ಹತ್ತು ಹಲವು ಆಸಕ್ತಿಗಳ ಗೃಹಿಣಿ – ಲೀಲಾ ಬೈಕಾಡಿ

Spread the love

ಹತ್ತು ಹಲವು ಆಸಕ್ತಿಗಳ ಗೃಹಿಣಿ – ಲೀಲಾ ಬೈಕಾಡಿ

ಅಮೇರಿಕಾದ ಸ್ಕ್ರಾಂಟನ್ ಎಂಬುದು ಹಸಿರು ಬೆಟ್ಟ-ಕಣಿವೆಗಳಿಂದ ಆವೃತ್ತವಾದ ಪೆನ್ಸಿಲ್ವೇನಿಯಾದ ಸುಂದರ ಊರು. ಒಂದು ಕಾಲದಲ್ಲಿ ಕಲ್ಲಿದ್ದಲು ಗನಿ ಕೈಗಾರಿಕೆಯ ಪ್ರಮುಖ ತಾಣಗಳ ಊರು. ಭಾರತದ ಹಿಂದಿ ಚಿತ್ರ ಪ್ರಪಂಚದ ಪ್ರಸಿದ್ಧ ಹಾಸ್ಯ ನಟ ಮೆಹಬೂಬ್ ತನ್ನ ಅಮೇರಿಕಾ ಮಡದಿಯೊಂದಿಗೆ ತನ್ನ ಕೊನೆಯ ದಿನಗಳನ್ನು ಕಳೆದ ಊರು.

leela-baikadi1

ಲೀಲಾ ಬ್ಯೆಕಾಡಿ

ಊರಿನ ಮೂಲೆಯ ಕಿರು ಬೆಟ್ಟದ ಮೇಲೆ ಬೆಟ್ಟದ ಜೀವಕ್ಕೆ ಜೀವ ಬಂದಂತೆ ಕಾಣುವ ಡಾ| ಮಾಧವ ಬೈಕಾಡಿಯವರ ವಿಶಾಲವಾದ ಮನೆ. ಹೊರ ನೋಟಕ್ಕೆ ಅಮೇರಿಕಾದ ಹೆಚ್ಚಿನ ಮನೆಗಳಂತೆ ಸಾಮಾನ್ಯವಾದ ಹಲಗೆಗಳ ಮನೆಯ ಒಳ ಹೊಕ್ಕರೆ ತುಸು ಭಿನ್ನ ಅನುಭವ. ಕಾರಣ ಪತ್ನಿ ಲೀಲಾ ಬೈಕಾಡಿಯವರ ಕಲಾಸಕ್ತಿಗಳನ್ನು ಪ್ರತಿನಿಧಿಸುವ ವಿವಿಧ ಸಂಗ್ರಹಗಳು, ವರ್ಣ ಚಿತ್ರಗಳು, ಕೆತ್ತನೆಗಳು, ಕೈಕುಸುರಿಗಳು, ಅಪೂರ್ವ ಗ್ರಂಥಗಳು.

image011photography-exhibition-leela-baikadi-20161019-011 image002photography-exhibition-leela-baikadi-20161019-002 image007photography-exhibition-20161014-007

ಡಾ| ಮಾಧವ ಬೈಕಾಡಿ ಉದಯವಾಣಿ ಪತ್ರಿಕೆಯ ಮಣಿಪಾಲ ಮುದ್ರಣಾಲಯದಲ್ಲಿ ದೀರ್ಘ ಕಾಲ ಸೇವೆ ನಡೆಸಿ ಪ್ರೆಸ್ಸಿನ ಭಾಗವೋ ಎಂಬಂತೆ ಬಾಳಿದ ದಿ| ಬಿ ಕೃಷ್ಣಯ್ಯನವರ ಮಗ. ಅವರ ಕೈ ಹಿಡಿದು ಅಮೇರಿಕಾಕ್ಕೆ 1980ರ ದಶಕದಲ್ಲಿ ಬಂದ ಲೀಲಾ ಅವರೂ ಕಲೆಯ ಪರಿಸರದಲ್ಲೆ ಬೆಳೆದವರು. ತವರು ಮಡಿಕೇರಿಯಾದರೂ ಬಾಲ್ಯದ ದಿನಗಳನ್ನು ಕಳೆದದ್ದು ವಿವಿಧ ಜಾನಪದ ಚಟುವಟಿಕೆಗಳಿಂದ ತುಂಬಿದ ಉಡುಪಿಯ ಸಮೀಪದ ಪಣಿಯೂರು ಅಜ್ಜನ ಮನೆಯಲ್ಲಿ. ಮುಂದೆ ಕಾಲೇಜು ವಿದ್ಯಾಭಾಸವೆಲ್ಲ ಮಂಗಳೂರಿನಲ್ಲಿ. ಚಿಕ್ಕಮ್ಮ – ಗೊಂಬೆಯಾಟದ ಪ್ರಸಾರದಲ್ಲಿ ಸಾಕಷ್ಟು ಶ್ರಮವಹಿಸಿ ಇಂದಿಗೂ ಕ್ರಿಯಾಶೀಲರಾಗಿರುವ ಲೀಲಾ ಉಪಾಧ್ಯಾಯರ ಮಾರ್ಗದರ್ಶನದಲ್ಲಿ. ಇದೀಗ ಮೂರು ಮಕ್ಕಳ ತಾಯಿಯಾಗಿ ಸುದೀರ್ಘ ಕೌಟುಂಬಿಕ ಜೀವನ ತವರಿನಿಂದ ಬಹುದೂರದ ಅಮೇರಿಕಾದ ಸ್ಕ್ರಾಂಟನ್‍ನಲ್ಲಿ.

ಆದರೆ ಲೀಲಾ ಬೈಕಾಡಿಯವರಿಗೆ ತನ್ನ ಕಲಾಸಕ್ತಿಗಳನ್ನು ಬೆಳೆಸಲು ಈ ದೂರವೋ ಅಪರಿಚಿತ ದೇಶವೋ ಅಥವಾ ಭಿನ್ನ ಸಂಸ್ಕೃತಿಯೋ ಅಡ್ಡ ಬರಲಿಲ್ಲ. ಕಲೆ ಆಸಕ್ತಿಯನ್ನು ಅವಲಂಬಿಸಿದ್ದು ಅದಕ್ಕೆ ಊರು ಪರವೂರು ಎಲ್ಲ ಒಂದೆ ಎನ್ನುವುದು ಎತ್ತಿ ತೋರಿಸುವಂತಿದೆ ಅವರ ಕ್ರಿಯಾಶೀಲತೆ. ಅಮೇರಿಕಾದ ಭಿನ್ನ ಸಂಸ್ಕೃತಿಯ ಪರಿಸರದಲ್ಲಿ ಪರಕೀಯತೆ ಕಾಡದಂತೆ ತನ್ನ ಕಲೆಯ ಕನಸುಗಳಿಗೆ ಸದಾ ನೀರೆರೆಯುವ ಕ್ರಿಯಾಶೀಲತೆ ಅವರದ್ದು.

image002photography-exhibition-20161014-002

‘ಒಂದೋ ಸಂಪಾದನೆಗಾಗಿ ಉದ್ಯೋಗ ಇಲ್ಲ ಸಂಪಾದಿಸುವ ಗಂಡನಿಗಾಗಿ ಮನೆವಾರ್ತೆ. ಅದೂ ಭಾರತಕ್ಕಿಂತ ಇನ್ನಷ್ಟು ತೀವ್ರವಾದ ಗ್ರಹಬಂಧನದೊಳಗೆ. ನೆರಮೆನೆಯವರೂ ಮನಸ್ಸಾದರೆ ಹಲೊ, ಹಾಯ್ ಎನ್ನುವಷ್ಟೆ  ಪರಿಚಿತರಾಗಿರುವ ಸಾಮಾಜಿಕ ಸ್ಥಿತಿ – ಇಂಥ ಸಂದರ್ಭಗಳಲ್ಲಿ ಭಾರತದಿಂದ ಬಂದ ಗೃಹಿಣಿ ಕಳೆದು ಹೋಗದಿರಲು ಅವಳ ಕಲಾ ಹವ್ಯಾಸಗಳೆ ಮುಖ್ಯ ದಾರಿ’ ಎಂಬ ದೃಢ ನಿಲುವು ಲೀಲಾ ಬೈಕಾಡಿ ಅವರದ್ದು. ಅದಕ್ಕನುಗುಣವಾಗಿ ಸದಾ ಚುರುಕಾಗಿದ್ದಾರೆ ತನ್ನ ಪರಿಸರದಲ್ಲಿ.

