ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ಥಬ್ದಚಿತ್ರಗಳ ಮೆರವಣಿಗೆ- ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ಉಡುಪಿ: ಆಗಸ್ಟ್ 15 ರಂದು ಉಡುಪಿಯ ಬೀಡಿನಗುಡ್ಡೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ, ಜನಜಾಗೃತಿ ಮೂಡಿಸುವ ವಿವಿಧ ಸ್ಥಬ್ದಚಿತ್ರಗಳನ್ನು ತಯಾರಿಸಿ, ನಗರದ ವಿವಿದೆಡೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು.
ಅವರು ಸೋಮವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಸ್ವಾತಂತ್ರ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ, ಮಳೆ ನೀರು ಕೊಯ್ಲು ಕುರಿತು ಮಹತ್ವ ಸಾರುವ ಸ್ಥಬ್ದಚಿತ್ರವನ್ನು ಕೃಷಿ ಇಲಾಖೆಯ ಮೂಲಕ, ತಾರಸಿ ತೋಟ ನಿರ್ಮಾಣ ಕುರಿತಂತೆ ತೋಟಗಾರಿಕಾ ಇಲಾಖೆಯ ಮೂಲಕ, ರಸ್ತೆ ಸುರಕ್ಷತೆ ಕುರಿತಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಮೂಲಕ, ಮಲೇರಿಯಾ ಮತ್ತು ಡೆಂಗ್ಯೂ ಕುರಿತು ಎಚ್ಚರಿಕೆ ನೀಡುವ ಕುರಿತು ಆರೋಗ್ಯ ಇಲಾಖೆ ಮೂಲಕ, ಜಿಲ್ಲೆಯ ಪ್ರವಾಸೋದ್ಯಮ ಕುರಿತು ಪ್ರವಾಸೋದ್ಯಮ ಇಲಾಖೆ ಮೂಲಕ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತಂತೆ ಅರಣ್ಯ ಇಲಾಖೆಯ ಮೂಲಕ ಆಕರ್ಷಕ ಸ್ಥಬ್ಧಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ, ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಮತ್ತು ಈ ಎಲ್ಲಾ ಸ್ಥಬ್ಧಚಿತ್ರಗಳನ್ನು ಬೀಡಿನಗುಡ್ಡೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಪೆರೇಡ್ನಲ್ಲಿ ಮೆರವಣಿಗೆ ಮಾಡಿ, ನಂತರ ನಗರದ ವಿವಿಧ ವಾರ್ಡ್ಗಳನ್ನು ಸಂಚರಿಸುವ ಕುರಿತಂತೆ, ನಗರಸಭೆಯ ಪೌರಾಯುಕ್ತರು ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಸಿ ಸೂಚಿಸಿದರು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ, ಈ ಬಾರಿಯ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವಂತೆ ಮತ್ತು ರಸ್ತೆ ಸುರಕ್ಷತೆ ಕುರಿತಂತೆ ಶಾಲೆಗಳಲ್ಲಿ ಚಿತ್ರಕಲೆ ಮೂಲಕ ಅರಿವು ಮೂಡಿಸಿರುವ ಅತ್ಯುತ್ತಮ ಚಿತ್ರ ರಚಿಸಿರುವ ಶಾಲೆಗಳ ಮುಖ್ಯೋಪಾಧ್ಯಾಯರು, ಚಿತ್ರಕಲೆ ಬಿಡಿಸಿದ ಶಿಕ್ಷಕರು ಮತ್ತು ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಡಿಸಿ ಹೇಳಿದರು.
ಸ್ವಾತಂತ್ರ್ಯೋತ್ಸವದ ಪಥ ಸಂಚಲನದಲ್ಲಿ ಈ ಬಾರಿ ಇತರೆ ತಂಡಗಳ ಜೊತೆಗೆ ಸ್ಟೂಡೆಂಟ್ ಕೆಡೆಟ್ ತಂಡ ಮತ್ತು ವಸತಿ ಶಾಲೆಗಳ ವಿದ್ಯಾರ್ಥಿಗಳನ್ನು ಒಳಗೊಂಡ ತಂಡವನ್ನು ಸೇರ್ಪಡೆಗೊಳಿಸುವಂತೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನೀಡುವ ತಂಡದಲ್ಲಿ ರಸ್ತೆ ಸುರಕ್ಷತೆ ಕುರಿತು ಯಕ್ಷಗಾನ ನೀಡುವ ತಂಡವನ್ನು ಸೇರ್ಪಡೆ ಮಾಡುವಂತೆ ತಿಳಿಸಿದ ಹೆಪ್ಸಿಬಾ ರಾಣಿ, ಪಥ ಸಂಚಲನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮತ್ತು ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ಸೌಲಭ್ಯ ಒದಗಿಸುವಂತೆ ಆರ್.ಟಿ.ಓ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಾತಂತ್ರ್ಯೋತ್ಸವ ಆಚರಣೆ ಕುರಿತಂತೆ ವಿವಿಧ ಸಮಿತಿಗಳನ್ನು ರಚಿಸಿದ ಜಿಲ್ಲಾಧಿಕಾರಿ, ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಮತ್ತು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗುವಂತೆ ಹಾಗೂ ಸಿಬ್ಬಂದಿಗಳ ಹಾಜರಾತಿಯನ್ನು ಪಡೆಯುವಂತೆ ಸೂಚಿಸಿದರು, ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯ ಪ್ರಾರಂಭದಲ್ಲಿ, ಇತ್ತೀಚೆಗೆ ನಿಧನರಾದ ಕೆ.ಎಂ. ಉಡುಪ ಮತ್ತು ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಗೌರವಾರ್ಥ 1 ನಿಮಿಷದ ಮೌನ ಸಲ್ಲಿಸಲಾಯಿತು.