ಹಂಚಿ ಬಾಳುವುದೇ ನಿಜವಾದ ಕ್ರಿಸ್ಮಸ್ – ವಂ|ಡೆನಿಸ್ ಡೆಸಾ

Spread the love

ಹಂಚಿ ಬಾಳುವುದೇ ನಿಜವಾದ ಕ್ರಿಸ್ಮಸ್ – ವಂ|ಡೆನಿಸ್ ಡೆಸಾ

ಮಲ್ಪೆ: ಪರಸ್ಪರ ಸಂತೋಷವನ್ನು ಹಂಚಿ ಬಾಳುವುದೇ ಕ್ರಿಸ್ಮಸ್ ಹಬ್ಬದ ನಿಜವಾದ ಅರ್ಥವಾಗಿದೆ. ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಹೇಳಿದರು.

ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಅಧ್ಯಕ್ಷರಾದ ರಮೇಶ್ ತಿಂಗಳಾಯ ಮಾತನಾಡಿ ಎಲ್ಲಾ ಧರ್ಮಗಳ ಆಚರಣೆಯಲ್ಲಿ ಸಾಮ್ಯತೆಗಳಿದ್ದು ಪ್ರತಿಯೊಬ್ಬರು ತಮ್ಮ ಧರ್ಮದ ನಂಬಿಕೆಯ ಮೇಲೆ ಪ್ರಾರ್ಥಿಸುವಾಗ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಮಾಡು ಎಂದು ಪ್ರಾರ್ಥಿಸುತ್ತಾರೆ. ನಮ್ಮ ನೆರೆಯವರಿಗೆ ಗೌರವಿಸಿ ನಡೆದಾಗ ಸೌಹಾರ್ದ ಸಮಾಜ ನಿರ್ಮಾಣಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.

ಕಾರ್ಯಮದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಲ್ಪೆ ನೆರ್ಗಿಯ ಕೃಷ್ಣಪ್ಪ ಹಾಗೂ ಯಶೋಧ ದಂಪತಿಯ ಪುತ್ರಿ ಶ್ರುತಿ ಅವರಿಗೆ ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ವತಿಯಿಂದ ರೂ 25000 ಧನ ಸಹಾಯವನ್ನು ಹಸ್ತಾಂತರಿಸುವ ಮೂಲಕ ಕ್ರಿಸ್ಮಸ್ ಆಚರಣೆ ಸಂದರ್ಭದಲ್ಲಿ ಮಾದರಿ ಕಾರ್ಯ ನಡೆಸಿದರು.

ಅವರು ಶುಕ್ರವಾರ ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಇದರ ಆಶ್ರಯದಲ್ಲಿ ಮಲ್ಪೆ ಸಿಎಸ್ ಐ ಚರ್ಚಿನಲ್ಲಿ ಆಯೋಜಿಸಿದ್ದ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಪರಸ್ಪರ ಶುಭಾಶಯಗಳನ್ನು, ಸಿಹಿತಿಂಡಿಗಳನ್ನು ಹಂಚಿಕೊಂಡರೆ ಸಾಲದ ಪರಸ್ಪರ ಸಹಬಾಳ್ವೆಯ ಜೀವನವನ್ನು ಬಾಳುವುದರೊಂದಿಗೆ ಅದನ್ನು ಪ್ರತಿಯೊಬ್ಬರು ಜೀವನದಲ್ಲಿ ಅನುಕರಣೆ ಮಾಡಿದಾಗ ಮಾತ್ರ ಹಬ್ಬದ ಆಚರಣೆ ಸಾರ್ಥಕತೆ ಪಡೆಯುತ್ತದೆ. ಯೇಸು ಸ್ವಾಮಿ ನಮ್ಮ ನೆರೆಯವರ ಹೃದಯದಲ್ಲಿ ಜನಿಸಿದಾಗ ಹಬ್ಬಕ್ಕೆ ನಿಜವಾದ ಅರ್ಥ ನೀಡಿದಂತಾಗುತ್ತದೆ. ಪ್ರತಿಯೊಂದು ಧರ್ಮಗಳು ತನ್ನ ಅನುಯಾಯಿಗಳಿಗೆ ನೀಡುವ ಸಂದೇಶ ನಿನ್ನ ನೆರೆಯವರಿಗೆ ಒಳಿತನ್ನು ಮಾಡು. ಪ್ರತಿಯೊಂದು ಧರ್ಮವನ್ನು, ಪ್ರೀತಿಸಿ ಗೌರವಿಸಿ ಬಾಳುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಸೌಹಾರ್ಧ ಸಮಾಜವನ್ನು ಕಟ್ಟಲು ಕೈ ಜೋಡಿಸಬೇಕು. ಎಂದರು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಿಎಸ್ ಐ, ಯುಬಿಎಂ ಚರ್ಚ್ ಮಲ್ಪೆ, ತೊಟ್ಟಂ ಸಂತ ಅನ್ನಮ್ಮ ಚರ್ಚಿನ ವತಿಯಿಂದ ಕ್ರಿಸ್ಮಸ್ ಸಂಬಂಧಿತ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

ವೇದಿಕೆಯಲ್ಲಿ ಯುಬಿಎಂ ಚರ್ಚ್ ಮಲ್ಪೆ ಸಭಾ ಪಾಲಕರಾದ ಪಾಸ್ಟರ್ ಕುಮಾರ್ ಸಾಲಿನ್ಸ್, ಸಮಿತಿಯ ಪದಾಧಿಕಾರಿಗಳಾದ ವನಿತಾ ಫೆರ್ನಾಂಡಿಸ್, ಶಬೀರ್, ಸೀರಾಝ್, ತೊಟ್ಟಂ ಸಂತ ಅನ್ನಮ್ಮಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಸಿಎಸ್ ಐ ಚರ್ಚ್ ಮಲ್ಪೆ ಸಭಾಪಾಲಕರಾದ ಪಾಸ್ಟರ್ ಎಡ್ವಿನ್ ಜೋಸೇಫ್ ಸ್ವಾಗತಿಸಿ ಗಾಡ್ವಿನ್ ವಂದಿಸಿದರು. ಗ್ಲೋರಿಯಾ ಕಾರ್ಯಕ್ರಮ ನಿರೂಪಿಸಿದರು.


Spread the love