ಹಾಸನ: ಕ್ರೈಸ್ತರ ಲೂರ್ದ್ ಮಾತೆಗೆ ಬೆಳ್ಳೂರು ರಾಜಮನೆತನದ ಗೌರವ

Spread the love

ಹಾಸನ: ಕ್ರೈಸ್ತರ ಲೂರ್ದ್ ಮಾತೆಗೆ ಬೆಳ್ಳೂರು ರಾಜಮನೆತನದ ಗೌರವ

ಜೋಸೆಫ್ ಡಿಸೋಜ

ಹಾಸನ: ಧರ್ಮಗ್ರಂಥಗಳು ಏನೇ ಹೇಳಲಿ, ಬದಲಾಗಿರುವ ಸಾಮಾಜಿಕ ಸನ್ನಿವೇಶಗಳು ರಾಜಕೀಯದ ಪಗಡೆಯ ದಾಳಗಳಾಗಿವೆ. ಧರ್ಮದ ತಿರುಳು ಸ್ವಾರ್ಥದ ಉರುಳಾಗಿದ್ದು ಮನಸ್ಸು ಮನಸ್ಸುಗಳ ನಡುವೆ ಮೂಡಿರುವ ಬಿರುಕು ಅಸಹನೆಯ ಕಂದಕ. ಜಾತಿ ಧರ್ಮದ ವಿಚಾರಗಳು ಸೂಕ್ಷ್ಮಾತಿಸೂಕ್ಷ್ಮ ಎನ್ನುವ ಈ ಕಾಲಘಟ್ಟದಲ್ಲಿ ನೆರೆಹೊರೆಯವರನ್ನೇ ನಂಬಲಾರದಂತಹ ಪರಿಸ್ಥಿತಿ.

ಇಷ್ಟೆಲ್ಲಾ ಇರುವಾಗ ಜಾತಿ ಧರ್ಮದ ಅಂಕೆಯನ್ನ ಮೀರಿ ಹಿಂದೂ ಸಮುದಾಯದ ಕುಟುಂಬವೊಂದು ಬರೋಬ್ಬರಿ 48 ವರ್ಷಗಳಿಂದ ಕ್ರೈಸ್ತ ಸಮುದಾಯಕ್ಕೆ ಹಾಗೂ ಅವರ ಆಚರಣೆಗಳಿಗೆ ವಿಶೇಷ ಗೌರವ ಸಲ್ಲಿಸುತ್ತಿದೆ ಎಂದರೆ ನೀವು ನಂಬುತ್ತೀರಾ..? ಖಂಡಿತ ನಂಬಲೇಬೇಕು.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮದ ಬಿ.ವಿ ಶಂಕರ್ ಹಾಗೂ ಬಿ.ವಿ ಜಯರಾಜ್ ಕುಟುಂಬಸ್ಥರೇ ಆ ಮಹಾನ್ ಧರ್ಮ ಸಹಿಷ್ಣುಗಳು ಹಾಗೂ ಮಾನವತಾವಾದಿಗಳು. ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಆಚಾರವೇ ಸ್ವರ್ಗ, ಅನಾಚಾರವೇ ನರಕ. ದಯವೇ ಧರ್ಮದ ಮೂಲವಯ್ಯ. ಅಂತಹುದ್ದೊಂದು ಸಾರ್ವಕಾಲಿಕ ಸತ್ಯವನ್ನು ಜಗತ್ತಿಗೆ ತಿಳಿಸಿದ ಬಸವಣ್ಣನವರು ಬದುಕಿನುದ್ದಕ್ಕೂ ಮಾನವೀಯತೆಯನ್ನು, ಸಹಬಾಳ್ವೆಯನ್ನು ಪ್ರತಿಪಾದಿಸುತ್ತಲೇ ಬಂದರು. ಲಿಂಗಾಯಿತ ಧರ್ಮಕ್ಕೆ ಸೇರಿದ ಬಿ.ವಿ ಶಂಕರ್ ಹಾಗೂ ಜಯರಾಜ್ ಸದ್ದಿಲ್ಲದಂತೆ ಇದನ್ನು ಬದುಕಿನಲ್ಲಿ ಅಳವಡಿಸಿಕೊಂಡು ತಮ್ಮ ಕುಟುಂಬದ ಕುಡಿಗಳಿಗೂ ಕಲಿಸಿದ್ದಾರೆ. ಇವೆಲ್ಲಕ್ಕೂ ಸಾಕ್ಷ್ಯಿಯಾಗಿದೆ ಅವರ ಮನೆಯ ಎದುರು ಇರುವ ಕ್ರೈಸ್ತರ ಲೂರ್ದ್ ಮಾತೆಯ ಪ್ರತಿಮೆ.

