ಹಂದಿ ಬೇಟೆಗಿಟ್ಟ ವಿದ್ಯುತ್ ತಂತಿ ತುಳಿದು ಮಹಿಳೆ ಮೃತ್ಯು; ಸಾಕ್ಷ್ಯ ನಾಶ ಮಾಡಿದ ಮೂವರ ಬಂಧನ
ಕಾರ್ಕಳ : ಹಂದಿ ಬೇಟೆಗೆಂದು ಹಾಕಿದ್ದ ವಿದ್ಯುತ್ ತಂತಿಯನ್ನು ತುಳಿದು ಮೃತಪಟ್ಟ ಮಹಿಳೆಯೊಬ್ಬರ ಮೃತದೇಹವನ್ನು ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಕಾಡಿನಲ್ಲಿ ಎಸೆದು ಇಡೀ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಮೂವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಪೊಸ್ರಾಲ್ ನಿವಾಸಿ ಕಾಂತಪ್ಪಪೂಜಾರಿ ಎಂಬವರ ಪತ್ನಿ ಗಿರಿಜಾ ಪೂಜಾರ್ತಿ (50) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳನ್ನು ಕಡಂದಲೆಯ ಜಾನ್ (57), ಸಚ್ಚರಿಪೇಟೆಯ ಸುನೀಲ್ (30) ಹಾಗೂ ಮುಂಡ್ಕೂರಿನ ಪದ್ಮನಾಭ (42) ಎಂದು ಗುರುತಿಸಲಾಗಿದೆ.
ಮುಂಡ್ಕೂರು ಗ್ರಾಮದ ರಾಮ್ ರೆಸ್ಟೋರೆಂಟ್ ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದ ಗಿರಿಜಾ ಪೂಜಾರ್ತಿ ಸೆ.8ರಂದು ಸಂಜೆ 7:30ರ ಸುಮಾರಿಗೆ ಪಕ್ಕದ ಮನೆಗೆ ಎಲೆ ಅಡಿಕೆ ತಿಂದು ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಅಲ್ಲಿಂದ ಅವರು ಅಲ್ಲೇ ಸಮೀಪದ ತನ್ನ ತಮ್ಮನ ಮನೆಗೆ ತೆರಳಿದ್ದರು.
ಕುಡಿತದ ಚಟ ಹೊಂದಿದ್ದ ಇವರು ದಾರಿ ಮಧ್ಯೆ ಮೂವರು ಆರೋಪಿಗಳು ಹಂದಿ ಬೇಟೆಗೆ ಹಾಕಿದ್ದ ವಿದ್ಯುತ್ ತಂತಿಯನ್ನು ತುಳಿದು ಮೃತಪಟ್ಟರೆನ್ನಲಾಗಿದೆ.
ಇದರಿಂದ ಗಾಬರಿಗೊಂಡ ಈ ಮೂವರು ಆರೋಪಿಗಳು ಸಾಕ್ಷನಾಶ ಮಾಡುವ ಉದ್ದೇಶದಿಂದ ಮೃತದೇಹವನ್ನು ಕಡಂದಲೆಯ ಜಾನ್ ಮನೆ ಸಮೀಪದ ಬಾವಿಗೆ ಎಸೆದಿದ್ದರೆನ್ನಲಾಗಿದೆ. ನಂತರ ಎರಡು ದಿನಗಳ ಬಳಿಕ ಆ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿ ಟರ್ಪಾಲಿನಲ್ಲಿ ಸುತ್ತಿಕಟ್ಟಿ ತಂದು ಕಾಂತಾವರ ಗ್ರಾಮದ ಕಂಡಿಗ ಎಂಬಲ್ಲಿರುವ ಕಾಡುದಾರಿಯಲ್ಲಿ ಎಸೆದು ಪರಾರಿಯಾಗಿದ್ದರು.
ಮನೆಗೆ ಬಾರದ ಪತ್ನಿ ನಾಪತ್ತೆಯಾಗಿರುವುದಾಗಿ ಕಾಂತಪ್ಪ ಪೂಜಾರಿ ಸೆ.14 ರಂದು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆ.17ರಂದು ಸಂಜೆ ಈ ದಾರಿಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಸುಧೀರ್ ಎಂಬವರು ಕೆಟ್ಟ ವಾಸನೆಯ ಹಿನ್ನೆಲೆಯಲ್ಲಿ ಪರಿಶೀಲಿಸಿ ದಾಗ ಹಾಡಿಯಲ್ಲಿ ಗಿರಿಜಾ ಪೂಜಾರ್ತಿಯ ಮೃತದೇ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಇದರಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವ ಶಂಕೆ ಇದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ಹಾಗೂ ಸಾಕ್ಷ ನಾಶ ಪ್ರಕರಣಗಳು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಸೆ.19ರಂದು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.