿಗೆ ತಕ್ಷಣ ಪೊಲೀಸ್ ಭದ್ರತೆ ಒದಗಿಸಬೇಕು. ಜೀವ ಭಯ ಹಾಕುತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸ್ವರ್ಣಾ ನದಿ ಪಾತ್ರದಲ್ಲಿ ಮರಳು ದಂಧೆ ನಡೆಯುತ್ತಿದ್ದು ಅಕ್ರಮ ಮರಳು ಸಾಗಾಟಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕುಮ್ಮಕ್ಕು ಇದ್ದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಟ್ವೀಟ್ ಮಾಡಿದ್ದರು.
ಉಡುಪಿಯ ಸ್ವರ್ಣ ನದಿಯಲ್ಲಿ ಹೂಳೆತ್ತುವ ಹೆಸರಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಲೋಕಾಯುಕ್ತಕ್ಕೆ ಸಾರ್ವಜನಿಕ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಮೇ 16ರಂದು ದಾಳಿ ನಡೆಸಿದ ಲೋಕಾ ಯುಕ್ತ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಗಳು, ಟಿಪ್ಪರ್, ಹಿಟಾಚಿ ಮತ್ತು ಜೆಸಿಬಿ ಲಾರಿ ಸಹಿತ ಮರಳನ್ನು ವಶಪಡಿಸಿ ಕೊಂಡಿದ್ದರು. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿ ಟೆಂಡರುದಾರ ಸಹಿತ ಮೂವರ ವಿರುದ್ಧ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ನ್ಯಾಯಾಲಯದಲ್ಲಿ ದೂರು ಕೂಡ ದಾಖಲಿಸಿದೆ.