ಸ್ವರ್ಣಾ ನದಿಯಲ್ಲಿ ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದವರ ವಿರುದ್ದ ಕ್ರಮಕ್ಕೆ ಉಡುಪಿ ಬ್ಲಾಕ್ ಕಾಂಗ್ರೆಸ್ ಒತ್ತಾಯ
ಉಡುಪಿ : ಹಿರಿಯಡ್ಕ ಸಮೀಪದ ಸ್ವರ್ಣಾ ನದಿಯಿಂದ ಬಜೆ ಅಣೆಕಟ್ಟಿನ ಪ್ರದೇಶದವರೆಗೆ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸ್ವರ್ಣಾ ನದಿಯಿಂದ ಹೂಳೆತ್ತುವ ಬಗ್ಗೆ ಮಂಗಳೂರಿನ ಯೋಜಕ್ ಸಂಸ್ಥೆಗೆ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಲಾಗಿದ್ದು, ಟೆಂಡರ್ ಷರತ್ತಿನಂತೆ ಹೂಳೆತ್ತುವ ಕಾಮಗಾರಿಯನ್ನು ನಿರ್ವಹಿಸುವ ಬಗ್ಗೆ ಎಡಿಸಿ ಅಧ್ಯಕ್ಷತೆಯಲ್ಲಿ ಸಮಿತಿ ಯನ್ನು ರಚಿಸಲಾಗಿದೆ. ಆದರೆ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಇತರ ಅಧಿಕಾರಿ ಗಳು, ಕೆಲಜನಪ್ರತಿನಿಧಿಗಳು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಶಾಮಿಲಾಗಿ ಬಜೆ ಅಣೆಕಟ್ಟಿನಿಂದ ಮಾಣೆಯವರೆಗೆ ಹಾಗೂ ಮಾಣೆಯಿಂದ ಶೀರೂರಿನ ವರೆಗೆ ಹೂಳೆತ್ತುವ ನೆಪದಲ್ಲಿ ಮರಳನ್ನು ಕಳ್ಳತನ ಮಾಡಿ ಅಕ್ರಮ ಸಾಗಾಟ ಮಾಡಿದ್ದಾರೆ ಎಂದು ದೂರಿದರು.
ಲಾಕ್ಡೌನ್ ದುರ್ಲಾಭ ಪಡೆದು ಅಕ್ರಮ ಮರಳುಗಾರಿಕೆ ರಾಜಾರೋಷ ವಾಗಿ ನಡೆಯುತ್ತಿದೆ. ಸಮಿತಿಯ ಸದಸ್ಯರು ತಮ್ಮ ಕರ್ತವ್ಯ ನಿರ್ವಹಣೆ ಯಲ್ಲಿ ಸಂಪೂರ್ಣ ವಿಫಲರಾಗಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಅವರುಗಳೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರ ವಿರುದ್ಧ ಜಿಲ್ಲಾಧಿಕಾರಿ ಅಥವಾ ಇತರ ಯಾವುದೇ ಅಧಿಕಾರಿ ಗಳು ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಆದುದರಿಂದ ಈ ಅಕ್ರಮ ಮರಳುಗಾರಿಕೆಯ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಗುತ್ತಿಗೆದಾರರು ಮತ್ತು ಅವರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಇತರ ಪ್ರಭಾವಿ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಮತ್ತು ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಈಗಾಗಲೇ ಲೋಕಾಯುಕ್ತ ಮತ್ತು ಎಸಿಬಿಗೆ ದೂರು ಸಲ್ಲಿಸಲಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ನಗರಸಭಾ ಸದಸ್ಯ ರಮೇಶ್ ಕಾಂಚನ್ ಉಡುಪಿ ಸ್ವರ್ಣ ನದಿಯಿಂದ ಕೋಟ್ಯಾಂತರ ಮೌಲ್ಯದ ಮರಳು ದೋಚಲಾಗಿದ್ದು ಅಪರ ಜಿಲ್ಲಾಧಿಕಾರಿಯವರನ್ನೊಳಗೊಂಡ 14 ಜನರ ಸಮಿತಿ ಅಕ್ರಮ ಮಾಡಿದೆ. ಕಪ್ಪು ಪಟ್ಟಿಗೆ ಸೇರಿದ ಯೋಜಕ ಕಂಪನಿಗೆ ಟೆಂಡರ್ ನೀಡಲಾಗಿದ್ದು, ಡ್ಯಾಂ ನ ಹೂಳು ತೆಗೆಯುವ ಎಲ್ಲಾ ನಿಯಮ ಗಾಳಿಗೆ ತೂರಲಾಗಿದೆ. ಹಿರಿಯಡ್ಕ ವ್ಯಾಪ್ತಿಯ ಕಾಡುಗಳಲ್ಲಿ ಮರಳನ್ನು ಅಕ್ರಮ ದಾಸ್ತಾನು ಮಾಡಲಾಗಿದೆ. ಇಷ್ಟು ದೊಡ್ಡ ಬಹುಕೋಟಿ ಅಕ್ರಮದ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಕೂಡ ಯಾವುದೇ ಕ್ರಮ ಆಗಿಲ್ಲ ಈ ವಿಚಾರದಲ್ಲಿ ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್ ಕೂಡಲೇ ಉತ್ತರಿಸಬೇಕು. ಅಕ್ರಮದಲ್ಲಿ ಶಾಮೀಲಾದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಎಸಿಬಿ, ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ ಎಂದರು
ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ವಿಜಯ ಪೂಜಾರಿ, ಉಡುಪಿ ವಿಧಾನಸಭಾಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜನಾರ್ಧನ್ ಭಂಡಾರ್ಕರ್ ಉಪಸ್ಥಿತರಿದ್ದರು.