ಅಮೇರಿಕಾಕ್ಕೆ ಬಂದ ಮೇಲೆ ತನ್ನ ಕಲಾಸಕ್ತಿಗಳನ್ನು ಬೆಳೆಸಿಕೊಳ್ಳಲು ಹಲವು ದಾರಿಗಳನ್ನು ತಾನೆ ರೂಪಿಸಿಕೊಂಡರು. ನ್ಯೂ ಯಾರ್ಕಿನಲ್ಲಿ ಎರಡು ವರ್ಷಗಳ ಚಿತ್ರಕಲಾ ತರಬೇತಿಯನ್ನು ಪಡೆದರು. ಸಾಂಸಾರಿಕ ಕರ್ತವ್ಯಗಳ ನಡುವೆ ಬಿಡುವು ಎನ್ನಿಸಿದಾಗಲೆಲ್ಲ ಬಣ್ಣ-ಬ್ರಶ್ಶುಗಳ ಒಡನಾಟಕ್ಕೆ ಇದು ಭದ್ರ ಬುನಾದಿಯಾಯಿತು. ಮನೆಯ ಗೋಡೆಯನ್ನು ಅವರದೇ ಕಲಾಕೃತಿಗಳು ಅಲಂಕರಿಸತೊಡಗಿದವು. ಆಸೆ ಪಟ್ಟವರಿಗೆ ತನ್ನ ಚಿತ್ರಗಳನ್ನು ಉಡುಗೊರೆಯಾಗಿ ನೀಡುವ ಹುಮ್ಮಸ್ಸು ಇವರದ್ದು. ಇಷ್ಟು ಮಾತ್ರವೇ? ಗ್ಯಾರೆಜಿನ ತುಂಬ ಇರುವ ಉಳಿ, ಗರಗಸ, ಕೀಸುಳಿ ಉಪಕರಣಗಳೆಲ್ಲ ಏತಕ್ಕೆ ಎಂದು ಕೇಳಿದರೆ, ಈ ಗೃಹಿಣಿ ನಗುತ್ತ ಹೇಳುತ್ತಾರೆ ‘ಏನಾದರೂ ಮರದ ಕೆತ್ತನೆ ಮಾಡಬೇಕೆನ್ನಿಸಿದರೆ ಇವುಗಳು ಬೇಕೇ ಬೇಕಲ್ಲ.’ ಮುಖ್ಯವಾಗಿ ತನ್ನ ವರ್ಣಚಿತ್ರಗಳಿಗೆ ಕಲಾತ್ಮಕ ಚೌಕಟ್ಟುಗಳನ್ನು ತಾನೇ ತಯಾರಿಸುವುದಕ್ಕೆ ಇವುಗಳೆಲ್ಲ ಬೇಕೇ ಬೇಕು. ಅಮೇರಿಕಾದ ಮಟ್ಟದಲ್ಲಿ ತುಂಬ ದುಬಾರಿಯೆನ್ನಿಸುವ ಈ ವೆಚ್ಚವನ್ನು ತಪ್ಪಿಸಿಕೊಳ್ಳಲು ಲೀಲಾ ಅವರು ಅಂಥವುಗಳನ್ನೆಲ್ಲ ತಾನೇ ತಯಾರಿಸುತ್ತಾರೆ. ಅಂದ ಹಾಗೆ ಮನೆಯಲ್ಲಿ ನಡೆಯುವ ದೇವತಾ ಕಾರ್ಯಗಳಿಗೆ ಕುಳಿತುಕೊಳ್ಳುವ ಮಣೆಗಳೆಲ್ಲ ಅವರದ್ದೆ ತಯಾರಿ.