ಬ್ಯಾಕರವಳ್ಳಿ: ಸಕಲೇಶಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ನಿಸರ್ಗ ಶ್ರೀಮಂತಿಕೆಯನ್ನು ಹೊಂದಿರುವ ಗ್ರಾಮ ಬ್ಯಾಕರವಳ್ಳಿ. ಬಡವರ ಊಟಿ ಎನ್ನುವ ಹೆಗ್ಗಳಿಕೆ ಪಡೆದಿರುವ ಈ ಗ್ರಾಮದ ಸುತ್ತಮುತ್ತ ಹಲವಾರು ಚಲನಚಿತ್ರಗಳು, ಧಾರವಾಹಿಗಳನ್ನ ಚಿತ್ರೀಕರಿಸಿದ್ದಾರೆ. ಗ್ರಾಮದ ಪರಿಸರ ಎಷ್ಟು ಸುಂದರವೋ, ಇಲ್ಲಿನ ಗ್ರಾಮಸ್ಥರ ಮನಸ್ಸುಗಳು ಕೂಡ ಅಷ್ಟೇ ಪರಿಶುದ್ದ. ಲಿಂಗಾಯಿತ ಸಮುದಾಯದವರೇ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಈ ಗ್ರಾಮದಲ್ಲಿ ಬೆರಳೆಣಿಕೆಯಷ್ಟೇ ಕ್ರೈಸ್ತ ಕುಟುಂಬಗಳಿವೆ. ಗ್ರಾಮದ ಸರ್ಕಲ್ನಿಂದ ಕೆಲವೇ ಮೀಟರ್ ಅಂತರದಲ್ಲಿರುವ ಮಹಾನಂಧಿ ರೈಸ್ ಮಿಲ್ ಮಾಲಿಕ ದಿವಂಗತ ಬಿ.ವಿ ಶಂಕರ್ ಹಾಗೂ ಅವರ ಸಹೋದರ ಬಿ.ವಿ ಜಯರಾಜ್ ಈ ಲೂರ್ದ್ ಮಾತೆ ಸ್ವರೂಪವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಬ್ಯಾಕರವಳ್ಳಿ ಸರ್ಕಲ್ಗೆ ಯಾರೇ ಬಂದರೂ ಈ ವಿಗ್ರಹ ಎಲ್ಲರಿಗೂ ಎದ್ದು ಕಾಣುವಂತೆ ಪ್ರತಿಷ್ಟಾಪಿಸಲಾಗಿದೆ. ಹೀಗಾಗಿ ್ರತಿನಿತ್ಯ ಸಾವಿರಾರು ಮಂದಿ ತಿಳಿದೋ ತಿಳಿಯದೆಯೋ ಲೂರ್ದ್ ಮಾತೆ ವಿಗ್ರಹದತ್ತ ನೋಟ ಬೀರುತ್ತಾರೆ.

ಲಿಂಗಾಯಿತರ ಮನೆ ಮುಂದೆ ಕ್ರೈಸ್ತರ ಲೂರ್ದ್ ಮಾತೆ ಹೇಗೇ..?: ನಿಜಕ್ಕೂ ಇದೊಂದು ರೀತಿಯ ವಿಸ್ಮಯದ ಕಥೆ. ಬ್ರಿಟಿಷರ ಆಡಳಿತಾವಧಿಯಲ್ಲಿ ನೇಪಥ್ಯಕ್ಕೆ ಸರಿದು ಹೋಗಿದ್ದ ಶುಕ್ರವಾರ ಸಂತೆಯ ಬೆಳ್ಳೂರು ರಾಜಮನೆತನ, ಈ ಲೂರ್ದ್ ಮಾತೆ ವಿಗ್ರಹ ಇಲ್ಲಿಗೆ ಬರಲು ಕಾರಣ ಕರ್ತರು. ಸ್ವಾತಂತ್ರ್ಯಪೂರ್ವದಲ್ಲಿಯೇ ಬ್ರಟೀಷರಿಂದಲೇ ಬ್ಯಾಕರವಳ್ಳಿ, ಶುಕ್ರವಾರಸಂತೆ ಸರಹದ್ದಿನಲ್ಲಿ ಸುಮಾರು 300 ಎಕರೆ ಕಾಪೀ ತೋಟವನ್ನು ಈ ರಾಜಮನೆತನ ಖರೀದಿ ಮಾಡಿತ್ತು.

