ಕಾರ್ಕಳ: ಕಳ್ಳತನಕ್ಕೆ ಸಂಬಂಧಿಸಿ ಹಳೆಯ ಐದು ಪ್ರಕರಣಗಳನ್ನು ಭೇದಿಸಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ 146.050 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಜೋಡುರಸ್ತೆ ಹಿಮ್ಮಂಜೆ ಬಳಿ ವಾಸವಾಗಿರುವ ಮೂಡಿಗೆರೆ ಮತ್ತು ಚಿಕ್ಕಮಗಳೂರು ಮೂಲದ ಆನಂದ (34), ರತ್ನಾ (38) ಮತ್ತು ಮಧುರಾ (30)ಗುರುತಿಸಲಾಗಿದೆ.
ಆರೋಪಿ ಆನಂದ ಗುಜರಿ ಹೆಕ್ಕುವ ಕೆಲಸದಲ್ಲಿ ನಿರತನಾಗಿದ್ದು, ಮನೆಮನೆಗೆ ಗುಜರಿ ಸಂಗ್ರಹಿಸುತ್ತಾ, ಮನೆಯ ವಾತಾವರಣಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕನ್ನ ಹಾಕುತ್ತಿದ್ದ. ಅಲ್ಲಿದ್ದ ಚಿನ್ನಾಭರಣಗಳನ್ನು ಎಗರಿಸಿದ್ದ. ಅಲ್ಲದೆ ಇಬ್ಬರು ಮಹಿಳೆಯರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿಯಿಟ್ಟು ಹಣ ಪಡೆದುಕೊಂಡಿದ್ದ.
2012ರಲ್ಲಿ ಕುಕ್ಕುಂದೂರು ಗ್ರಾಮದ ರಾಮ ಆಚಾರ್ಯ, 2014 ರಲ್ಲಿ ಮುಂಡ್ಕೂರು ಗ್ರಾಮದ ಶೃತಿ ಶೆಟ್ಟಿಗಾರ್, ನಿಟ್ಟೆ ಗ್ರಾಮದ ಸುಮಾ ಮಧು ಸೂದನ್, 2015ರಲ್ಲಿ ಮುಡಾರು ಗ್ರಾಮದ ಬಜಧಿ ಗೋಳಿ ಗುರ್ಗಾಲ್‌ಗುಡ್ಡೆ ರಮೇಶ್ ಮತ್ತು ನಿಟ್ಟೆ ಗ್ರಾಮದ ಶ್ರೀರಾಮನಗರದ ಸೀತಾರಾಮ ಶೆಟ್ಟಿಯ ಮನೆಗೆ ಕನ್ನ ಹಾಕಲಾಗಿತ್ತು.
ಕಾರ್ಕಳ ಎಎಸ್ಪಿ ಡಾ.ಸುಮನಾ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತ ವಾರ್ತಾ ವಿಭಾಗದ ಪೊಲೀಸ್ ನಿರೀಕ್ಷಕ ಟಿ.ಆರ್. ಜೈಶಂಕರ್, ಎಎಸ್ಸೆ„ ರೊಸಾರಿಯೊ ಡಿಸೋಜ, ಸುರೇಶ್, ರಾಮು ಹೆಗ್ಡೆ, ಚಂದ್ರ ಶೆಟ್ಟಿ, ರವಿಚಂದ್ರ, ರಾಘವೇಂದ್ರ, ಶಿವಾನಂದ, ರಾಜ್ ಕುಮಾರ್, ದಯಾನಂದ ಪ್ರಭು, ಪ್ರವೀಣ್ ಮತ್ತು ಚಾಲಕ ರಾಘವೇಂದ್ರ, ನವೀನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸಿ ರಿಪೋರ್ಟ್ ಹಾಕಲಾದ ಹಳೆಯ ಪ್ರಕರಣವನ್ನು ಭೇದಿಸಿದ ಎಎಸ್ಪಿ ನೇತೃತ್ವದ ತಂಡವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಶ್ಲಾಘಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ತಂಡಕ್ಕೆ 10 ಸಾವಿರ ರೂ. ವಿಶೇಷ ಬಹುಮಾನವನ್ನು ನೀಡಲಾಗುವುದು ಎಂದರು.