ಹಾಲಾಡಿಯನ್ನು ಸೋಲಿಸಲು ಒಂದಾದ ವಿರೋಧಿ ಬಣ?;ಟಿಕೆಟ್ ಸಿಗದ ಬಗ್ಗೆ ಪರೋಕ್ಷ ಅಸಮಾಧಾನ ಹೊರಹಾಕಿದ ಜೆಪಿ ಹೆಗ್ಡೆ!
ಕುಂದಾಪುರ: ಬಹಳ ಗೊಂದಲಮಯ ವಾತಾವರಣದಲ್ಲಿ ಬಿಜೆಪಿ ಟಿಕೇಟು ಪಡೆದಿರುವ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟರ ವಿರೋಧಿಗಳು ಒಂದಾಗಿದ್ದು, ಅವರನ್ನು ಸೋಲಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಕುಂದಾಪುರದಲ್ಲಿ ಹಾಲಾಡಿ ವಿರೋಧಿ ಬಣದ ನಾಯಕರು ಮತ್ತು ಬಿಜೆಪಿಯ ನಾಯಕರಾದ ಜಯಪ್ರಕಾಶ್ ಹೆಗ್ಡೆ ಹಾಗೂ ಎ.ಜಿ.ಕೊಡ್ಗಿ ಅವರು ಶನಿವಾರ ಸಮಾಲೋಚನಾ ಸಭೆ ನಡೆಸಿದರು.
ಸಭೆಯಲ್ಲಿ ಹಾಲಾಡಿ ಅವರ ವಿರುದ್ಧ ಮಾಜಿ ಶಾಸಕ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಜಯಪ್ರಕಾಶ್ ಹೆಗ್ಡೆ ಅವರಿಗೆ ಕುಂದಾಪುರದಲ್ಲಿ ಮತ್ತು ಬೈಂದೂರುಗಳೆರಡರಲ್ಲೂ ಬಿಜೆಪಿ ಟಿಕೇಟು ನೀಡದೇ ಅನ್ಯಾಯ ಮಾಡಿದೆ. ಆದ್ದರಿಂದ ಅವರಿಗೆ ಬೆಂಬಲ ನೀಡಿ ಅವರನ್ನು ಗೆಲ್ಲಿಸಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು ಎಂದು ವಿರೋಧಿ ಬಣದ ನಾಯಕ ಕಿಶೋರ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೇ ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸಿದರೇ ಕಾಂಗ್ರೆಸ್ ಮತಗಳು ಒಡೆದು ತಾವು ವಿರೋಧಿಸುವ ಹಾಲಾಡಿ ಶೆಟ್ಟರ ಗೆಲುವಿಗೆ ಸಹಾಯಕವಾಗಬಹುದು ಎಂಬ ಲೆಕ್ಕಾಚಾರವೂ ಸಭೆಯಲ್ಲಿ ಪ್ರಸ್ತಾಪವಾಗಿ, ಜಯಪ್ರಕಾಶ್ ಹೆಗ್ಡೆ ಅವರು ಹಿರಿಯ ಅನುಭವಿ ರಾಜಕಾರಣಿ, ಅವರನ್ನು ಈ ಪ್ರಯೋಗಕ್ಕೆ ಗುರಿ ಮಾಡುವುದು ಸರಿಯಲ್ಲ ಎಂಬ ಸಲಹೆಗಳೂ ವ್ಯಕ್ತವಾದವು.
ಹಾಲಾಡಿ ಶ್ರೀನಿವಾಸ ಶೆಟ್ಟರು ಪಕ್ಷದ ಹಿರಿಯರಾದ ತಮಗೆ ಅಗೌರವ ತೋರಿದ್ದಾರೆ, ಅಪಪ್ರಚಾರ ನಡೆಸಿದ್ದಾರೆ, ಆದ್ದರಿಂದ ಅವರಿಗೆ ಈ ಬಾರಿ ಬಿಜೆಪಿ ಟಿಕೇಟು ನೀಡಬಾರದು ಎಂದು ವರಿಷ್ಠರಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದ ಎ.ಜಿ.ಕೊಡ್ಗಿ ಅವರೂ ಸಭೆಯಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ಹಾಲಾಡಿ ಅವರು ಕೊಡ್ಗಿ ಅವರ ಮನೆಗೆ ಹೋಗಿ ಆಶೀರ್ವಾದ ಕೇಳಿದ್ದರು. ಎಲ್ಲವೂ ಸರಿಯಾಗಿದೆ ಎನ್ನಲಾಗಿತ್ತು. ಆದರೇ ಕೊಡ್ಗಿ ಅವರು ಹಾಲಾಡಿ ವಿರೋಧಿ ಬಣದ ಸಭೆಯಲ್ಲಿ ಕಾಣಿಸಿಕೊಂಡು, ಯಾವುದೂ ಸರಿಯಾಗಿಲ್ಲ ಎಂಬುದನ್ನು ತೋರಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಅವರೂ ಈ ಸಭೆಯಲ್ಲಿ ಭಾಗವಹಿಸುವ ಮೂಲಕ ಬಿಜೆಪಿ ಪಕ್ಷ ತನಗೆ ಟಿಕೇಟು ನೀಡದಿದ್ದುದರಿಂದ ತಮಗೂ ಆಸಮಾದಾನವಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಕೊನೆಗೆ ಹಾಲಾಡಿ ಅವರ ವಿರುದ್ಧ ಬಂಡಾಯ ಅಭ್ಯರ್ಥಿಯನ್ನು ನಿಲ್ಲಿಸುವ ಯೋಚನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದು ಕಿಶೋರ್ ಕುಮಾರ್ ಹೇಳಿದ್ದಾರೆ.