Home Mangalorean News Kannada News ಸ್ವಹಿತಕ್ಕಾಗಿ ಉತ್ತಮ ಅಧಿಕಾರಿಗಳನ್ನ ವರ್ಗಾಯಿಸದಂತೆ ಕೋರಿ ಮುಖ್ಯಮಂತ್ರಿಗೆ ಪತ್ರ – ಯು.ಟಿ.ಖಾದರ್

ಸ್ವಹಿತಕ್ಕಾಗಿ ಉತ್ತಮ ಅಧಿಕಾರಿಗಳನ್ನ ವರ್ಗಾಯಿಸದಂತೆ ಕೋರಿ ಮುಖ್ಯಮಂತ್ರಿಗೆ ಪತ್ರ – ಯು.ಟಿ.ಖಾದರ್

Spread the love

ಸ್ವಹಿತಕ್ಕಾಗಿ ಉತ್ತಮ ಅಧಿಕಾರಿಗಳನ್ನ ವರ್ಗಾಯಿಸದಂತೆ ಕೋರಿ ಮುಖ್ಯಮಂತ್ರಿಗೆ ಪತ್ರ – ಯು.ಟಿ.ಖಾದರ್

ಮಂಗಳೂರು: ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕನಿಷ್ಠ ಒಂದು ವರ್ಷವರೆಗೆ ಯಾವುದೇ ವರ್ಗಾವಣೆ ಮಾಡಿರಲಿಲ್ಲ. ಆದರೆ ಈಗ ಸಚಿವ ಸಂಪುಟ ವಿಸ್ತರಣೆಯಾಗದೆ, ಗೃಹ ಸಚಿವರ ನೇಮಕವಾಗುವ ಮೊದಲೇ ತರಾತುರಿಯಲ್ಲಿ ಉತ್ತಮ ಅಧಿಕಾರಿಗಳನ್ನೂ ಮುಖ್ಯಮಂತ್ರಿಗಳು ವರ್ಗಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ವರ್ಗಾಯಿಸದಂತೆ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಅವರುಮಂಗಳೂರು ನಗರ ಪೊಲೀಸ್ ಕಮಿಷನರ್‌ ಅವರನ್ನು ವರ್ಗಾಯಿಸಲಾಗಿದೆ. ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಾಮಾಣಿಕ ಅಧಿಕಾರಿಗಳಾಗಿದ್ದಾರೆ. ಸ್ವಹಿತಕ್ಕಾಗಿ ಅಧಿಕಾರಿಗಳನ್ನು ವರ್ಗಾಯಿಸದೇ ಕರ್ತವ್ಯದಲ್ಲಿ ಮುಂದುವರಿಯಲು ಅವಕಾಶ ಮಾಡಬೇಕು ಎಂದು ಅವರು ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿ ಉಂಟಾಗಿದೆ. ಸಚಿವರಿಲ್ಲದೆ ಅಲ್ಲಿನ ಜನತೆಯ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಸದನದಲ್ಲಿ ವಿಶ್ವಾಸಮತ ಯಾಚನೆಗೆ ತರಾತುರಿ ತೋರಿದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ವಾರ ಕಳೆದರೂ ಸಂಪುಟ ವಿಸ್ತರಣೆ ಬಗ್ಗೆ ಮೌನವಾಗಿದ್ದಾರೆ ಎಂದು ಟೀಕಿಸಿದರು.

ಮಳೆಯಿಂದ ಜಲಾಶಯ ರಕ್ಷಣೆಗಾಗಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹೆಚ್ಚುವರಿ ನೀರನ್ನು ಬಿಡಲಾಗುತ್ತಿದೆ. ಇದರಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹದ ಪರಿಸ್ಥಿತಿ ತಲೆದೋರಿದೆ. ಆದರೆ ಅಲ್ಲಿನವರ ಕಷ್ಟವನ್ನು ವಿಚಾರಿಸುವವರೇ ಇಲ್ಲದಾಗಿದೆ ಎಂದು ಖಾದರ್ ಆರೋಪಿಸಿದರು.

ಜನಸಾಮಾನ್ಯರ ಸುರಕ್ಷತೆಯ ದೃಷ್ಟಿಯಿಂದ ಉಳ್ಳಾಲದ ನೇತ್ರಾವತಿ ಸೇತುವೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನದಿಗಳ ಸೇತುವೆಗಳ ಸುತ್ತ ರಕ್ಷಣಾತ್ಮಕ ಪಾರದರ್ಶಕ ತಡೆಗೋಡೆ ಅಳವಡಿಸುವಂತೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವರಿಗೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು.

ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಜಿಲ್ಲೆಯ ಅನೇಕ ಸೇತುವೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡುತ್ತಿದ್ದು, ಅವುಗಳಿಗೆ ಸಮರ್ಪಕ ರಕ್ಷಣಾ ವ್ಯವಸ್ಥೆಯಿಲ್ಲ. ಹಾಗಾಗಿ ಇಲ್ಲಿ ನದಿ, ಸಮುದ್ರಕ್ಕೆ ಹಾರಿ ಆತ್ಮಹತ್ಯೆಯಂತಹ ಘಟನೆಗಳು ನಡೆಯುತ್ತಿವೆ ಎಂದರು.

ಈ ಸೇತುವೆಗಳ ಸುತ್ತ ರಕ್ಷಣಾತ್ಮಕ ನೆಲೆಯಲ್ಲಿ ಫೈಬರ್‌ನ ಪಾರದರ್ಶಕ ಗ್ಲಾಸ್‌ಗಳನ್ನು ಅಳವಡಿಸಲು ಮುಂದಾಗಬೇಕು. ಅಲ್ಲದೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚನೆ ನೀಡಬೇಕು. ಪಾರದರ್ಶಕ ತಡೆಗೋಡೆಯಿಂದ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಸೇತುವೆಯ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಸಾಧ್ಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಿರುವುದಾಗಿ ಹೇಳಿದರು.


Spread the love

Exit mobile version