image006photography-exhibition-20161014-006

ಮಂಗಳೂರಿನಲ್ಲಿ ಗುರು ಯು ಎಸ್ ಕೃಷ್ಣರಾಯರಿಂದ ಪಡೆದ ಭರತನಾಟ್ಯ ಶಿಕ್ಷಣವನ್ನು ಮರೆಯುವುದು ಸಾಧ್ಯವೇ? ಸ್ಕ್ರಾಂಟನಿನ ಕಲಾ ಸ್ಕೂಲ್ ಆಫ್ ಡ್ಯಾನ್ಸ್ ಕೇಂದ್ರದೊಂದಿಗೆ ಸದಾ ಸಂಬಂಧವಿರಿಸಿಕೊಂಡ ಲೀಲಾ ದೇಹ – ವಯೋಮಾನವನ್ನು ಲೆಕ್ಕಿಸದೆ ಇಂದಿಗೂ ಕುಣಿಯುವ ಹಂಬಲವನ್ನಿರಿಸಿಕೊಂಡಿದ್ದಾರೆ. ಪ್ರದರ್ಶನದ ಹುಚ್ಚಿನಿಂದಲ್ಲ, ಕಲೆಯ ಮೇಲಿನ ಪ್ರೀತಿಯಿಂದ. ತನ್ನ ಸಂಗೀತದ ಗುಂಗಿಗೆ ನೀರೆರೆಯುವ ಸನ್ಮಿತ್ರೆ ಡಾ| ವತ್ಸಲಾ ಹೊಳ್ಳ ಅವರ ಗುರು ಪ್ರಸಿದ್ಧ ಸಂಗೀತ ಕಲಾವಿದ ಟಿ ಏನ್ ಬಾಲ ಅವರಿಗೆ 80 ತುಂಬಿದಾಗ ಆ ಸಂಭ್ರಮದ ಆಚರಣೆಯಂದು ಜಯದೇವನ ಗೀತಗೋವಿಂದ ಸಾಲುಗಳಿಗೆ ಸ್ಪಂದಿಸುವಷ್ಟು ನೃತ್ಯದ ಉತ್ಸಾಹ ಅವರದ್ದು.

image004photography-exhibition-leela-baikadi-20161019-004image004photography-exhibition-20161014-004

‘ಹುಚ್ಚು ಮನಸ್ಸಿನ ಹತ್ತು ಮುಖಗಳು ಹಿರಿಯರಾದ ಕಾರಂತರದ್ದಾದರೆ ನನ್ನ ಮಡದಿಯದ್ದು ಮಿತಿಯಿಲ್ಲದ ಲಹರಿಗಳು’ ಎನ್ನುತ್ತಾರೆ ಪತಿ ಡಾ| ಮಾಧವ ಬೈಕಾಡಿ. ‘ಇವರ ಪ್ರೋತ್ಸಾಹವಲ್ಲದಿದ್ದರೆ ನನ್ನಿಂದೇನಾದೀತು ಎನ್ನುತ್ತ’ ಪಲ್ಲವಿ ಹಾಡುತ್ತಾರೆ ಲೀಲಾ, ತಕ್ಷಣ ಕ್ಲಿಕ್ ಎಂದು ಕೈಯಲ್ಲಿದ್ದ ಕೆಮರಾವನ್ನು ಕ್ಲಿಕ್ಕಿಸುತ್ತ. ಹೌದು. ಫೋಟೋಗ್ರಫಿ ಅವರ ಅಚ್ಚುಮೆಚ್ಚಿನ ಹವ್ಯಾಸ ಚುರುಕಿನ-ಅವಸರದ ಹವ್ಯಾಸ. ಅವರ ಕೆಮರಾ ಕಣ್ಣು ಏನನ್ನು ನಿಗದಿಗೊಳಿಸುತ್ತಿದೆ ಎಂದು ಎದುರಿದ್ದವ ಯೋಚಿಸುವ ಮೊದಲೆ ಕೈಯಲ್ಲಿದ್ದ ಕೆಮರಾದ ಕಣ್ಣು ತೆರೆಯಿಸುವ ಅವರು ತೆಗೆದ ಆ ಚಿತ್ರಗಳನ್ನು ನೋಡಿದ ಮೇಲೆ ಆ ಚುರುಕಿನ ಫಲಿತಾಂಶ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಎದುರಿನ ಕಿಟಕಿಯ ಸಂದಿಯಲ್ಲಿ ಕಾಣುವಂತೆ ಅರಳಿದ ಹೂವು, ಪುಷ್ಪೋ ದ್ಯಾನದ ಬಗೆ ಬಗೆಯ ಹೂವುಗಳ ಎಸಳುಗಳ ವಿನ್ಯಾಸ, ಬೆನ್ನು ಹಾಕಿ ನಿಂತ ಮುದುಕಿಯ ನಿಲುವಿನಲ್ಲಿ ಎದ್ದು ಕಾಣುವ ಜೀವನ ಶ್ರದ್ಧೆ, ಪ್ರವಾಸದ ವಿವಿಧ ತಾಣಗಳಲ್ಲಿ ಸೆರೆಹಿಡಿದ ಪರಂಪರೆಯನ್ನು ಬಿಂಬಿಸುವ ಕೆತ್ತನೆಗಳ ಚಿತ್ರ, ಹೀಗೆ ಅವರ ಆಲ್ಬಮ್ ತುಂಬಿಕೊಂಡಿದೆ ಕಣ್ಣು ಕಾಣಲಾಗದ ಭಿನ್ನ ಬಿಂಬ ಭಾವಗಳು.

