ಹತ್ರಾಸ್ ಯುವತಿಯ ಅತ್ಯಾಚಾರ ಮತ್ತು ಕೊಲೆ: ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್
ಉಡುಪಿ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಶೃದ್ಧಾಂಜಲಿ ಕಾರ್ಯಕ್ರಮ ಗುರುವಾರ ಜರುಗಿತು.
ಶೃದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆರೋನಿಕಾ ಕರ್ನೆಲಿಯೋ ಅವರು ಉತ್ತರ ಪ್ರದೇಶದ ಅತ್ರಾಸ್ ನಲ್ಲಿ ಪೈಶಾಚಿಕವಾಗಿ ಅತ್ಯಾಚಾರ ಮಾಡಿ, ಸಾಕ್ಷಿ ಹೇಳದಂತೆ ಯುವತಿಯ ನಾಲಗೆ ಕತ್ತರಿಸಿ, ಬಳಿಕ ಸತ್ತ ಮೇಲೆ ಮೃತದೇಹವನ್ನು ಕುಟುಂಬದವರಿಗೆ ನೋಡಲು ಬಿಡದೇ, ರಾತ್ರಿ ಹೊತ್ತಿನಲ್ಲಿ ಸರಕಾರಿ ವ್ಯವಸ್ಥೆಯನ್ನು ದುರುಪಯೋಗಪಡಿಸಿ, ಪೊಲೀಸ್ ಇಲಾಖೆ ಯುವತಿಯ ಅಂತ್ಯಕ್ರಿಯೆ ಮಾಡಿರುವಂತಹ ಘಟನೆ ಖಂಡನೀಯವಾಗಿದೆ.
ಉತ್ತರಪ್ರದೇಶದಲ್ಲಿ ಹಲವು ಸಮಯಗಳಿಂದ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ದಲಿತ ಯುವತಿಯರೇ ಬಲಿಪಶುಗಳಾಗುತ್ತಿದ್ದಾರೆ. ಆದರೆ ನ್ಯಾಯ ಒದಗಿಸಬೇಕಾದವರು ನ್ಯಾಯ ಒದಗಿಸದೇ ಇರುವುದು ನಮ್ಮೆಲ್ಲರನ್ನು ಚಿಂತೆಗೀಡು ಮಾಡಿದೆ. ಈ ಪ್ರಕರಣದಲ್ಲಾದರೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಾಗಿ, ನ್ಯಾಯ ಸಿಗಲಿ ಮತ್ತು ಇಂತಹ ಹೇಯ ಕೃತ್ಯಗಳು ನಡೆಯದಿರಲಿ. ಸಂತ್ರಸ್ತ ಕುಟುಂಬಕ್ಕೆ ಸರಕಾರ ಗರಿಷ್ಠ ಮೊತ್ತದ ಪರಿಹಾರ ನೀಡುವುದರ ಜೊತೆಗೆ, ಆರೋಪಿಗಳಿಗೆ ಕಠಿಣ ಶಿಕ್ಷೆ ಜಾರಿಮಾಡುವಂತೆ ಉತ್ತರ ಪ್ರದೇಶ ಸರಕಾರವನ್ನು ಒತ್ತಾಯಿಸಿದರು.
ಇದೇ ವೇಳೆ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಸಂತ್ರಸ್ಥ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಉತ್ತರ ಪ್ರದೇಶದ ಹತ್ರಾಸ್ ಗೆ ತೆರಳುತ್ತಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಕೂಡ ಕರ್ನೆಲಿಯೊ ಖಂಡಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ನಾಯಕಿ ಜ್ಯೋತಿ ಹೆಬ್ಬಾರ್ ಮಾತನಾಡಿ ಉತ್ತರಪ್ರದೇಶದಲ್ಲಿ ಇಂತಹ ಹೇಯ ಕೃತ್ಯ ನಡೆದರೂ ಕೂಡ ಪ್ರಧಾನಿ ಮೋದಿ ಮೌನ ವಹಿಸಿರುವುದು ನಿಜಕ್ಕೂ ನಾಚಿಕೆಗೇಡು. ಸದಾ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುವ ಪ್ರಧಾನಿಯವರು ತಮ್ಮ ಹೇಳಿಕೆಯನ್ನು ಬಿಜೆಪಿ ಕಾ ವಿಕಾಸ್ ದೇಶ್ ಕಾ ವಿನಾಶ್ ಎಂದು ಬದಲಾಯಿಸಿಕೊಂಡಿರುವಂತಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಯೋಗಿ ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಬದಲಾಗಿ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಸಂತ್ರಸ್ಥ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಉತ್ತರ ಪ್ರದೇಶದ ಹತ್ರಾಸ್ ಗೆ ತೆರಳುತ್ತಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಲು ತೆರಳಿದಾಗ ಅವರನ್ನು ಬಂಧಿಸುವ ಕೆಲಸಕ್ಕೆ ಇಳಿದಿದ್ದಾರೆ. ಪದೇ ಪದೇ ಮಹಿಳೆಯರ ಮೇಲೆ ಇಂತಹ ಹಲ್ಲೆಗಳು ನಡೆಯುತ್ತಿದ್ದು ಇದನ್ನು ನಿಲ್ಲಿಸುವಂತೆ ಅವರು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ನಾಯಕಿರಾದ ಪ್ರಮೀಳಾ ಜತ್ತನ್ನ, ರೋಶನಿ ಒಲಿವರ್, ಡಾ ಸುನೀತಾ ಶೆಟ್ಟಿ, ಶಾಂತಿ ಪಿರೇರಾ, ಚಂದ್ರಿಕಾ ಶೆಟ್ಟಿ, ಐಡಾ ಗಿಬ್ಬಾ ಡಿಸೋಜಾ, ಮೇರಿ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.