ಕುಟುಂಬದ ಹಿರಿಯರಾಗಿದ್ದ ಬೆಳ್ಳೂರು ನಂಜೇಗೌಡರಿಗೆ ಬಿ.ಎನ್ ದೇವಪ್ಪ, ಬಿ.ಎನ್ ವಿರೂಪಾಕ್ಷಪ್ಪ, ಬಿ.ಎನ್ ಚಂದ್ರಶೇಖರ್, ಬಿ.ಎನ್ ಮಂಜುನಾಥ್ ಹಾಗೂ ಬಿ.ಎನ್ ನಂಜುಂಡಪ್ಪ ಎಂಬ ನಾಲ್ವರು ಮಕ್ಕಳು. ಐಗೂರು ಕುಟುಂಬಸ್ಥರ ಪಾಲು ದಾರಿಕೆ ಜೊತೆಗೆ ಇಲ್ಲಿ ರೈಸ್ಮಿಲ್ ಸಹ ಆರಂಭಿಸಿದ್ದರು. ಕಾಲಕ್ರಮೇಣ ಕೆಲವು ಕೌಟುಂಬಿಕ ಕಾರಣಕ್ಕೆ ಈ ಕುಟುಂಬ ಕೂಡ ಶ್ರೀಮಂತಿಕೆಯ ಮುಂದೆ ಅವೆಲ್ಲಾ ಗೌಣವಾಗುವ ಕಾಲ ಅದು.

ಬ್ಯಾಕರವಳ್ಳಿಯಲ್ಲಿದ್ದ ಏಕೈಕ ಕ್ರೈಸ್ತ, ಆಗರ್ಭ ಶ್ರೀಮಂತ ಕುಟುಂಬದ ಧಾರ್ಮಿಕ ವಿಚಾರವನ್ನು ಅಂದು ಯಾರೂ ಕೂಡ ಪ್ರಶ್ನೆ ಮಾಡಲಿಲ್ಲ. ಖಾಸಗಿಯಾಗಿದ್ದ ಲೂರ್ದ್ ಮಾತೆ ವಿಚಾರ ಅಂದಿನ ಕಾಲಕ್ಕೆ ಯಾರಿಗೂ ಕೂಡ ಗಂಭೀರ ಎನ್ನುವಂತೆ ಭಾಸವಾಗಲಿಲ್ಲ. ವಿಶೇಷ ಎಂದರೆ ಆ ಊರಿನ ಬಹುತೇಕರು ತಮಗೇನಾದರೂ ಸಮಸ್ಯೆಯಾದರೆ ದೇವಸ್ಥಾನಗಳಿಗೆ ಹರಕೆ ಹೊರುವಂತೆ ಲೂರ್ದ್ ಮಾತೆ ವಿಗ್ರಹದ ಎದುರು ನಿಂತು ಅಲ್ಲಿಯೂ ಸಹ ಪ್ರಾರ್ಥನೆ ಮಾಡುವುದು ಹಾಗೂ ಹರಕೆ ಕಟ್ಟಿಕೊಳ್ಳುವುದು ಮಾಡುತ್ತಾ ಬಂದರು. ಬಹಳಷ್ಟು ಹಬ್ಬ ಹರಿದಿನಗಳಲ್ಲಿ ಇಲ್ಲಿಯೂ ಸಹ ಬಂದು ನಮಸ್ಕರಿಸುವ ವಾಡಿಕೆನ್ನಿಟ್ಟುಕೊಂಡರು.

ಗೋವಿಯಸ್ರ ಜೊತೆಗಿದ್ದ ಒಂದೆರೆಡು ಕ್ರೈಸ್ತರ ವಿವಾಹವು ಕೂಡ ಇಲ್ಲಿಯೇ ನಡೆದದ್ದು ವಿಶೇಷ. ತಮ್ಮ ನಂಬಿಕೆ ಹಾಗೂ ನೆಮ್ಮದಿಗಾಗಿ ಕಾರ್ಲಿನ್ ಗೋವಿ ಯಸ್ ಇಲ್ಲಿ ಲೂರ್ದ್ ಮಾತೆ ವಿಗ್ರಹ ತಂದಿದ್ದರೂ, ಅದು ಅವರಿಗೇ ಅರಿವಿಲ್ಲದಂತೆ ಗ್ರಾಮಸ್ಥರ ಮನಸ್ಸಿನಲ್ಲಿಯೂ ಪ್ರೀತಿಯ ಸ್ಥಾನ ಪಡೆದಿತ್ತು.

ಮರಳಿ ಬೆಳ್ಳೂರು ಮನೆತನಕ್ಕೆ ಸೇರಿದ ಎಸ್ಟೇಟ್ ಹಾಗೂ ಮಿಲ್: ಸರಿಸುಮಾರು 19 ವರ್ಷಗಳ ಕಾಲ ಬ್ಯಾಕರವಳ್ಳಿಯಲ್ಲಿದ್ದ ಕಾರ್ಲಿನ್ ಗೋವಿಯಸ್ ಮಂಗಳೂರಿಗೆ ತೆರಳಿ ಅಲ್ಲಿ ವಾಸಿಸಲಾರಂಭಿಸಿದರು. ಈ ನಡುವೆ ಬೆಳ್ಳೂರು ಕುಟುಂಬಸ್ಥರ ಪೈಕಿ ತಮಗೆ ಆಪ್ತರಾಗಿದ್ದ ಬಿ.ಎನ್ ವಿರೂಪಾಕ್ಷಪ್ಪರವರ ಮಕ್ಕಳನ್ನು ಮಂಗಳೂರಿಗೆ ಕರೆಸಿಕೊಂಡ ಅವರು ರೈಸ್ಮಿಲ್ ಸೇರಿದಂತೆ ಕಾಫೀತೋಟವನ್ನು ಮಂಗಳೂರು ಮೂಲದ ಕಾರ್ಲಿನ್ ಗೋವಿಯಸ್ ಎಂಬುವವರಿಗೆ ಮಾರಾಟ ಮಾಡಿದರು. ಈ ರೀತಿ ಬ್ಯಾಕರವಳ್ಳಿಗೆ ಬಂದ ಕಾರ್ಲಿನ್ ಗೋವಿಯಸ್ ತಮ್ಮ ಕಥೋಲಿಕ ಕ್ರೈಸ್ತ ಸಮುದಾಯದ ನಂಬಿಕೆಯ ಪ್ರತೀಕವಾಗಿ ತಮ್ಮ ಮನೆಯ ಮುಂದೆ ಲೂರ್ದ್ ಮಾತೆಯ ವಿಗ್ರಹವನ್ನು ಪ್ರತಿಷ್ಟಾಪಿಸಿದ್ದಾರೆ. ಜಾತಿ ಪದ್ದತಿಗಳಿದ್ದರೂ ಕಾಫೀ ತೋಟವನ್ನು ಮರಳಿ ಅವರಿಗೇ ಮಾರುವ ಇಂಗಿತ ವ್ಯಕ್ತಪಡಿಸಿದರು.

ಕೇವಲ ಒಂದು ರುಪಾಯಿ ಅಡ್ವಾನ್ಸ್ ಪಡೆದು ಅಂದಿನ ಮಾರುಕಟ್ಟೆ ದರಕ್ಕೆ ಮರಳಿ ಬೆಳ್ಳೂರು ಕುಟುಂಬಕ್ಕೆ ಅವರ ಆಸ್ತಿಯನ್ನು ಮಾರಾಟ ಮಾಡಿದರು. ಈ ಸಂದರ್ಭದಲ್ಲಿ ಅವರು ಕೇಳಿದ್ದು ಒಂದೇ ಒಂದು ಮಾತು.., “ ಲೂರ್ದ್ ಮಾತೆಯ ವಿಗ್ರಹಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ”.

ಕೊಟ್ಟ ಮಾತು ತಪ್ಪದ ಕುಟುಂಬ: ಬಿ.ವಿ ಶಂಕರ್ ಹಾಗೂ ಬಿ.ವಿ ಜಯರಾಜ್ ಕುಟುಂಬಕ್ಕೆ ತಮ್ಮ ಮೂಲ ಆಸ್ತಿ ಮರಳಿ ತಾವೇ ಖರೀದಿ ಮಾಡಿದ್ದು ಖಂಡಿತ ಮುಖ್ಯವಾಗಿರಲಿಲ್ಲ. ಕಾರ್ಲಿನ್ ಗೋವಿಯಸ್ರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎನ್ನುವ ವಿಚಾರ ಮುಖ್ಯವಾಗಿತ್ತು. ಯಾವಾಗ ಅವರ ಕುಟುಂಬ ಸಂಪೂರ್ಣ ಮಂಗಳೂರಿಗೆ ಶಿಪ್ಟ್ ಆಗಿ ಇಲ್ಲಿನ ಒಡೆತನ ಇವರಿಬ್ಬರದ್ದೇ ಆಯಿತೋ ಆಗ ಸಮುದಾಯದ ಪ್ರಮುಖರು ಇಲ್ಲಿಂದ ವಿಗ್ರಹವನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು. ಆದರೆ ಇವರು ಮಾತ್ರ ಯಾವುದೇ ಕಾರಣಕ್ಕೂ ಅದಕ್ಕೆ ಸಿದ್ದರಿರಲಿಲ್ಲ. ಇದೇ ವಿಚಾರ ಹಲವಾರು ಬಾರಿ ಸಂಘರ್ಷಕ್ಕೂ ಕಾರಣವಾಗಿತ್ತು. 80 ರ ದಶಕದಲ್ಲಿ ನಡೆದ ಕೋಮು ಗಲಭೆ ಸಂದರ್ಭದಲ್ಲಿ ಗುಂಪೊಂದು ಈ ವಿಗ್ರಹವನ್ನು ಭಗ್ನಗೊಳಿಸಲು ಯತ್ನಿಸಿತ್ತು. ಆ ಸಂದರ್ಭದಲ್ಲಿ ಜೀವದ ಹಂಗು ತೊರೆದ ಬಿ.ವಿ ಶಂಕರ್ರವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ ವಿಗ್ರಹದ ಎದುರು ನಿಂತು “ನೀವು ವಿಗ್ರಹವನ್ನು ಒಡೆಯುವುದಾದರೆ ಮೊದಲು ನನ್ನನ್ನು ಕೊಂದು ಆಮೇಲೆ ಮುಂದುವರೆಯಿರಿ..” ಎಂದಿದ್ದರು. ಇದರಿಂದ ವಿಚಲಿತರಾದ ಗುಂಪು ಮರು ಮಾತನಾಡದೆ ಹಿಂದಿರುಗಿತ್ತು.

ನಿರಂತರವಾಗಿದೆ ಕ್ರೈಸ್ತ ಸಮುದಾಯದ ಜೊತೆಗಿನ ಬಾಂಧವ್ಯ: ಇದೀಗ ಈ ವಿಗ್ರಹಕ್ಕೆ 48 ವರ್ಷಗಳು ಸಂದಿವೆ. ಇಂದಿನವರೆಗೂ ಈ ವಿಗ್ರಹ ಹಾಗೂ ಕ್ರೈಸ್ತ ಸಮುದಾಯದ ಜೊತೆಗಿರುವ ಈ ಕುಟುಂಬದ ಬಾಂಧವ್ಯಕ್ಕೆ ಕಿಂಚಿತ್ತೂ ಮುಕ್ಕುಂಟಾಗಿಲ್ಲ. ಕ್ರೈಸ್ತರಷ್ಟೇ ಅಲ್ಲ, ಯಾವುದೇ ಸಮುದಾಯದವರು ಇಲ್ಲಿ ಬಂದು ಪ್ರಾರ್ಥನೆ, ಹರಕೆ ಸಲ್ಲಿಸಲು ಹಾಗೂ ಕ್ಯಾಂಡಲ್ ಹಚ್ಚಲು ಅವರು ಮುಕ್ತ ಅವಕಾಶ ಕಲ್ಪಿಸಿದ್ದಾರೆ. ವರ್ಷಕ್ಕೊಮ್ಮೆ ಫೆಬ್ರವರಿ ತಿಂಗಳಲ್ಲಿ ಕ್ರೈಸ್ತರು ಹಾಗೂ ಇತರರು ಇಲ್ಲಿ ಸಾಮೂಹಿಕ ಬಲಿಪೂಜೆ ಸಲ್ಲಿಸುತ್ತಾರೆ. ಹೀಗೆ ನಿಗಧಿತ ದಿನದಂದು ಪೂಜೆಗೆ ಬರುವ ನೂರಾರು ಮಂದಿಗೆ ಉಪಹಾರ ನೀಡಿ ಸತ್ಕರಿಸುವ ಮೂಲಕ ಬಸವಣ್ಣನವರ ಅನ್ನದಾಸೋಹ ಕರೆಯನ್ನು ಸಾಕಾರಗೊಳಿಸುವ ಈ ಕುಟುಂಬ ಅದರಲ್ಲೂ ಧನ್ಯತಾ ಭಾವವನ್ನು ಮೆರೆಯುತ್ತದೆ. ಇಲ್ಲಿ ಹರಕೆ ಹೊತ್ತರೆ ನೆರವೇರುತ್ತದೆ ಎನ್ನುವ ನಂಬಿಕೆ ಇರುವ ಬಹಳಷ್ಟು ಮಂದಿ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಹಾಗೆ ಬಂದವರನ್ನು ಆತ್ಮೀಯತೆಯಿಂದ ಮಾತನಾಡಿಸಿ ಕಳುಹಿಸುವುದು ಈ ಕುಟುಂಬದ ಮತ್ತೊಂದು ದೊಡ್ಡಗುಣ.

ಹೀಗೆ ಲಿಂಗಾಯಿತ ಸಮುದಾಯದ ಕುಟುಂಬಕ್ಕೆ ಸೇರಿದ ಮನೆಯ ಮುಂದೆ ಕ್ರೈಸ್ತರ ವಿಗ್ರಹ ಇರಬಾರದು ಎನ್ನುವ ಒತ್ತಾಯ ಇಡೀ ಕುಟುಂಬವನ್ನೇ ಕಂಗೆಡಿಸಿತ್ತು. ಇಂತಹ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಜಗದ್ಗುರು ಪರಮಪೂಜ್ಯ ಶ್ರೀ ಶ್ರೀ ಸಿದ್ದಗಂಗಾ ಸ್ವಾಮಿಗಳನ್ನು ಬೇಟಿ ಮಾಡಿ ಸಲಹೆ ಕೇಳಿದಾಗ, ಅದು ಅವರ ಸಮುದಾಯದ ನಂಬಿಕೆಯ ಪ್ರತೀಕ. ಅನ್ಯ ಧರ್ಮದ ವಿಚಾರಗಳಿಗೆ ಗೌರವ ಸಲ್ಲಿಸುವುದರಲ್ಲಿ ತಪ್ಪೇನೂ ಇಲ್ಲ. ವಿಗ್ರಹವನ್ನು ಅಲ್ಲಿಂದ ತೆಗೆಯಲೇಬೇಕಾದ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದ್ದರು ಎನ್ನುತ್ತಾರೆ ಬಿ.ವಿ ಜಯರಾಜ್.

ತಂದೆಯ ಹಾದಿಯಲ್ಲಿಯೇ ಮಗ: ಬಿ.ವಿ ಶಂಕರ್ ಈಗ ದೈವಾಧೀನರಾಗಿದ್ದಾರೆ. ಆದರೆ ಅವರು ನಡೆಸಿಕೊಂಡು ಬಂದ ರೀತಿ ರಿವಾಜುಗಳಲ್ಲೇನೂ ಬದಲಾವಣೆ ಆಗಿಲ್ಲ. ಚಿಕ್ಕಪ್ಪ ಬಿ.ವಿ ಜಯಣ್ಣ ಮಾರ್ಗದರ್ಶನದಲ್ಲಿ ಶಂಕರ್ರವರ ಏಕೈಕ ಪುತ್ರ ಬಿ.ಎಸ್ ಹೇಮಂತ್ ಅದನ್ನು ಮುಂದುವರೆಸುತ್ತಿದ್ದಾರೆ. ಅವರ ಪತ್ನಿ ಜ್ಯೋತಿ ಹೇಮಂತ್ ಕೂಡ ಪತಿಯ ಜೊತೆಯಲ್ಲಿ ತಮ್ಮ ತನ್ಮಯತೆಯನ್ನ ತೋರಿಸುತ್ತಾರೆ. ಇಂದಿಗೂ ಕೂಡ ದಿವಂಗತ ಕಾರ್ಲಿನ್ ಗೋವಿಯಸ್ ರವರ ಭಾವಚಿತ್ರಕ್ಕೆ ಈ ಕುಟುಂಬ ಹಿಂದೂ ಪದ್ದತಿಯಂತೆ ಪ್ರತಿನಿತ್ಯ ಹೂವುಗಳನ್ನಿಟ್ಟು ಗೌರವ ಸಲ್ಲಿಸುತ್ತಿದೆ.


Spread the love