image009photography-exhibition-leela-baikadi-20161019-009

ಸ್ಥಿರ ಚಿತ್ರದಲ್ಲಿ ಚಲನೆಯ ಪರಿಣಾಮಗಳು. 2004ರ” ಉಡುಪಿಯ ಯಕ್ಷಗಾನ ಕಲಾರಂಗ – ಸಮೂಹ ತಂಡ ತಮ್ಮ ಅಮೇರಿಕಾ ಪ್ರವಾಸದ ನಡುವೆ ಸ್ಕ್ರಾಂಟನ್‍ನಲ್ಲಿ ಆಟ ಆಡಿದ ದಿನ ಬಣ್ಣದ ಕೋಣೆಯಲ್ಲಿ ಹಿರಿಯ ಕಲಾವಿದ ನೀಲಾವರ ಮಹಾಬಲ ಶೆಟ್ಟಿಯವರು ಸುಂದರ ರಾವಣನಾಗಲು ಅಟ್ಟೆ ಮೇಲೆ ಅಟ್ಟೆ ಇರಿಸಿ ಕೆಂಪು ಮುಂಡಾಸು(ಕಿರೀಟ) ಕಟ್ಟುತ್ತಿದ್ದಂತೆ ಲೀಲಾ ಬೈಕಾಡಿಯವರು ತೆಗೆದ ಚಿತ್ರಗಳನ್ನು ಒಂದರ ಜತೆ ಇನ್ನೊಂದನ್ನಿರಿಸಿ ಸಾಲಾಗಿ ಕಂಡಾಗ ಯಕ್ಷಗಾನದ ವೇಷಗಾರಿಕೆಯ ವಿವಿಧ ಹಂತಗಳೆ ಕಣ್ಣು ತುಂಬಿದಂತೆ ಭಾಸವಾಗುತ್ತದೆ. ಒಂದು ಪೂರ್ಣ ವೇಷದ ಸಾಮಗ್ರಿಗಳು ತನಗೆ ಬೇಕು ಎಂದರು ಲೀಲಾ. ಹೆಂಡತಿ ಮಾತು ಮುಗಿಸುವ ಮೊದಲೆ ಮಾಧವ ಬೈಕಾಡಿ ಅವರ ಅದರ ಮೌಲ್ಯಕ್ಕ್ರೆ ಚೆಕ್ಕು ಬರೆದು ಕೊಟ್ಟಾಯಿತು. ಇದೀಗ ಆ ಮುಂಡಾಸು, ಯಕ್ಷ ಸಾಮಗ್ರಿಗಳೆಲ್ಲ ಅವರ ದೇವರ ಕೋಣೆಯ ಮೇಲೆ ಪೂರ್ಣ ವೇಷದ ಸಾಂಕೇತಿಕ ಆಕಾರ ಪಡೆದು ನಿಂತಿದೆ.

ಹತ್ತು ಹಲವು ಕಲಾಸಕ್ತಿಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿರುವ ಗೃಹಿಣಿ ಲೀಲಾ ಅವರು ಭಾರತೀಯ ಪರಂ ಪರೆಯ ಮೇಲೆ ಸಾಕಷ್ಟು ನಿಷ್ಟೆಯನ್ನು ಉಳಿಸಿಕೊಂಡಿದ್ದಾರೆ. ಕಲೆ, ಅಧ್ಯಾತ್ಮ ಮತ್ತು ಕೌಟುಂಬಿಕ ಜೀವನದ ಒಂದು ಹದವಾದ ಪಾಕವು ಇವರ ವ್ಯಕ್ತಿತ್ವದಲ್ಲಿ ಒಟ್ಟಾಗಿದೆ. ಸ್ಕ್ರಾಂಟನ್‍ನ ತನ್ನ ಮನೆಯಲ್ಲಿ ಪ್ರತಿ ವರ್ಷವೂ ಅವರು ನಡೆಸುತ್ತಾ ಬಂದಿರುವ, ಬಹುಶ: ಅಮೇರಿಕಾದಲ್ಲಿ ನಡೆದ ಪ್ರಥಮ ಪ್ರಯತ್ನ ಎನ್ನಬಹುದಾದ ಸಾಲಂಕೃತ ದೀಪ ನಮಸ್ಕಾರವು ಒಂದು ಸಾಕ್ಷಿ. ಇದಕ್ಕಾಗಿಯೇ ನಾಲ್ಕಾರು ಎತ್ತರದ ಕಾಲುದೀಪಗಳನ್ನು ಅವರು ಸಂಗ್ರಹಿಸುತ್ತಾರೆ. ಆಕರ್ಷಕ ಶಾಸ್ತ್ರಬದ್ಧ ಮಂಡಲವನ್ನು ಬರೆದು ಎತ್ತರದ ಕಾಲುದೀಪವನ್ನಿರಿಸಿ ತಾನೇ ನೆರಿಗೆ ಹಿಡಿದು ಪಟ್ಟೆ ಸೀರೆಯನ್ನು ತೊಡಿಸಿ ಸ್ಟ್ರೌಡ್ಸ್ಬರ್ಗಿನ ಶ್ರೀ ಶಂಕರ ಮಠದ ಪುರೋಹಿತರ ಮೂಲಕ ನಡೆಸುವ ದೀಪ ನಮಸ್ಕಾರ ಅಥವಾ ಕೆಲವು ಸಂದರ್ಭಗಳಲ್ಲಿ ಮನೆಯಲ್ಲಿ ನಡೆಯುವ ಯಾವುದೇ ಭಕ್ತಿ ತುಂಬಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರ ಕಲಾಸಕ್ತಿಯನ್ನು ನಾವು ಗುರುತಿಸಬಹುದು. ಸಾವಿರಗಟ್ಟಲೆ ಪುಟದ ಪುಸ್ತಕವಾದರೂ ಏಕಾಗ್ರತೆಯಿಂದ ಓದುವ ಲೀಲಾ ಅವರು ಬರವಣಿಗೆಗೆ ಮನಸ್ಸು ಮಾಡಿದವರಲ್ಲ. ಸಾಕಷ್ಟು ಆತ್ಮೀಯತೆಯಿಂದಿದ್ದ ಹಿಂದೀ ಹಾಸ್ಯ ನಟ ಮೆಹಮೂದ್ ಅವರ ಸ್ಕ್ರಾಂಟನ್ ವಾಸ್ತವ್ಯದ ಬಗ್ಗೆ ಲೇಖನ ಬರೆಯಿರಿ ಎಂದರೆ ಮುಗುಳ್ನಗೆ ಮಾತ್ರ ಅವರ ಉತ್ತರ.

image001photography-exhibition-20161014-001

ಹೀಗೆ ಅಂಟಿಸಿಕೊಂಡ ಇನ್ನೊಂದು ಹವ್ಯಾಸ ಆಭರಣ ತಯಾರಿಕೆ. ಇದೊಂದು ಅಮೇರಿಕಾದಲ್ಲಿ ಹುಚ್ಚೆಬ್ಬಿಸುವ, ನಿಮ್ಮಷ್ಟಕ್ಕೆ ಬೆಳಸಿಕೊಳ್ಳಬಹುದಾದ ಕಲೆ. ಕುಶಲ ಕಲೆಗಳ ಅಂಗಡಿಗಳಲ್ಲಿ ಒಂದು ಗಂಟೆ ಕಳೆದರೆ ಸಾಕು ಬಣ್ಣದ ಮಣಿಗಳು, ಬೆಳ್ಳಿಯ ಚಿನ್ನದ ಸರಿಗೆಗಳು, ಕೊಂಡಿಗಳು, ಅಯಸ್ಕಾಂತದ ಕೊಂಡಿಗಳು, ಕಿವಿಯ ಓಲೆ, ಕೈ ಬಳೆ, ಸರ ಇವಕ್ಕೆಲ್ಲ ಬೇಕಾದ ಸಾಮಗ್ರಿಗಳು ಚೀಲ ತುಂಬುತ್ತವೆ. ಆದರೆ ಲೀಲಾ ಅವರಿಗೆ ಇವೇ ಆಗಬೇಕೆಂದಿಲ್ಲ. ಯಾವುದೋ ಸೀರೆಗೆ ಹೊಂದುವ ಬಣ್ಣದ ಪ್ಲಾಸ್ಟಿಕ್ ವಯರ್ ಕಂಡರೂ ಸಾಕು, ತನ್ನ ಕರಿಮಣಿ ತಾಳಿಗೆ ಆಳವಡಿಸಿಕೊಳ್ಳ ಲಿಕ್ಕಾಗುವಂತೆ ತಯಾರಾಯಿತು  ಒಂದು ಸರ. ಇದನ್ನೆಲ್ಲ ಹರಡಿಕೊಂಡು ಕುಳಿತಿರುವಾಗ ಬರುತ್ತಾರೆ ಶ್ಯಾಡೊ ಮತ್ತು ಫ್ಲೆಕ್ಸಿ ಮಿಯಾಂವ್ ಮಿಯಾಂವ್ ಬೆಕ್ಕುಗಳು. ಕಂಪ್ಯೂಟರ್ ನಲ್ಲಿ ಫೋಟೋ ಎಡಿಟಿಂಗ್, ಲಲಿತಕಲಾ ಸಂಬಂಧೀ ಗ್ರೀಟಿಂಗ್ ಕಾರ್ಡ್ ತಯಾರಿಕೆ ಇವೆಲ್ಲ ಉಳಿದ ಆಸಕ್ತಿಯ ಕ್ಷೇತ್ರಗಳು.

ಕಳೆದ ಕೆಲವು ವರುಷಗಳಿಂದ ತನ್ನೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಸಕ್ರಿಯ ಕಾರ್ಯಕರ್ತೆ ಯಾಗಿ     ಒಳಗೊಳ್ಳುತ್ತಿರುವ ಲೀಲಾ, ಅಲ್ಲಿ ಕಂಪ್ಯೋಟರ್ ಶಿಕ್ಷಣ, ಕ್ವಿಲ್ಟಿಂಗ್ ಶಿಕ್ಷಣ ಹಾಗೂ ಹಲವಾರು ಶೀಷರ್ಕೆಯಡಿ ಯಲ್ಲಿ ತನ್ನ   ಛಾಯಾಚಿತ್ರ ಪ್ರದಶ್ನವನ್ನು ನೀಡಿದ್ದಾರೆ.

ಹೀಗೆ ಕುಟುಂಬ ಸಕ್ರಿಯತೆಯ ಸಂಕೇತದಂತಿರುವ ಲೀಲಾ ಅವರು ಪತಿ ಡಾ| ಬೈಕಾಡಿ ಹಾಗೂ ಹಿರಿಯರ ಆದ ರ್ಶದೊಂದಿಗೆ ಕ್ರಿಯಾಶೀಲರಾಗಿರುವ ಅಲೋಕ್, ಮೇಘಾ, ಅಶ್ವಿನ್ ಮೂರು ಮಕ್ಕಳೊಂದಿಗೆ ಅವರ ಹತ್ತಿರದ ಒಡ ನಾಡಿಗಳಿಗೆ ಹಾಗೆ ದೂರ ಇರುವ ಎಲ್ಲರಿಗೆ ಸ್ಫೂರ್ತಿದಾಯಕರಾಗಿದ್ದಾರೆ.

ಭ್ರಮರಿ ಶಿವಪ್ರಕಾಶ್


Spread the love