ಹರೇಕಳ ಹಾಜಬ್ಬರನ್ನು ನಾಡಿಗೆ ಪರಿಚಯಿಸಿದ್ದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

Spread the love

ಹರೇಕಳ ಹಾಜಬ್ಬರನ್ನು ನಾಡಿಗೆ ಪರಿಚಯಿಸಿದ್ದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

ಮಂಗಳೂರು: ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ (62) ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು.

ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ನಾಡಿಗೆ ಪರಿಚಯಿಸಿದ ಕೀರ್ತಿ ಇವರದ್ದು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಸಂತಾಪ

ಮಂಗಳೂರು: ಹಿರಿಯ ಪತ್ರಕರ್ತ ಹಾಗೂ ಹೊಸ ದಿಗಂತ ಪತ್ರಿಕೆ ವಿಶೇಷ ವರದಿಗಾರರಾಗಿದ್ದ ಗುರುವಪ್ಪ ಎನ್.ಟಿ. ಬಾಳೆಪುಣಿ ಅವರ ನಿಧನಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ತೀವ್ರ ಸಂತಾಪ ಸೂಚಿಸಿದ್ದಾರೆ.

ಹಲವು ದಶಕಗಳ ಕಾಲ ಸಂಯುಕ್ತ ಕರ್ನಾಟಕ, ಕರಾವಳಿ ಅಲೆ, ಮಂಗಳೂರು ಮಿತ್ರ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರ ಅಗಲಿಕೆ ಅಪಾರ ನೋವುಂಟು ಮಾಡಿದೆ. ಕರಾವಳಿಯ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿರುವ ಹೊಸದಿಗಂತದಲ್ಲಿ ಸುಮಾರು 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಹಲವು ಜನಪರ, ಸಾಮಾಜಿಕ ಕಳಕಳಿಯ ವಿಶೇಷ ವರದಿಗಳನ್ನು ಬರೆದು ಗಮನಸೆಳೆದಿದ್ದರು. ಒಬ್ಬ ಪತ್ರಕರ್ತನಾಗಿ ಸಾಮಾಜಿಕ ಜವಾಬ್ದಾರಿಯ ವರದಿಗಳತ್ತ ಹೆಚ್ಚಿನ ಆಸಕ್ತಿ, ಬದ್ಧತೆಯನ್ನು ಬೆಳೆಸಿಕೊಂಡಿದ್ದ ಬಾಳೆಪುಣಿ ಅವರು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ ಎಂದು ಕ್ಯಾ. ಚೌಟ ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು 2004ರಲ್ಲಿ ತಮ್ಮ ಬರವಣಿಗೆಯ ಮೂಲಕ ಹೊರ ಜಗತ್ತಿಗೆ ಪರಿಚಯಿಸಿದವರು ಬಾಳೇಪುಣಿಯವರು. ಕಿತ್ತಾಳೆ ಮಾರಾಟ ಮಾಡುತ್ತಿದ್ದ ಹಾಜಬ್ಬ ಅವರಿಗೆ ಪದ್ಮಶ್ರೀಯಂಥ ಅತ್ಯುನ್ನತ ಪ್ರಶಸ್ತಿ ಬಂದಿದ್ದರೆ ಅದಕ್ಕೆ ಬಾಳೆಪುಣಿ ಅವರ ವರದಿಯೂ ಒಂದು ಕಾರಣ. ಹೀಗಿರುವಾಗ, ನಮ್ಮ ಜಿಲ್ಲೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವಂತಹ ವರದಿ-ಲೇಖನಗಳನ್ನು ಬರೆಯುತ್ತಿದ್ದ ಬಾಳೆಪುಣಿ ಅವರಂಥ ಪತ್ರಕರ್ತರು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ ಎಂದು ಕ್ಯಾ. ಚೌಟ ತಮ್ಮ ನುಡಿನಮನದಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments