ಹಕ್ಕೊತ್ತಾಯಕ್ಕಾಗಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಂದ ಧರಣಿ ಸತ್ಯಾಗ್ರಹ
ಉಡುಪಿ: ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳ್ಳಬೇಕು ಮತ್ತು ಗುತ್ತಿಗೆ ನೌಕರರಿಗೆ ಸಮಾನ ವೇತನ ಹಾಗೂ ಸೇವಾ ಭದ್ರತೆ ನೀಡಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಕ್ಕಾಗಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೇದಿಕೆ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಜರುಗಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳ್ಳಬೇಕು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸಮಾನ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲರಿಗೂ ಆರೋಗ್ಯ ಎಂಬ ಉದ್ದೇಶದಿಂದ 2005ರಲ್ಲಿ ದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಸ್ಥಾಪನೆಯಾಗಿದೆ. ಇದರಡಿ ಹಲವು ರಾಷ್ಟ್ರೀಯ ಆರೋಗ್ಯಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಈ ಮಹತ್ತರ ಉದ್ದೇಶವನ್ನು ಸಾಧಿಸಲು ಸಾರ್ವಜನಿಕ ಆರೋಗ್ಯ ಇಲಾಖೆಯನ್ನು ಮತ್ತಷ್ಟು ಸಶಕ್ತಗೊಳಿಸುವ ಸಲುವಾಗಿ ನಿಷ್ಠೆಯಿಂದ ಕೆಲಸ ಮಾಡಲು ಆರೋಗ್ಯ ಇಲಾಖೆಯಡಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರೆಲ್ಲರೂ ಪಣ ತೊಟ್ಟಿದ್ದೇವೆ ಎಂದು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರ ಸಂಖ್ಯೆ ಕಾಯಂ ನೌಕರರಿಗಿಂತ ಹೆಚ್ಚಿದೆ. ನಾನಾ ರೀತಿಯ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡುವ ಎಲ್ಲ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ಕೆಸದ ಸ್ಥಳದಲ್ಲಿ ಘನತೆ, ಸಮಾನ ವೇತನವನ್ನು ಖಾತರಿ ಮಾಡಬೇಕು ಎಂದು ಸುಪ್ರೀಂಕೋರ್ಟ್ 2016ರಲ್ಲಿ ಆದೇಶಿಸಿದ್ದರೂ ಅದು ಅನುಷ್ಠಾನಗೊಂಡಿಲ್ಲ ಎಂದು ಆರೋಪಿಸಿದರು.
ಜೀತ ವ್ಯವಸ್ಥೆಯ ಬದಲಾದ ರೂಪವೇ ಗುತ್ತಿಗೆ ಪದ್ಧತಿ. ಕೆಲಸ ಮಾಡಿದರೂ ಭದ್ರತೆ ಇಲ್ಲವಾಗಿದೆ. ಕೊನೆಗೆ ಇಲಾಖೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ಹೊರ ದೂಡುವ ಸ್ಥಿತಿ ಇದೆ. ಹೀಗಾಗಿ ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳ್ಳಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸಮಾನ ವೇತನ ಹಾಗೂ ಸೇವಾ ಭದ್ರತೆಗೆ ಆಗ್ರಹಿಸಿ ದೇಶಾದ್ಯಂತ ಧರಣಿ ಹಮ್ಮಿಕೊಂಡಿದ್ದು ಜಿಲ್ಲೆಯಲ್ಲೂ ನಡೆಯಲಿದೆ ಎಂದು ಹೇಳಿದರು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಪ್ರಧಾನ ಮಂತ್ರಿಗೆ ಮನವಿಯನ್ನು ಸಲ್ಲಿಸಲಾಯಿತು. ಸ್ಥಳಕ್ಕೆ ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಸುಕುಮಾರ್ ಶೆಟ್ಟಿ ಆಗಮಿಸಿ ಮನವಿ ಸ್ವೀಕರಿಸಿದರು. ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರೀತಂ ಬಿ ಎಸ್, ಪ್ರಧಾನ ಕಾರ್ಯದರ್ಶಿ ಮಹಾಬಲೇಶ್, ಕೋಶಾಧಿಕಾರಿ ಗಿರೀಶ್ ಕಡ್ಡಿಪುಡಿ,, ಉಪಾಧ್ಯಕ್ಷೆ ಸೌಮ್ಯಶ್ರೀ, ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು.